ಏಮ್ಸ್‌ ಬಳಿಕ ಕೋವಿಡ್‌ ಲಸಿಕೆಯ ‘ಕೋವಿನ್‌’ ವೆಬ್‌ ಮಾಹಿತಿ ಹ್ಯಾಕ್‌..!

By Kannadaprabha NewsFirst Published Dec 14, 2022, 9:50 AM IST
Highlights

ಕೋವಿಡ್‌ ಲಸಿಕೆಯ ‘ಕೋವಿನ್‌’ ವೆಬ್‌ ಮಾಹಿತಿ ಹ್ಯಾಕ್‌ ಆಗಿದೆ ಎಂದು ವರದಿಗಳು ಹೇಳುತ್ತಿದ್ದು, ಶಂಕಿತ ಇರಾನಿ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ ಎನ್ನಲಾಗಿದೆ. ಕೋವಿನ್‌ ದತ್ತಾಂಶ, ವೈದ್ಯ ಸಿಬ್ಬಂದಿ ಫೋನ್‌ ಸಂಖ್ಯೆ, ವಿವರ ಬಹಿರಂಗವಾಗಿದೆ ಎಂದು ಅವರು ಹೇಳಿದ್ದು,ಈ ಹಿನ್ನೆಲೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಜ್ಞರು ಹೇಳಿದ್ದಾರೆ. 

ನವದೆಹಲಿ: ಭಾರತ (India) ಒಂದು ಕಡೆ ಗಡಿಯಲ್ಲಿ ಚೀನಾ ಸೇನೆಯೊಂದಿಗೆ (China Army) ಸೆಣಸಾಡುತ್ತಿದ್ದರೆ, ಮತ್ತೊಂದೆಡೆ ಭಾರತದ ಆರೋಗ್ಯ ಕ್ಷೇತ್ರದ (Health Sector) ಸರ್ವರ್‌ಗಳು ಸೈಬರ್ ಉಗ್ರರ (Cyber Terrorists) ವಿರುದ್ಧ ಸೆಣಸುತ್ತಿವೆ. ದೆಹಲಿಯ ಏಮ್ಸ್ (AIIMS Delhi) ಮೇಲೆ ಸೈಬರ್ ದಾಳಿ (Cyber Attack) ನಡೆದು ಕೆಲವೇ ವಾರಗಳು ಕಳೆದಿದ್ದು, ಇದೀಗ ಸೈಬರ್ ಉಗ್ರರು ಕೋವಿನ್‌ (COWIN) ಪ್ಲಾಟ್‌ಫಾರ್ಮ್ ಮೇಲೆ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿ ನಡೆಸಿದ್ದಾರೆ ಎಂದು  ವರದಿಯಾಗಿದೆ.

ಇತ್ತೀಚೆಗೆ ಶಂಕಿತ ಚೀನಾ ಹ್ಯಾಕರ್‌ಗಳು (Chinese Hackers) ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆಯ ಸರ್ವರ್‌ಗೆ ಕನ್ನ ಹಾಕಿದ ಬೆನ್ನಲ್ಲೇ, ಕೋವಿಡ್‌ ಲಸಿಕಾಕರಣದ ಮಾಹಿತಿ ಸಂಗ್ರಹಿಸಿಡುವ ‘ಕೋವಿನ್‌’ ವೆಬ್‌ಸೈಟ್‌ ಮೇಲೂ ಸೈಬರ್‌ ದಾಳಿ ನಡೆದಿದೆ. ಈ ಬಾರಿ ಇರಾನಿ ಹ್ಯಾಕರ್‌ಗಳು ಹ್ಯಾಕ್‌ ಮಾಡಿರುವ ಶಂಕೆ ಇದೆ. ‘ಕೋವಿನ್‌ ಪ್ಲಾಟ್‌ಫಾರಂನ ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್‌ ನನಗೆ ಲಭಿಸಿವೆ. ಇದರ ಜತೆ ಭಾರತದ ಆರೋಗ್ಯ ಸಿಬ್ಬಂದಿಯ ವಿವರಗಳೂ ಇದರಲ್ಲಿ ದೊರಕಿವೆ. ಇವನ್ನೆಲ್ಲ ನಾನು ಮಾರಾಟ ಮಾಡಲು ಉದ್ದೇಶಿಸಿದ್ದೇನೆ’ ಎಂದು ಇರಾನಿ ಹ್ಯಾಕರ್‌ ಒಬ್ಬರು ಡಾರ್ಕ್‌ವೆಬ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: AIIMS ಮಾತ್ರವಲ್ಲ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ ಸರ್ವರ್‌ ಹ್ಯಾಕ್‌ ಮಾಡಲು 6 ಸಾವಿರ ಬಾರಿ ಯತ್ನ..!

