ಆತ್ಮವಿಶ್ವಾಸವಿದ್ದರೆ ಕೊರೋನಾವಲ್ಲ ಸಾವನ್ನೂ ಹೊಡೆದೋಡಿಸಬಹುದು| 74ರ ಈ ವೃದ್ಧ ಇಡೀ ವಿಶ್ವಕ್ಕೇ ಮಾದರಿ| ಎರಡು ಬಾರಿ ಹೃದಯಾಘಾತ ಹಾಗೂ ಕ್ಯಾನ್ಸರ್ ಇದ್ದರೂ ಕೊರೋನಾ ಮಣಿಸಿದ ಹಿರಿಯ
ಅಹಮದಾಬಾದ್(ಮೇ.11): ಕ್ಯಾನ್ಸರ್ ನನಗೇನೂ ಹಾನಿ ಮಾಡಲು ಆಗಲಿಲ್ಲ ಅಂದ್ಮೇಲೆ, ಈ ಕೊರೋನಾ ಏನೂ ಅಲ್ಲ. ಈ ಮಾತುಗಳನ್ನು ಹೇಳಿದ್ದು 74 ವರ್ಷದ ಯೂಸುಫ್. ಕೊರೋನಾವನ್ನು ಮಣಿಸಿದ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಳೆದೊಂದು ವಾರದ ಹಿಂದೆ ಅವರಿಗೆ ಕೊರೋನಾ ಪಾಸಿಟಟಿವ್ ಇದೆ ಎಂದು ಅಜ್ವಾ ರೋಡ್‌ನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗಿತ್ತು.
ಯೂಸುಫ್ ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ, ಈ ಕ್ಯಾನ್ಸರ್‌ನಿಂದ ಹೊಟ್ಟೆಯೊಳಗಿನ ಅಂಗಗಳು ಹಾನಿಯಾಗುತ್ತವೆ. ಇಂತ ಮಾರಕ ರೋಗವಿದ್ದರೂ ಈ ವ್ಯಕ್ತಿ ಕೊರೋನಾ ಮಣಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಶನಿವಾರ ಮತ್ತೆ ಕೊರೋನಾ ವೈರಸ್ ಸಂಬಂಧಿತ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಎಂಬ ವರದಿ ಬಂದಿದೆ. ಇನ್ನು ಈ ಹಿಂದೆ ಯೂಸುಫ್‌ಗೆ ಎರಡು ಬಾರಿ ಹೃದಯಾಘಾತ ಕೂಡಾ ಆಗಿದೆ.
ಇನ್ನು ಚೈತನ್ಯತೆ, ಆತ್ಮವಿಶ್ವಾಸ ಹಾಗೂ ಬದುಕಬೇಕೆಂಬ ಆಸೆಯೇ ನನ್ನ ಸಾಮರ್ಥ್ಯದ ಹಿಂದಿನ ಗುಟ್ಟು. ನನ್ನ ಅರೋಗ್ಯ ಸ್ಥಿರವಾಗಿದೆ ಹಾಗೂ ನಾನು ಹೋಂ ಕ್ವಾರಂಟೈನ್‌ನಲ್ಲಿರಬಹುದೆಂದು ವೈದ್ಯರೇ ತಿಳಿಸಿರುವುದಾಗಿ ಯೂಸುಫ್ ಹೆಳಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರಿಗೂ ಅಚ್ಚರಿ
ಇನ್ನು ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಮೊಹಮ್ಮದ್ ಹುಸೈನ್ ಪ್ರತಿಕ್ರಿಯಿಸಿದ್ದು, 'ಅವರ ಧನಾತ್ಮಕ ಚಿಂತನೆ ಹಾಗೂ ಚೈತನ್ಯ ಒಂದೆಡೆ ಕೊರೋನಾ ಮಣಿಸಲು ಸಹಾಯ ಮಾಡಿದ್ದರೆ, ಮತ್ತೊಂದೆಡೆ ಅವರು ಪಾಲಿಸುತ್ತಿದ್ದ ಆಹಾರ ಕ್ರಮವೂ ಇದಕ್ಕೆ ಪೂರಕವಾಗಿತ್ತು' ಎಂದಿದ್ದಾರೆ.