ಇಂದಿನಿಂದ ಬೆಂಗಳೂರು ಏರ್‌ ಶೋ: ಲೋಹದ ಹಕ್ಕಿಗಳಿಂದ ಮೈನವಿರೇಳಿಸುವ ಪ್ರದರ್ಶನ!

Published : Feb 03, 2021, 07:36 AM ISTUpdated : Feb 03, 2021, 10:12 AM IST
ಇಂದಿನಿಂದ ಬೆಂಗಳೂರು ಏರ್‌ ಶೋ: ಲೋಹದ ಹಕ್ಕಿಗಳಿಂದ ಮೈನವಿರೇಳಿಸುವ ಪ್ರದರ್ಶನ!

ಸಾರಾಂಶ

ಇಂದಿನಿಂದ ಬೆಂಗಳೂರು ಏರ್‌ ಶೋ| ರಾಜನಾಥ ಸಿಂಗ್‌ ಚಾಲನೆ| ಲೋಹದ ಹಕ್ಕಿಗಳಿಂದ ಮೈನವಿರೇಳಿಸುವ ಪ್ರದರ್ಶನ| 3 ದಿನ ನಡೆಯಲಿರುವ ವೈಮಾನಿಕ ಪ್ರದರ್ಶನ| ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ| 

ಬೆಂಗಳೂರು(ಫೆ.03): ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆ ಸಂಪೂರ್ಣ ಸಜ್ಜಾಗಿದೆ. ಎಚ್‌ಎಎಲ್‌ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್‌’ ಹಾಗೂ ಸೂರ್ಯ ಕಿರಣ್‌- ಸಾರಂಗ್‌ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಬುಧವಾರ ಬೆಳಗ್ಗೆ ಚಾಲನೆ ದೊರೆಯಲಿದೆ.

ದೇಶದ ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಡಲಿರುವ ವೈಮಾನಿಕ ಪ್ರದರ್ಶನಕ್ಕೆ ಫೆ.3ರ ಬುಧವಾರ ಬೆಳಗ್ಗೆ 9.30 ಗಂಟೆಗೆ ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಚಾಲನೆ ನೀಡಲಿದ್ದಾರೆ.

ಕೊರೋನಾ ಪರಿಣಾಮ ಐದು ದಿನಗಳ ವೈಮಾನಿಕ ಪ್ರದರ್ಶನ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಕೊರೋನಾ ನೆಗೆಟಿವ್‌ ಪರೀಕ್ಷೆಯೊಂದಿಗೆ ಪ್ರತಿ ದಿನ ವೈಮಾನಿಕ ಪ್ರದರ್ಶನ ವೀಕ್ಷಣಾ ಸ್ಥಳಕ್ಕೆ (ಅಡ್ವಾ) 3 ಸಾವಿರ ಮಂದಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಮಂದಿ ಭೇಟಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಏರೋ ಇಂಡಿಯಾ ವೇದಿಕೆಯಾಗುತ್ತಿದೆ.

ಪ್ರಸಕ್ತ ಸಾಲಿನ ಆತ್ಮನಿರ್ಭಯ ಭಾರತ್‌ ಕಲ್ಪನೆಯನ್ನು ಬಿಂಬಿಸಲು ಎಚ್‌ಎಎಲ್‌ ವತಿಯಿಂದ ಅಥವಾ ಸಹಭಾಗಿತ್ವದಲ್ಲಿ ಅಭಿವೃದ್ಧಿ, ಜೋಡಣೆ ಮಾಡಿರುವ ವಿಮಾನಗಳಿಂದಲೇ ಪ್ರತ್ಯೇಕ ವೈಮಾನಿಕ ಪ್ರದರ್ಶನ ನೀಡಲಾಗುತ್ತಿದೆ. ಎಲ್‌ಸಿಎ ಟ್ರೈನರ್‌, ಎಚ್‌ಟಿಟಿ-40, ಹಾಕ್‌ ಎಂಕೆ-132, ಡು -228, ಐಜೆಟಿ ವಿಮಾನಗಳ ಫಾರ್ಮೆಷನ್‌ ಸ್ವದೇಶಿ ಸಾಮರ್ಥ್ಯ ಪ್ರದರ್ಶಿಸಲಿದೆ.

