ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ: ಕೇಂದ್ರ ವರ್ಸಸ್‌ ಮಮತಾ!

By Suvarna NewsFirst Published Dec 12, 2020, 8:32 AM IST
Highlights

ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ| ಕೇಂದ್ರ ವರ್ಸಸ್‌ ಮಮತಾ| ಬಂಗಾಳ ಸಿಎಸ್‌, ಡಿಜಿಪಿಗೆ ಕೇಂದ್ರ ಬುಲಾವ್‌| ದೆಹಲಿಗೆ ಕಳುಹಿಸದೇ ಇರಲು ದೀದಿ ನಿರ್ಧಾರ

ನವದೆಹಲಿ/ಕೋಲ್ಕತಾ(ಡಿ.12): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ವಾಹನಗಳ ಮೇಲೆ ಗುರುವಾರ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲು ಡಿ.14ರಂದು ಖುದ್ದು ಹಾಜರಾಗುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಿದೆ.

ರಾಜ್ಯದಲ್ಲಿನ ರಾಜಕೀಯ ಹಿಂಸಾಚಾರ ಮತ್ತು ಗುರುವಾರದ ದಾಳಿ ಕುರಿತು ರಾಜ್ಯಪಾಲ ಜಗದೀಪ್‌ ಧನ್‌ಖರ್‌ ವರದಿ ಆಧರಿಸಿ ಗÜೃಹ ಸಚಿವಾಲಯ ಈ ನೋಟಿಸ್‌ ಜಾರಿ ಮಾಡಿದೆ. ಆದರೆ ಇದಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸಡ್ಡು ಹೊಡೆದಿದ್ದು, ಅಧಿಕಾರಿಗಳನ್ನು ಕಳುಹಿಸದೇ ಇರಲು ನಿರ್ಧರಿಸಿದೆ. ಡಿ.14ರಂದು ರಾಜ್ಯ ಸರ್ಕಾರ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗಬೇಕಿರುವ ಕಾರಣ ದೆಹಲಿಗೆ ಬರಲಾಗುತ್ತಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಹೀಗಾಗಿ ಈ ವಿಷಯ ಮತ್ತೊಂದು ಸುತ್ತಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ನಡುವೆ ಕೇಂದ್ರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಟಿಎಂಸಿ, ರಾಜ್ಯದ ವ್ಯವಹಾರಗಳಲ್ಲಿ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಡುವ ಸನ್ನಿವೇಶವನ್ನು ಕೇಸರಿ ಪಕ್ಷ ಸೃಷ್ಟಿಸುತ್ತಿದೆ. ಇಂಥ ನೋಟಿಸ್‌ ಅಸಾಂವಿಧಾನಿಕ ಎಂದು ಟೀಕಿಸಿದೆ.

7 ಜನರ ಬಂಧನ:

ಈ ನಡುವೆ ಗುರುವಾರದ ದಾಳಿ ಪ್ರಕರಣ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿರುವ ಬಂಗಾಳ ಪೊಲೀಸರು 3 ಎಫ್‌ಐಆರ್‌ ದಾಖಲಿಸಿ, 7 ಜನರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಈ ಪೈಕಿ ಒಂದು ಎಫ್‌ಐಆರ್‌ ಅನ್ನು ನಡ್ಡಾ ವಾಹನವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಬಿಜೆಪಿ ನಾಯಕ ರಾಕೇಶ್‌ ಸಿಂಗ್‌ ಮೇಲೆ ಪ್ರಚೋದನಾಕಾರಿ ಭಾಷಣ ಮಾಡಿದ ಕಾರಣಕ್ಕಾಗಿ ದಾಖಲಿಸಲಾಗಿದೆ.

