ಉದಿತ್ ನಾರಾಯಣ್ ಅವರ ಪುತ್ರ ಗಾಯಕ ಆದಿತ್ಯ ನಾರಾಯಣ್ ಲೈವ್ ಕನ್ಸರ್ಟ್ ಸಂದರ್ಭದಲ್ಲಿ ಅಭಿಮಾನಿಯೊಬ್ಬನಿಗೆ ಮೈಕ್‌ನಿಂದ ಹೊಡೆದು, ಆತನ ಫೋನ್ ಬಿಸಾಡಿ ದುರ್ವರ್ತನೆ ತೋರಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಉದಿತ್ ನಾರಾಯಣ್ ಅವರ ಪುತ್ರ ಗಾಯಕ ಆದಿತ್ಯ ನಾರಾಯಣ್ ಅವರು ಮನರಂಜನಾ ಉದ್ಯಮದ ಹೆಸರಾಂತ ವ್ಯಕ್ತಿಗಳಲ್ಲಿ ಒಬ್ಬರು, ಅವರು ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಛತ್ತೀಸ್‌ಗಢದ ಭಿಲಾಯಿಯ ರುಂಗ್ಟಾ R2 ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅವರ ಲೈವ್ ಕನ್ಸರ್ಟ್‌ನಿಂದಾಗಿ ಆದಿತ್ಯ ಈಗ ಹೆಡ್ಲೈನ್‌ಗಳಲ್ಲಿದ್ದಾರೆ. ಆದಿತ್ಯ ತನ್ನ ಮೈಕ್‌ನಿಂದ ಅಭಿಮಾನಿಗೆ ಹೊಡೆದು, ಅವನ ಫೋನ್ ಕಸಿದು ಅದನ್ನು ಎಸೆಯುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಹೌದು, ಪಾಕ್ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರ ಕೆಟ್ಟ ವರ್ತನೆಯ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿ ಎಲ್ಲರಿಂದ ನಿಂದನೆಗೊಳಗಾಗಿತ್ತು. ಅದು ಮರೆಯುವ ಮುನ್ನವೇ ಆದಿತ್ಯ ನಾರಾಯಣ್ ತಮ್ಮ ದುರ್ವರ್ತನೆಯಿಂದ ಸುದ್ದಿಯಾಗಿದ್ದಾರೆ.
ಛತ್ತೀಸ್‌ಗಢದ ಭಿಲಾಯ್‌ನಲ್ಲಿರುವ ರುಂಗ್ತಾ ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಆದಿತ್ಯ ನಾರಾಯಣ್ ಅಭಿಮಾನಿಯೊಬ್ಬನಿಗೆ ಹೊಡೆಯುವ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ.
ವಿದ್ಯಾರ್ಥಿಯನ್ನು ಶೂನಿಂದ ಥಳಿಸಿದ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್: ವಿಡಿಯೋ ವೈರಲ್
ವೀಡಿಯೋದಲ್ಲಿ ಆದಿತ್ಯ ತಮ್ಮ ಮೈಕ್‌ನಿಂದ ಫ್ಯಾನ್‌ಗೆ ಹೊಡೆದಿದ್ದಾರೆ. ನಂತರ ಅಭಿಮಾನಿಯ ಫೋನ್ ಅನ್ನು ಕಸಿದುಕೊಳ್ಳುತ್ತಾರೆ, ಅದನ್ನು ಗುಂಪಿನಲ್ಲಿ ಎಸೆದು ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಆದಾಗ್ಯೂ, ಆದಿತ್ಯ ನಾರಾಯಣ್ ಸಂಗೀತ ಕಚೇರಿಯಲ್ಲಿ ಅನುಚಿತವಾಗಿ ವರ್ತಿಸಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, 'ಅವನು ತನ್ನ ತಂದೆಯ ಹೆಸರನ್ನು ಹಾಳು ಮಾಡುತ್ತಿದ್ದಾನೆ.'
ಮತ್ತೊಬ್ಬ ಬಳಕೆದಾರರು, 'ಇದು ನನ್ನ ಇಂಜಿನಿಯರಿಂಗ್ ಕಾಲೇಜು ಆಗಿದ್ದರೆ, ಅವರು ಮತ್ತು ಅವರ ತಂಡವು ಕಾಲೇಜಿನ ಗೇಟ್‌ನಿಂದ ಹೊರಡುವ ಮೊದಲು ಉತ್ತಮ ಒದೆಯನ್ನು ಪಡೆಯುತ್ತಿದ್ದರು' ಎಂದು ಪ್ರತಿಕ್ರಿಯಿಸಿದ್ದಾರೆ.
'ಏನಿದು ನಡವಳಿಕೆ? ಹಾಡಲು ಬಾರದವನನ್ನು ಸಂಗೀತ ಕಚೇರಿಗೆ ಏಕೆ ಆಹ್ವಾನಿಸುತ್ತಿದ್ದಾರೆ? ಅಸಹ್ಯಕರ,' ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.
ಆದಿತ್ಯ ನಾರಾಯಣ್ ಅವರ ವರ್ತನೆಯಿಂದ ಸುದ್ದಿಯಾಗಿದ್ದು ಇದೇ ಮೊದಲಲ್ಲ. ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಗಾಯಕ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯ ನಡುವೆ ಮಾತಿನ ಚಕಮಕಿಯನ್ನು ತೋರಿಸುವ ವೀಡಿಯೊ 2017ರಲ್ಲಿ ವೈರಲ್ ಆಗಿತ್ತು. ಆಗ 'ತೇರಿ ಚಡ್ಡಿ ನಹೀ ಉತಾರಿ ನಾ, ತೋ ಮೇರಾ ನಾಮ್ ಆದಿತ್ಯ ನಾರಾಯಣ ನಹೀ' (ನಿನ್ ಚಡ್ಡಿ ಇಳಿಸ್ಲಿಲ್ಲ ಅಂದ್ರೆ ನನ್ ಹೆಸ್ರು ಆದಿತ್ಯ ನಾರಾಯಣ್ ಅಲ್ಲ) ಎಂದು ವಿಮಾನ ನಿಲ್ದಾಣದ ಸಿಬ್ಬಂದಿಗೆ ಬೆದರಿಕೆ ಹಾಕಿರುವುದು ಕೇಳಿಬಂದಿತ್ತು.
ವೃತ್ತಿಪರವಾಗಿ, ಆದಿತ್ಯ ನಾರಾಯಣ್ ಪ್ರಸ್ತುತ ಇಂಡಿಯನ್ ಐಡಲ್ 14ನ ನಿರೂಪಕರಾಗಿದ್ದಾರೆ.
ಇಲ್ಲಿದೆ ವಿಡಿಯೋ