ಇತ್ತೀಚೆಗೆ ಭಾರೀ ವೈರಲ್ ಆಗಿ ದೇಶಾದ್ಯಂತ ಸುದ್ದಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋವನ್ನು ಸೃಷ್ಟಿಸಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನವದೆಹಲಿ: ಇತ್ತೀಚೆಗೆ ಭಾರೀ ವೈರಲ್ ಆಗಿ ದೇಶಾದ್ಯಂತ ಸುದ್ದಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋವನ್ನು ಸೃಷ್ಟಿಸಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ಈಮನಿ ನವೀನ್ (24) ಎಂದು ಗುರುತಿಸಲಾಗಿದ್ದು, ಆಂಧ್ರದಲ್ಲಿ ಬಂಧಿಸಿ ಆತನನ್ನು ದೆಹಲಿಗೆ ಕರೆತಂದಿದ್ದಾರೆ.
‘ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚೆಚ್ಚು ಫಾಲೋವರ್ಸ್ (ಹಿಂಬಾಲಕರು) ಪಡೆಯುವ ಉದ್ದೇಶದಿಂದ ನಾನು ಅವರ ಡೀಪ್‌ಫೇಕ್ ವಿಡಿಯೋ ತಯಾರಿಸಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಫ್ಯಾನ್ ಪೇಜ್ ನಡೆಸುತ್ತಿದ್ದ ಹಾಗೂ ಸ್ವತಃ ಅವರ ಅಭಿಮಾನಿಯಾಗಿರುವ ಈತ ಹೇಳಿಕೆ ನೀಡಿದ್ದಾನೆ. ಈತ ಆಂಧ್ರದಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ಮಾಡುತ್ತಿದ್ದ.
ಬಂಧಿತ ನವೀನ್ ಹೇಳಿದ್ದೇನು?
‘ನಾನು ಇನ್‌ಸ್ಟಾಗ್ರಾಮಲ್ಲಿ ರಶ್ಮಿಕಾ ಫ್ಯಾನ್ ಪೇಜ್ ನಡೆಸುತ್ತಿದ್ದೇನೆ. ಹೆಚ್ಚು ಫಾಲೋವರ್ಸ್ ಹೊಂದುವ ಬಯಕೆಯಿಂದ ಬೇರೊಬ್ಬ ನಟಿಯ ವಿಡಿಯೋವೊಂದಕ್ಕೆ ರಶ್ಮಿಕಾರ ಮುಖ ಎಡಿಟ್ ಮಾಡಿ ಡೀಪ್‌ಫೇಕ್ ವಿಡಿಯೋ ತಯಾರಿಸಿ ಹರಿಬಿಟ್ಟೆ. ನಾನು ಎಡಿಟ್ ಮಾಡಿದ ಮೇಲೆ ವಿಡಿಯೋ ಭಾರೀ ವೈರಲ್ ಆಗಿ, ಹೆಚ್ಚು ಲೈಕ್ಸ್, ಶೇರ್ ಮತ್ತು ನನ್ನ ಖಾತೆಗೆ ಅಧಿಕ ಫಾಲೋವರ್ಸ್ ಬಂದರು’ ಎಂದು ಪೊಲೀಸರ ಬಳಿ ಆರೋಪಿ ಒಪ್ಪಿಕೊಂಡಿದ್ದಾನೆ.
ಹೆದರಿ ವಿಡಿಯೋ ಡಿಲೀಟ್:
ವಿಡಿಯೋ ವೈರಲ್ ಆಗಿ, ಎಲ್ಲೆಡೆ ಡೀಪ್‌ಫೇಕ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತನಗೆ ತೊಂದರೆಯುಂಟಾಗಬಹುದು ಎಂದು ಹೆದರಿದ ನವೀನ್ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿದ್ದ. ಅಲ್ಲದೇ ತನ್ನ ಖಾತೆಯ ಹೆಸರನ್ನು ಕೂಡ ಬಸಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ನವೀನ್ ಮೇಲೆ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, 1860ರ ಸೆಕ್ಷನ್ 465 (ನಕಲಿ) ಮತ್ತು 469 (ಪ್ರತಿಷ್ಠೆಗೆ ಹಾನಿ) ಮತ್ತು ಮಾಹಿತಿ ತಂತ್ರಜ್ಞಾನದ 66 ಸಿ (ಗುರುತು ಕಳ್ಳತನ) ಮತ್ತು 66 ಇ (ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಏನಿದು ಪ್ರಕರಣ?:
ನಟಿ ಝಾರಾ ಪಟೇಲ್ ಎಂಬಾಕೆಯ ವಿಡಿಯೋವೊಂದಕ್ಕೆ ಎಐ ಬಳಸಿ ನಟಿ ರಶ್ಮಿಕಾ ಅವರ ಮುಖವನ್ನು ಎಡಿಟ್ ಮಾಡಿ ಹರಿಬಿಡಲಾಗಿತ್ತು. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು. ಬಳಿಕ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ಶೇರ್ ಮಾಡಿದ ಕೆಲವರ ವಿಚಾರಣೆ ನಡೆಸಿ, ಅವರು ಅದರ ಮೂಲ ಸೃಷ್ಟಿಕರ್ತರಲ್ಲ ಎಂಬ ಕಾರಣಕ್ಕೆ ಬಿಡುಗಡೆ ಮಾಡಿದ್ದರು.
ಇದರ ನಡುವೆ ರಶ್ಮಿಕಾ ಬಳಿಕ ಅನೇಕ ನಟಿಯರು, ಗಣ್ಯರ ಡೀಪ್‌ಫೇಕ್ ದೃಶ್ಯಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು. ತರುವಾಯ ಡೀಪ್‌ಫೇಕ್ ತಡೆಗೆ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮಾರ್ಗಸೂಚಿಗಳನ್ನು ಹೊರಡಿಸಿದ್ದರು. ಈ ಮಾರ್ಗಸೂಚಿಗಳಿಗೆ ಕಾನೂನು ರೂಪ ಕೊಡುವುದಾಗಿ 2 ದಿನದ ಹಿಂದಷ್ಟೇ ಹೇಳಿದ್ದರು.
ಮುಂದಿನ ತಿಂಗಳೇ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ನಟನ ಟೀಮ್ ಹೇಳಿದ್ದೇನು?