ಬೆಂಕಿಯ ಜತೆ ಮಮತಾ ಆಡಬಾರದು: ಗೌರ್ನರ್‌

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ವಾಹನಗಳ ಮೇಲೆ ಗುರುವಾರ ನಡೆದ ದಾಳಿ ಪ್ರಕರಣ ಸಂಬಂಧ ರಾಜ್ಯಪಾಲ ಧನ್‌ಖರ್‌ ಕೇಂದ್ರಕ್ಕೆ ವರದಿಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಉಲ್ಲಂಘನೆ ಮಾಡುವವರಿಗೆ ರಾಜ್ಯದಲ್ಲಿ ಪೊಲೀಸ್‌ ಮತ್ತು ಆಡಳಿತದ ರಕ್ಷಣೆ ಇದೆ. ಇದನ್ನು ವಿರೋಧಿಸುವವರನ್ನು ಹತ್ತಿಕ್ಕಲಾಗುತ್ತಿದೆ. ರಾಜಭವನಕ್ಕೆ ಸ್ಪಂದಿಸದೆ ಇರುವ ಮುಖ್ಯಮಂತ್ರಿಗಳ ನಿಲುವು ಸರ್ಕಾರವು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂಬುದರ ಸೂಚಕ. ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ರಾಜ್ಯಪಾಲರ ಕಚೇರಿ ಅಂಚೆ ಕಚೇರಿಯಂತಲ್ಲ. ರಾಜ್ಯದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವಾಗ ನಾವು ರಾಜಭವನದಲ್ಲಿ ಅಡ್ಡಾಡಿಕೊಂಡು ಇರಲಾಗುವುದಿಲ್ಲ. ದಾಳಿಯ ಘಟನೆಯ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದ್ದು, ನಾನು ವಿಸ್ತೃತವಾದ ವರದಿ ಸಲ್ಲಿಸಿದ್ದೇನೆ ಎಂದು ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಎಷ್ಟೆಲ್ಲಾ ಹಿಂಸಾಚಾರ ನಡೆದರೂ, ಬೊಕ್ಕಸದಿಂದ ಹಣಪಡೆಯುವ ಅಧಿಕಾರಿಗಳು ಏನೂ ನಡೆದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ರಾಜಕೀಯ ಸೇವಕರ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರಲಾಗದು. ಹೊಣೆಗಾರಿಕೆಯನ್ನು ಎಲ್ಲರ ಮೇಲೂ ಹೊರಿಸಲಾಗುವುದು. ಮಮತಾ ಬ್ಯಾನರ್ಜಿ ಅವರು ಬೆಂಕಿಯ ಜೊತೆ ಆಡುವುದುನ್ನು ಬಿಡಬೇಕು ಎಂದು ರಾಜ್ಯಪಾಲರು ಕಿಡಿಕಾರಿದ್ದಾರೆ.

ನೋಟಿಸ್‌:

ರಾಜ್ಯಪಾಲರ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಡಿ.14ರಂದು ತನ್ನ ಮುಂದೆ ಹಾಜರಾಗಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡುವಂತೆ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲ್ಪನ್‌ ಬಂಡೋಪಾಧ್ಯಾಯ ಮತ್ತು ಪೊಲೀಸ್‌ ಮುಖ್ಯಸ್ಥ ವೀರೇಂದ್ರ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಈ ಇಬ್ಬರೂ ಅಧಿಕಾರಿಗಳು ಡಿ.14ರ ಸೋಮವಾರ ದೆಹಲಿಗೆ ತೆರಳಿ ರಾಜ್ಯದಲ್ಲಿನ ಕಾನೂನು ಪರಿಸ್ಥಿತಿ, ರಾಜಕೀಯ ಹಿಂಸಾಚಾರ ಮತ್ತು ಇತರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುವ ಸಾಧ್ಯತೆ ಇದೆ.

ಟಿಎಂಸಿ ಆಕ್ರೋಶ:

ಈ ನಡುವೆ ನೋಟಿಸ್‌ ನೀಡಿದ ಕೇಂದ್ರದ ಕ್ರಮವನ್ನು ಟಿಎಂಸಿ ನಾಯಕರಾದ ಸುಗತ ರಾಯ್‌ ಮತ್ತು ಕಲ್ಯಾಣ್‌ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ. ಇದು ರಾಜ್ಯದ ಆಡಳಿತದಲ್ಲಿ ಕೇಂದ್ರದ ಅನಾವಶ್ಯಕ ಹಸ್ತಕ್ಷೇಪ. ನಡ್ಡಾ ಅವರ ಬೆಂಗಾವಲು ವಾಹನಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಕ್ರಿಮಿನಲ್‌ ಮತ್ತು ಗೂಂಡಾಗಳಿದ್ದರು. ಅವರೆಲ್ಲಾ ಹಿಂಸೆಯನ್ನು ಪ್ರಚೋದಿಸುವ ಮಾರಕಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದರು ಎಂದು ಆರೋಪಿಸಿದ್ದಾರೆ.

click me!