
ತಿರುಚ್ಚಿ (ಮೇ.01) ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ಜೊಸೆಫ್ ಚುನಾವಣೋತ್ತರ ಸಮೀಕ್ಷೆ ಬಳಿಕ ಆತ್ಮವಿಶ್ವಾಸ ಹೆಚ್ಚಾಗಿದೆ. ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಅತೀ ಹೆಚ್ಚು ಸ್ಥಾನ ಪಡೆದು ಸರ್ಕಾರ ರಚಿಸುವ ಸಾಧ್ಯತೆಯನ್ನು ಹೇಳಿದೆ. ಮೇ ನಾಲ್ಕರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಫಲಿತಾಂಶ ಘೋಷಣೆಗೆ ಕೆಲ ದಿನ ಇರುವಾಗಲೇ ನಟ ವಿಜಯ್ ಹಾಗೂ ಟಿವಿಕೆ ಪಕ್ಷಕ್ಕೆ ಆಘಾತವಾಗಿದೆ. ಟಿವಿಕೆ ಪಕ್ಷದ ಚುನಾವಣಾ ಕಚೇರಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಶ್ರೀರಂಗಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೆಟ್ಟವೈತ್ತಲೈ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಿವಿಕೆ ಅಭ್ಯರ್ಥಿ ರಮೇಶ್ ಅವರ ಕಚೇರಿಯನ್ನು ಗುರಿಯಾಗಿಸಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕಚೇರಿಯಲ್ಲಿದ್ದ ಎಲ್ಲಾ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಈ ಘಟನೆ ಸಂಬಂಧ ಟಿವಿಕೆ ಯೂನಿಯನ್ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ದುಷ್ಕರ್ಮಿಗಳು ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪಕ್ಷದ ಅಭ್ಯರ್ಥಿ ರಮೇಶ್ ಹೇಳಿದ್ದಾರೆ. "ಎಲ್ಲಾ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಹೀಗಾದರೆ, ಶ್ರೀರಂಗಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು ಶಾಂತಿಯುತ ವಾತಾವರಣದಲ್ಲಿ ನಡೆಸಲು ಸಾಧ್ಯವೇ?" ಎಂದು ಅವರು ಪ್ರಶ್ನಿಸಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಇರುವಾಗಲೇ ಈ ಹಿಂಸಾಚಾರದ ಘಟನೆ ವರದಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಡಿಎಂಕೆ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಪೀಪಲ್ಸ್ ಪಲ್ಸ್, ಚಾಣಕ್ಯದಂತಹ ಸಂಸ್ಥೆಗಳು ಡಿಎಂಕೆ ಗೆಲುವನ್ನು ಸೂಚಿಸಿದರೆ, ಜೆವಿಸಿ ಟೈಮ್ಸ್ ನೌ ಸಮೀಕ್ಷೆಯು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಅಚ್ಚರಿಯ ಜಯ ಸಾಧಿಸಲಿದೆ ಎಂದು ಹೇಳಿದೆ. ಆದರೆ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಟಿವಿಕೆಗೆ ಮುನ್ನಡೆ ಸಿಗಲಿದೆ ಎಂದು ವರದಿಯಾಗಿದೆ.
ಇದೇ ವೇಳೆ, ಎಐಎಡಿಎಂಕೆ ಮತ್ತು ಟಿವಿಕೆ ಪಕ್ಷಗಳು ಈ ಚುನಾವಣೋತ್ತರ ಸಮೀಕ್ಷೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ. 150 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಎಐಎಡಿಎಂಕೆ ವಿಶ್ವಾಸ ವ್ಯಕ್ತಪಡಿಸಿದೆ. ತಮಗೆ ಪೂರಕವಾದ ಫಲಿತಾಂಶ ಬರಲಿದೆ ಎಂದು ಟಿವಿಕೆ ನಾಯಕತ್ವವೂ ಭರವಸೆ ಇಟ್ಟುಕೊಂಡಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂದು ಡಿಎಂಕೆ ಪ್ರತಿಕ್ರಿಯಿಸಿದೆ. ತಮಿಳುನಾಡಿನ 234 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 84ಕ್ಕಿಂತ ಹೆಚ್ಚು ಮತದಾನವಾಗಿತ್ತು. ಮೇ 4 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