ಕೊರೋನಾಕ್ಕೆ ಮತ್ತೊಂದು ಔಷಧ| ರೆಮ್‌ಡೆಸಿವಿರ್‌ನ ಜನರಿಕ್ ಮಾದರಿ ‘ಕೋವಿಫರ್’ಗೆ ಸರ್ಕಾರ ಸಮ್ಮತಿ| ತೀವ್ರ ಅಸ್ವಸ್ಥರಾದವರಿಗೆ ಪ್ರಯೋಗ|
ನವದೆಹಲಿ(ಜೂ.22): ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಅಮೆರಿಕದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ರೆಮ್‌ಡೆಸಿವಿರ್ ಇಂಜೆಕ್ಷನ್‌ನ ಜನರಿಕ್ ಸ್ವರೂಪ ‘ಕೋವಿಫರ್’ ಇಂಜೆಕ್ಷನ್‌ಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಒಪ್ಪಿಗೆ ನೀಡಿದೆ. ಹೆಟೆರೋ ಔಷಧ ಕಂಪನಿ ಉತ್ಪಾದಿಸುವ ಈ ಇಂಜೆಕ್ಷನ್‌ನ 100 ಎಂ.ಜಿ. ಒಂದು ಡೋಸ್‌ನ ಬೆಲೆ 5000 ರು.ನಿಂದ 6000 ರು. ಇರಲಿದ್ದು, ಭಾರತದಲ್ಲಿ ಇನ್ನುಮುಂದೆ ಮಾರಾಟವಾಗಲಿದೆ.
ಕೊರೋನಾ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಕಂಪನಿಯ ಫಾವಿಪಿರಾವಿರ್ ಮಾತ್ರೆಯನ್ನು (1 ಮಾತ್ರೆಗೆ 103 ರು.) ಭಾರತದಲ್ಲಿ ಮಾರಾಟ ಮಾಡಲು ಶುಕ್ರವಾರವಷ್ಟೇ ಡಿಸಿಜಿಐ ಒಪ್ಪಿಗೆ ನೀಡಿತ್ತು. ಶನಿವಾರ ಅದು ‘ಫ್ಯಾಬಿಫ್ಲೂ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯೂ ಆಗಿತ್ತು. ಅದರ ಬೆನ್ನಲ್ಲೇ ಹೆಟೆರೋ ಕಂಪನಿಗೆ ಭಾನುವಾರ ಒಪ್ಪಿಗೆ ದೊರೆತಿದ್ದು, ಕೊರೋನಾ ಚಿಕಿತ್ಸೆಗೆಂದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಔಷಧ ಇದಾಗಿದೆ.
ಗುಡ್ ನ್ಯೂಸ್: ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.!
ಕೋವಿಫರ್ ಇಂಜೆಕ್ಷನ್ ಔಷಧದಂಗಡಿಗಳಲ್ಲಿ ಜನರಿಗೆ ಮುಕ್ತವಾಗಿ ದೊರೆಯುವುದಿಲ್ಲ. ಆಸ್ಪತ್ರೆಗಳು ಮತ್ತು ಅಧಿಕೃತ ವೈದ್ಯರ ಮೂಲಕವೇ ರೋಗಿಗಳಿಗೆ ಇದು ಲಭ್ಯವಾಗಲಿದೆ. ಸದ್ಯ ಹೈದರಾಬಾದ್‌ನಲ್ಲಿರುವ ಹೆಟೆರೋ ಕಂಪನಿಯ ಘಟಕದಲ್ಲಿ ಇದು ಉತ್ಪಾದನೆಯಾಗುತ್ತಿದೆ. ಕೆಲ ವಾರಗಳಲ್ಲಿ 1 ಲಕ್ಷ ಡೋಸ್ ಉತ್ಪಾದಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಕೊರೋನಾ ಸೋಂಕು ದೃಢಪಟ್ಟವಯಸ್ಕರು, ಮಕ್ಕಳು ಹಾಗೂ ತೀವ್ರ ಸೋಂಕಿನ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಇದನ್ನು ನೀಡಬಹುದು ಎಂದು ಡಿಸಿಜಿಐ ತನ್ನ ಅನುಮತಿ ಪತ್ರದಲ್ಲಿ ಹೇಳಿದೆ.
ಕೋವಿಫರ್ ಔಷಧದ ಮೂಲ ಹಕ್ಕುಸ್ವಾಮ್ಯ ಅಮೆರಿಕದ ಗಿಲಿಯಾಡ್ ಕಂಪನಿಯ ಬಳಿಯಿದೆ. ಆ ಕಂಪನಿಯು ಭಾರತದಲ್ಲಿ ಇದನ್ನು ಉತ್ಪಾದಿಸಲು ಹೆಟೆರೋ, ಸಿಪ್ಲಾ ಹಾಗೂ ನಂಜನಗೂಡಿನಲ್ಲಿ ಘಟಕ ಹೊಂದಿರುವ ಜ್ಯುಬಿಲಿಯಂಟ್ ಲೈಫ್ ಸೈನ್ಸಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.
ಕೊರೋನಾ ಜೀವ ರಕ್ಷಕ ಇಂಜೆಕ್ಷನ್‌ಗೆ ಕೇವಲ 10ರೂ!
ರೆಮ್‌ಡೆಸಿವಿರ್ ವೈರಾಣು ನಿಗ್ರಹ ಔಷಧವಾಗಿದ್ದು, ಅಮೆರಿಕದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ರೋಗಿಗಳಿಗೆ ಬಳಸಿದಾಗ ಉತ್ತಮ ಫಲಿತಾಂಶ ಬಂದಿತ್ತು. ಈ ಇಂಜೆಕ್ಷನ್ ಅನ್ನು 7 ಡೋಸ್ ನೀಡಬೇಕಾಗುತ್ತದೆ ಎಂದು ವರದಿಗಳು ಈ ಹಿಂದೆ ತಿಳಿಸಿದ್ದವು.