ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ!

By Kannadaprabha NewsFirst Published May 30, 2021, 7:16 AM IST
Highlights

* ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ

* ಕೋವಿಡ್‌ ಗುಣಮುಖರಿಗೆ ಇನ್ನೊಂದು ಮಾರಕ ಸೋಂಕು

* 8 ಜನಕ್ಕೆ ಆಸ್ಪರ್‌ಗಿಲೋಸಿಸ್‌ ಶಿಲೀಂಧ್ರ: ಆಸ್ಪತ್ರೆಗೆ ದಾಖಲು

ಅಹಮದಾಬಾದ್‌(ಮೇ.30): ಕಪ್ಪು, ಬಿಳಿ ಹಾಗೂ ಹಳದಿ ಶಿಲೀಂಧ್ರ ಸೋಂಕಿನ ಬಳಿಕ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಮತ್ತೊಂದು ಫಂಗಸ್‌ ಸೋಂಕು ಕಂಡುಬಂದಿದೆ. ಆಸ್ಪರ್‌ಗಿಲೋಸಿಸ್‌ ಎಂಬ ಈ ಸೋಂಕಿಗೆ ಗುಜರಾತಿನಲ್ಲಿ 8 ಮಂದಿ ತುತ್ತಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಲ್ಯಾಕ್ ಫಂಗಸ್‌ ರೀತಿಯಲ್ಲೇ ಕೊರೋನಾದಿಂದ ಗುಣಮುಖರಾದವರಲ್ಲಿ ಆಸ್ಪರ್‌ಗಿಲೋಸಿಸ್‌ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಗುಜರಾತಿನ ವಡೋದರಾದಲ್ಲಿ ಎಲ್ಲ 8 ಆಸ್ಪರ್‌ಗಿಲೋಸಿಸ್‌ ಸೋಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಶುಶ್ರೂಷೆ ಮಾಡಲಾಗುತ್ತಿದೆ.

ದೇಶದಲ್ಲಿ ಈವರೆಗೆ 11 ಸಾವಿರ ಮಂದಿಯಲ್ಲಿ ಬ್ಲ್ಯಾಕ್ ಫಂಗಸ್‌ ಕಾಣಿಸಿಕೊಂಡಿದ್ದು, ಅವರ ಚಿಕಿತ್ಸೆಗೆ ಔಷಧ ಕೊರತೆಯಾಗಿದೆ. ಈ ನಡುವೆಯೇ ವೈಟ್‌ ಫಂಗಸ್‌ ಹಾಗೂ ಯೆಲ್ಲೋ ಫಂಗಸ್‌ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಮತ್ತೊಂದು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿರುವುದರಿಂದ ಕೊರೋನಾ ರೋಗಿಗಳು ಭಯಪಡುವಂತಾಗಿದೆ.

‘ಆಸ್ಪರ್‌ಗಿಲೋಸಿಸ್‌ ಸೋಂಕು ಬ್ಲ್ಯಾಕ್ ಫಂಗಸ್‌ನಷ್ಟುಅಪಾಯಕಾರಿಯೇನಲ್ಲ. ಆದರೆ ಸ್ವಲ್ಪ ಎಚ್ಚರ ವಹಿಸಿದರೂ ಇದು ಕೂಡ ಪ್ರಾಣಕ್ಕೆ ಕುತ್ತು ತರಬಹುದು’ ಎನ್ನುತ್ತಾರೆ ತಜ್ಞರು.

ಯಾರಲ್ಲಿ ಕಾಣಿಸಿಕೊಳ್ಳುತ್ತೆ?:

ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಆಸ್ಪರ್‌ಗಿಲ್ಲಸ್‌ ಎಂಬ ಶಿಲೀಂಧ್ರ ಇರುತ್ತದೆ. ಅದರ ಕಣಗಳನ್ನು ಪ್ರತಿನಿತ್ಯ ಜನರು ಗಾಳಿ ಮೂಲಕ ಸೇವಿಸುತ್ತಿರುತ್ತಾರೆ. ಅದರಿಂದ ಜನರಿಗೆ ಅನಾರೋಗ್ಯವೇನೂ ಉಂಟಾಗುವುದಿಲ್ಲ. ಆದರೆ ದುರ್ಬಲ ರೋಗ ನಿರೋಧಕ ಶಕ್ತಿ ಅಥವಾ ಶ್ವಾಸಕೋಶ ಸಮಸ್ಯೆ ಹೊಂದಿದವರಲ್ಲಿ ಆಸ್ಪರ್‌ಗಿಲ್ಲಸ್‌ನಿಂದ ಆರೋಗ್ಯ ಸಮಸ್ಯೆಯಾಗಬಹುದು. ಅಲರ್ಜಿಯ ಲಕ್ಷಣಗಳು ಕಂಡುಬರಬಹುದು. ಶ್ವಾಸಕೋಶ ಸೇರಿದಂತೆ ದೇಹದ ವಿವಿಧ ಅಂಗಗಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಕೊರೋನಾ 2ನೇ ಅಲೆ ಕಾಣಿಸಿಕೊಂಡ ಬಳಿಕ ದೇಶದಲ್ಲಿ ಶಿಲೀಂಧ್ರ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಚಿಕಿತ್ಸೆ ವೇಳೆ ಸ್ಟಿರಾಯ್ಡ್‌ ಪಡೆದವರು ಹಾಗೂ ರೋಗ ನಿರೋಧಕ ಶಕ್ತಿ ಕುಂದಿದವರಲ್ಲಿ ಶಿಲೀಂಧ್ರ ಸೋಂಕು ಕಂಡುಬರುತ್ತಿದೆ. ಆಮ್ಲಜನಕ ಸರಬರಾಜು ವೇಳೆ ಬಳಸಲಾಗುವ ನಾನ್‌ ಸ್ಟೆರೈಲ್‌ ನೀರಿನಿಂದಲೂ ಈ ಸೋಂಕು ಹರಡುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

click me!