ಬಾಂಬರ್‌ ವಿಮಾನ ಆಕರ್ಷಣೆ:

ಇದೇ ಮೊದಲ ಬಾರಿಗೆ ವಿಶ್ವದ ಹೆವಿ ಬಾಂಬರ್‌ಗಳಲ್ಲಿ ಒಂದಾದ ಅಮೆರಿಕದ ಬಿ1ಬಿ-ಲ್ಯಾನ್ಸರ್‌ ಪ್ರದರ್ಶನ ನೀಡಲಿದೆ. ಸೂಪರ್‌ಸಾನಿಕ್‌ ಹೆವಿ ಬಾಂಬರ್‌ 23 ಸಾವಿರ ಕೆ.ಜಿ. ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಏರೋ ಇಂಡಿಯಾದಲ್ಲಿ ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನದಲ್ಲಿ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್‌, ರಫೇಲ್‌, ಎಲ್‌ಸಿಎಚ್‌, ಎಲ್‌ಯುಎಚ್‌, ಜಾಗ್ವಾರ್‌, ಹಾಕ್‌ ಸೇರಿ ಇನ್ನಿತರ ಫೈಟರ್‌ ಜೆಟ್‌, ಏರ್‌ಕ್ರಾಫ್ಟ್‌, ಹೆಲಿಕಾಪ್ಟರ್‌ಗಳಿಂದ ಪ್ರದರ್ಶನ ನಡೆಯಲಿದೆ.

ಮೂರು ದಿನಗಳ ವೇಳಾಪಟ್ಟಿ:

ಉದ್ಘಾಟನೆಯ ದಿನವಾದ ಫೆ.3ರ ಬುಧವಾರ ಭಾರತೀಯ ಪೆವಿಲಿಯನ್‌ ಉದ್ಘಾಟನೆ, ಮಧ್ಯಾಹ್ನ ಚೀಫ್‌ ಆಫ್‌ ಏರ್‌ ಸ್ಟಾಫ್‌ ಸಮಾವೇಶ, ಬೆಳಗ್ಗೆ ಹಾಗೂ ಮಧ್ಯಾಹ್ನ ವೈಮಾನಿಕ ಪ್ರದರ್ಶನ ಸೇರಿದಂತೆ ಇನ್ನಿತರೆ ಸಭೆ-ಸಮಾವೇಶಗಳು ನಡೆಯಲಿವೆ. ವೈಮಾನಿಕ ಪ್ರದರ್ಶದ ಎರಡನೇ ದಿನವಾದ ಫೆ.4ರಂದು ಐಒಆರ್‌ ರಕ್ಷಣಾ ಸಚಿವರ ಸಮಾವೇಶ, ಚೀಫ್‌ ಆಫ್‌ ಏರ್‌ ಸ್ಟಾಫ್‌ ಸಮಾವೇಶ ಹಾಗೂ ಎರಡು ಬಾರಿ ವೈಮಾನಿಕ ಪ್ರದರ್ಶನ ನಡೆಯಲಿದೆ. ಮೂರನೇ ಹಾಗೂ ಕೊನೆಯ ದಿನವಾದ ಫೆ. 5 ರಂದು ಸ್ಟಾರ್ಟ್‌ಅಪ್‌ ಕಾರ್ಯಕ್ರಮ, ಬಂಧನ್‌ ಒಪ್ಪಂದ ಕಾರ್ಯಕ್ರಮ, ಒಂದು ಬಾರಿ ವೈಮಾನಿಕ ಪ್ರದರ್ಶನ ಹಾಗೂ ವೈಮಾನಿಕ ಪ್ರದರ್ಶನದ ಸಮಾರೋಪ ಸಮಾರಂಭ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