ಕೋವಿನ್‌ ಪ್ಲಾಟ್‌ಫಾರಂನ ಸ್ಕ್ರೀನ್‌ ಶಾಟ್‌ ಹಾಕಿಕೊಂಡಿರುವ ಅವರು, ಕೋವಿಡ್‌ ಲಸಿಕಾಕರಣದಲ್ಲಿ ಭಾಗಿಯಾದ ಆರೋಗ್ಯ ಸಿಬ್ಬಂದಿಯ ಮೊಬೈಲ್‌ ಸಂಖ್ಯೆ ಸೇರಿ ಹಲವು ವೈಯಕ್ತಿಕ ಮಾಹಿತಿ, ಲಸಿಕಾ ಕೇಂದ್ರದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದು ಹ್ಯಾಕರ್‌ಗಳ ಮೂಲವನ್ನು ಶೋಧಿಸಿದಾಗ ಇರಾನ್‌ನ ನಜೀಲಾ ಬ್ಲ್ಯಾಕ್‌ಹ್ಯಾಟ್‌ ಎಂಬ ಹ್ಯಾಕರ್‌ ಹೆಸರು ಪತ್ತೆಯಾಗಿದೆ. ಈ ಎರಡೂ ಸ್ಕ್ರೀನ್‌ಶಾಟ್‌ಗಳು ತಾನು ನಿಯಂತ್ರಿಸುವ COWIN ಪ್ಲಾಟ್‌ಫಾರ್ಮ್‌ನ ಅಡ್ಮಿನ್‌ ಪೇಜ್‌ ಆಗಿದೆ ಎಂದು ಹ್ಯಾಕರ್ ಡಾರ್ಕ್‌ವೆಬ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಹ್ಯಾಕರ್‌ನ ಹೆಸರು ನಜೀಲಾ ಬ್ಲ್ಯಾಕ್‌ಹಾಟ್ ಮತ್ತು ಅವರು ಇರಾನ್‌ನ ಎಪಿಟಿ ಗುಂಪಿನ ಶೀಲ್ಡ್ ಇರಾನ್ ಸೆಕ್ಯುರಿಟಿ ಟೀಮ್‌ನ ಸದಸ್ಯರಾಗಿದ್ದಾರೆ ಎಂದು ಕಂಡುಬಂದಿದೆ. ಇದರಿಂದಾಗಿ ಪ್ರಪಂಚದಾದ್ಯಂತದ ಅನೇಕ ಸರ್ಕಾರಗಳು ಚಿಂತಿತವಾಗಿವೆ ಎಂದೂ ತಿಳಿದುಬಂದಿದೆ. COWIN ಪೋರ್ಟಲ್ ಮೇಲೆ ದಾಳಿ ಮಾಡಿದ ಈ ಇರಾನಿನ ಹ್ಯಾಕರ್ ತನ್ನ ಟೆಲಿಗ್ರಾಮ್ ಯೂಸರ್‌ ನೇಮ್‌ ಅನ್ನು ಡಾರ್ಕ್‌ವೆಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತನ್ನಿಂದ COWIN ಪ್ರವೇಶವನ್ನು ಖರೀದಿಸಲು ಬಯಸುವ ವ್ಯಕ್ತಿಯು ಟೆಲಿಗ್ರಾಮ್‌ನಲ್ಲಿ ಸಂಪರ್ಕಿಸಬೇಕು ಎಂದು ಬರೆದಿದ್ದಾರೆ.

ಇದನ್ನೂ ಓದಿ: Cyber Hacking: ಏಮ್ಸ್ ಸರ್ವರ್‌ ಹ್ಯಾಕಲ್ಲಿ ಚೀನಿ ಹ್ಯಾಕರ್ ಕೈವಾಡ..?

ಇದು ಲಾಗಿನ್‌ಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಪ್ರಕರಣವಾಗಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಹ್ಯಾಕ್‌ ಆಗಿ 3 ದಿನ ಆದರೂ ಸರ್ಕಾರ ಪ್ರತಿಕ್ರಿಯಿಸಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಹ್ಯಾಕ್‌ ಆಗಿರುವ ಮಾಹಿತಿ ಸುಳ್ಳು..?
ಇರಾನಿನ ಹ್ಯಾಕರ್‌ಗಳು CoWIN ಪ್ಲಾಟ್‌ಫಾರ್ಮ್‌ನಿಂದ ಸೂಕ್ಷ್ಮ ಡೇಟಾಗೆ ಪ್ರವೇಶ ಹೊಂದಿದ್ದಾರೆ ಮತ್ತು ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಬಯಸುತ್ತಾರೆ ಎಂದು ವರದಿ ಬಂದಿದೆ. ಆದರೆ, ಈ ಹಕ್ಕುಗಳು ನಿಜವೆಂದು ತೋರುತ್ತಿಲ್ಲ ಎಂದು ನೈತಿಕ ಹ್ಯಾಕರ್‌ ಹೇಳಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: AIIMS Delhi Server Hack: ಕ್ರಿಪ್ಟೋಕರೆನ್ಸಿಯಲ್ಲಿ 200 ಕೋಟಿ ನೀಡಿ ಎಂದ ಹ್ಯಾಕರ್‌ಗಳು!

click me!