ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?| ರಾಮಮಂದಿರ ನಿರ್ಮಾಣ ಪರ ತೀರ್ಪು ಬಂದಿದೆ| ‘ಶೌರ್ಯ ದಿವಸ’ ಅಪ್ರಸ್ತುತ: ನ್ಯಾಸ ಅಧ್ಯಕ್ಷ
ಲಖನೌ[ಡಿ.01]: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಕ್ಕೆ ಪ್ರತಿ ವರ್ಷ ಡಿಸೆಂಬರ್ 6ರಂದು ಹಿಂದು ಸಂಘಟನೆಗಳು ನಡೆಸುತ್ತಿದ್ದ ‘ಶೌರ್ಯ ದಿವಸ’ದ ಆಚರಣೆ ಈ ಬಾರಿ ನಡೆಯುವ ಸಾಧ್ಯತೆ ಇಲ್ಲ.
ರಾಮಜನ್ಮಭೂಮಿ ನ್ಯಾಸ್ ಸಂಸ್ಥೆಯ ಮುಖ್ಯಸ್ಥ ಮಹಾಂತ ನೃತ್ಯಗೋಪಾಲ ದಾಸ್ ಹಾಗೂ ವಿಎಚ್‌ಪಿ ವಕ್ತಾರ ಶರದ್ ಶರ್ಮಾ ಶನಿವಾರ ಈ ಸುಳಿವು ನೀಡಿದ್ದಾರೆ.
‘ಸುಪ್ರೀಂ ಕೋರ್ಟು ಇತ್ತೀಚೆಗೆ ರಾಮಮಂದಿರ ನಿರ್ಮಾಣ ಪರ ತೀರ್ಪು ನೀಡಿದೆ. ಹೀಗಾಗಿ ಈ ಸಂದರ್ಭದಲ್ಲಿ ಡಿಸೆಂಬರ್ 6ರಂದು ಶೌರ್ಯ ದಿವಸ ಆಚರಣೆ ಅಥವಾ ಸಂಭ್ರಮಾಚರಣೆ ಅಪ್ರಸ್ತುತವಾಗಿದೆ’ ಎಂದು ದಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಡಿ.6ರಂದು ಶಾಂತಿ ಭಂಗವಾಗುವಂಥ ಯಾವುದೇ ಕಾರ್ಯಕ್ರಮ ಆಯೋಜನೆ ಬೇಡ. ಅಂದು ಜನರು ತಮ್ಮ ಮನೆಯೊಳಗೇ ರಾಮನ ಭಜನೆ ಮಾಡಿ ಆರತಿ ಬೆಳಗಿ ಸಾಮಾಜಿಕ ಶಾಂತಿಯ ಸಂದೇಶ ಸಾರಬೇಕು’ ಎಂದು ಅವರು ಕರೆ ನೀಡಿದ್ದಾರೆ.
ವಿಎಚ್‌ಪಿ ವಕ್ತಾರ ಶರದ್ ಶರ್ಮಾ ಕೂಡ ಇದೇ ಮಾತು ಹೇಳಿದ್ದು, ‘ಅಂದು ಶೌರ್ಯ ದಿನಾಚರಣೆ ನಡೆಸುವುದಿಲ್ಲ’ ಎಂದು ತಿಳಿಸಿದ್ದಾರೆ.
ಡಿ.6 ಅನ್ನು ಪ್ರತಿ ವರ್ಷ ಮುಸ್ಲಿಂ ಸಂಘಟನೆಗಳು ಆ ದಿನ ‘ದುಃಖದ ದಿನ’ವನ್ನಾಗಿ ಆಚರಿಸುತ್ತವೆ.