ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಕೂಟದ ಹಲವು ನಾಯಕರು ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಗೈರಾಗುತ್ತೇವೆ ಎಂದು ಹೇಳಿರುವ ಬೆನ್ನಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ಆಗಿದೆ.
ನವದೆಹಲಿ: ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಕೂಟದ ಹಲವು ನಾಯಕರು ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಗೈರಾಗುತ್ತೇವೆ ಎಂದು ಹೇಳಿರುವ ಬೆನ್ನಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ಆಗಿದೆ. ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಆಗಿದೆ.
ಇಂದು ಸಂಜೆ 7.15ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಜೊತೆಗೆ ಪ್ರಧಾನಿ ಸಂಪುಟ ಸೇರಲಿರುವ ಕೆಲ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಭಾರತದ ಮಿತ್ರರಾಷ್ಟ್ರಗಳ ಗಣ್ಯರು ಕೂಡ ಭಾಗಿಯಾಗಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ, ಭಾರತದ ವಿರುದ್ಧ ಸದಾ ಕಿಡಿಕಾರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ದ್ವೀಪರಾಷ್ಟ್ರ ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾರಿಶಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಸೇರಿದಂತೆ ಹಲವು ವಿದೇಶಿ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಕೂಡ ಈ ನಾಯಕರು ಪಾಲ್ಗೊಳ್ಳಲಿದ್ದಾರೆ.
ನಮಗೆ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಸಿಕ್ಕಿಲ್ಲ:
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ಕೂಡ ತಮಗೆ ಹಾಗೂ ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಈ ಬಾರಿ ಬಿಜೆಪಿ 240 ಸೀಟುಗಳನ್ನು ಗೆದ್ದಿದೆ. ಕೇಂದ್ರದಲ್ಲಿ ಸ್ವಾತಂತ್ರವಾಗಿ ಅಧಿಕಾರ ಸ್ಥಾಪನೆಗೆ 272 ಸೀಟುಗಳನ್ನು ಪಡೆಯುವುದು ಅಗತ್ಯ. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಬಿಜೆಪಿ ಸ್ವಾತಂತ್ರವಾಗಿ ಅಧಿಕಾರ ಹಿಡಿಯುವುದಕ್ಕೆ ತಡೆಯೊಡ್ಡಿದೆ. ಹೀಗಾಗಿ ಬಿಜೆಪಿ ಎನ್‌ಡಿಎ ತನ್ನ ಮಿತ್ರಪಕ್ಷಗಳ ಮೊರೆ ಹೋಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹಾಗೂ ಬಿಹಾರ ಸಿಎಂ ಜೆಡಿಯು ನಾಯಕ ನಿತೀಶ್ ಕುಮಾರ್ ಬೆಂಬಲ ನೀಡಿದ್ದು,ಕಿಂಗ್ ಮೇಕರ್ ಆಗಿದ್ದಾರೆ. ಇತ್ತ ಇಂಡಿಯಾ ಕೂಟದ ಕಾಂಗ್ರೆಸ್ 100 ಸ್ಥಾನ ಗಳಿಸಿದ್ದು, ಸಮಾಜವಾದಿ ಪಕ್ಷ 37 ಸ್ಥಾನ, ತೃಣಮೂಲ ಕಾಂಗ್ರೆಸ್ 29, ಡಿಎಂಕೆ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮೋದಿ ಪ್ರಮಾಣ ವಚನಕ್ಕೆ ಎಚ್‌ಡಿಕೆ ಕುಟುಂಬ ದಿಲ್ಲಿಗೆ: ಬಿಜೆಪಿಯಿಂದ ಕರೆ?