ಲಾಕ್‌ಡೌನ್‌ ಎಫೆಕ್ಟ್: ಮುಂಬೈ, ಸೂರತ್‌ನಲ್ಲಿ ವಲಸಿಗರ ‘ದಂಗೆ’!

Published : Apr 15, 2020, 07:24 AM IST
ಲಾಕ್‌ಡೌನ್‌ ಎಫೆಕ್ಟ್: ಮುಂಬೈ, ಸೂರತ್‌ನಲ್ಲಿ ವಲಸಿಗರ ‘ದಂಗೆ’!

ಸಾರಾಂಶ

ಲಾಕ್‌ಡೌನ್‌ ಎಫೆಕ್ಟ್: ಮುಂಬೈ, ಸೂರತ್‌ನಲ್ಲಿ ವಲಸಿಗರ ‘ದಂಗೆ’!| ನಿರ್ಬಂಧ ಮುಂದುವರಿಕೆಯಿಂದ ಕಂಗೆಟ್ಟ ಕಾರ್ಮಿಕರು| ತವರಿಗೆ ತೆರಳಲು ಅವಕಾಶಕ್ಕಾಗಿ ಸಹಸ್ರಾರು ಜನರ ಪ್ರತಿಭಟನೆ| ಮುಂಬೈನಲ್ಲಿ ಲಾಠಿಚಾಜ್‌ರ್‍, ಸೂರತಲ್ಲಿ ಮನವೊಲಿಕೆ ಯಶಸ್ವಿ

ಸೂರತ್‌(ಏ.15): ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಮೇ 3ರವರೆಗೂ ಲಾಕ್‌ಡೌನ್‌ ವಿಸ್ತರಣೆ ಮಾಡಿದ ಬೆನ್ನಲ್ಲೇ, ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿರುವ ವಿವಿಧ ರಾಜ್ಯಗಳ ಸಾವಿರಾರು ವಲಸಿಗ ಕಾರ್ಮಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಈ ಪ್ರತಿಭಟನಾಕಾರರ ಮನವೊಲಿಕೆ ಯತ್ನ ಕೈಗೂಡದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರೆ, ಸೂರತ್‌ನಲ್ಲಿ ಪೊಲೀಸರ ಮನವೊಲಿಕೆ ಬಳಿಕ ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಕ್ಕೆ ತೆರಳಿದ್ದಾರೆ.

ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮುಂಬೈನಂಥ ಘಟನೆಗಳು ಕೊರೋನಾ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ದುರ್ಬಲಗೊಳಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆತಂಕ:

ಕೇಂದ್ರ ಸರ್ಕಾರ ಲಾಕ್‌ಡೌನ್‌ ವಿಸ್ತರಿಸಿದ ಬೆನ್ನಲ್ಲೇ, ಆತಂಕಕ್ಕೆ ಒಳಗಾದ ಸಾವಿರಾರು ಕಾರ್ಮಿಕರು ಮಂಗಳವಾರ ಥಾಣೆ ಜಿಲ್ಲೆಯ ಮುಂಬ್ರಾ ಮತ್ತು ಮುಂಬೈನ ಬಾಂದ್ರಾದ ಬಸ್‌ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ನೆರೆದು ಪ್ರತಿಭಟನೆ ನಡೆಸಿದರು. ಉದ್ಯೋಗವಿಲ್ಲದೇ ಕೈ ಕಾಲಿಯಾಗಿದೆ. ಆಹಾರ ಕೊಳ್ಳಲು ಹಣವಿಲ್ಲ. ಮತ್ತೊಂದೆಡೆ ಮನೆ ಮಾಲೀಕರು ಬಾಡಿಗೆ ಕೇಳುತ್ತಿದ್ದಾರೆ. ಇನ್ನು ಇಲ್ಲಿರುವುದು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನಮಗೆ ತವರು ರಾಜ್ಯಗಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ನೆರೆದಿದ್ದ ದಿನ ಕೂಲಿ ಕಾರ್ಮಿಕರನ್ನು ಪೊಲೀಸರು ಲಾಠಿಚಾಜ್‌ರ್‍ ಮಾಡಿ ತೆರವುಗೊಳಿಸಿದರು.

ಈ ಘಟನೆಯು, ಕೊರೋನಾ ಹಬ್ಬುವಿಕೆ ತಡೆಗಾಗಿ ಮೋದಿ ಅವರು ಮಾ.24ರಂದು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ ಬಳಿಕ, ಆತಂಕಕ್ಕೀಡಾದ ದಿನಗೂಲಿ ಕಾರ್ಮಿಕರು ತಮ್ಮ ಬಟ್ಟೆಬರೆ ಹಾಗೂ ಮಕ್ಕಳನ್ನು ಹೊತ್ತು ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ ವಿವಿಧ ಭಾಗಗಳಲ್ಲಿ ತಮ್ಮ ಸ್ವಗ್ರಾಮದತ್ತ ಹಿಂಡುಹಿಂಡಾಗಿ ಹೊರಟಿದ್ದ ಘಟನೆಯನ್ನು ನೆನಪಿಸುವಂತಿತ್ತು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌, ‘ಮೋದಿ ಅವರು ಲಾಕ್‌ಡೌನ್‌ ತೆರವುಗೊಳಿಸುತ್ತಾರೆ. ಆ ನಂತರ ತಾವು ತಮ್ಮ ತವರು ಸೇರಬಹುದು ಎಂಬ ಕಾರಣಕ್ಕೆ ಮುಂಬೈನಲ್ಲಿ ಕೂಲಿ ಕೆಲಸ ಮಾಡುವ ಹೊರ ರಾಜ್ಯಗಳ ಕೂಲಿಕಾರ್ಮಿಕರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಲಾಕ್‌ಡೌನ್‌ ತೆರವು ಮಾಡಿಲ್ಲದಿರುವ ಬಗ್ಗೆ ಪೊಲೀಸರು ಜನರಿಗೆ ಮನವರಿಕೆ ಮಾಡಿದ್ದಾರೆ. ಅಲ್ಲದೆ, ಕೂಲಿ ಕಾರ್ಮಿಕರಿಗೆ ಆಹಾರ ಹಾಗೂ ವಸತಿ ವ್ಯವಸ್ಥೆ ನೀಡುವುದಾಗಿ’ ಭರವಸೆ ನೀಡಿದ್ದಾರೆ.

ಈ ನಡುವೆ ಗುಜರಾತ್‌ನ ಸೂರತ್‌ನಲ್ಲೂ ಮಂಗಳವಾರ ಸಾವಿರಾರು ವಲಸೆ ಕಾರ್ಮಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ತವರು ರಾಜ್ಯಗಳಿಗೆ ತೆರಳಲು ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ. ಅಲ್ಲದೆ ತಾವು ವಾಸವಿರುವ ಪ್ರದೇಶಗಳಲ್ಲಿ ಸೂಕ್ತ ಆಹಾರ ನೀಡುತ್ತಿಲ್ಲ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸೂಕ್ತ ಆಹಾರ ಒದಗಿಸುವ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು