
ಅವರೊಬ್ಬ ಪ್ರಮಾಣಿಕ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಮೇಲೆ 30ವರ್ಷಗಳ ಹಿಂದೆ 20 ರೂಪಾಯಿ ಲಂಚ ತೆಗೆದುಕೊಂಡ ಆರೋಪ ಹೊರಿಸಲಾಗಿತ್ತು. ಅದು ಕೂಡ ಕೇವಲ 20 ರೂ. ಆಗಿನ 20 ರೂ ಇಂದಿನ ಕಾಲಕ್ಕೆ ಅಂದಾಜು 100 ರಿಂದ 130 ರೂ ಬೆಲೆ ಬಾಳಬಹುದು. ಆ ಪೊಲೀಸ್ ಪೇದೆ ತನ್ನ ಹೆಸರಿಗೆ ಬಂದ ಕಳಂಕವನ್ನು ಹೋಗಲಾಡಿಸಲು 30 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. ಕೊನೆಗೂ ಅವರು ಪ್ರಕರಣದಲ್ಲಿ ಖುಲಾಸೆಗೊಂಡರು. ಕೋರ್ಟ್ ನಲ್ಲಿ ನಿರಪರಾಧಿ ಎಂದು ಸಾಬೀತಾದ ಮರುದಿನ ಅವರು ನೈಸರ್ಗಿಕವಾಗಿ ಮೃತಪಟ್ಟಿದ್ದಾರೆ. ಬರೋಬ್ಬರಿ 30 ವರ್ಷ ಕಳಂಕದಿಂದ ಮುಕ್ತರಾಗಬೇಕೆಂದು ಹೋರಾಡಿದ ಪೇದೆಗೆ ಕೊನೆಗೆ ಒಂದೇ ಒಂದು ದಿನ ನೆಮ್ಮದಿಯ ನಿದ್ದೆಯಾಗಿದೆ. ಆದರೆ ಅದೇ ಅವರ ಕೊನೆಯ ಸಂತೋಷದ ದಿನ ಆಗಿತ್ತು.
ಈ ಹೃದಯವಿದ್ರಾವಕ ಪ್ರಕರಣ ಬೆಳಕಿಗೆ ಬಂದಿರುವುದು ಗುಜರಾತ್‌ನ ಅಹಮದಾಬಾದ್ ನಲ್ಲಿ. ಈ ದುರ್ಘಟನೆ ನ್ಯಾಯಕ್ಕಾಗಿ ನಡೆಸಿದ ಸುದೀರ್ಘ ಹೋರಾಟಕ್ಕೆ ನೋವಿನ ಅಂತ್ಯವನ್ನು ತಂದಿದೆ. ಗುಜರಾತ್ ಹೈಕೋರ್ಟ್ ಫೆಬ್ರವರಿ 4, 2026 ರಂದು ಅಹಮದಾಬಾದ್‌ನ ವೆಜಲ್‌ಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಕಾನ್‌ಸ್ಟೆಬಲ್ ಬಾಬುಭಾಯಿ ಪ್ರಜಾಪತಿ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಲಂಚ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಿತು. ಈ ತೀರ್ಪಿನೊಂದಿಗೆ, 1996ರಿಂದಲೂ ಅವರನ್ನು ಕಾಡುತ್ತಿದ್ದ ಭ್ರಷ್ಟಾಚಾರದ ಕಳಂಕ ಕೊನೆಗೂ ದೂರವಾಯಿತು.
ಖುಲಾಸೆ ತೀರ್ಪಿನ ನಂತರ ಬಾಬುಭಾಯಿ ಪ್ರಜಾಪತಿ ತಮ್ಮ ವಕೀಲ ನಿತಿನ್ ಗಾಂಧಿ ಅವರ ಕಚೇರಿಗೆ ಭೇಟಿ ನೀಡಿ ಭಾವನಾತ್ಮಕವಾಗಿ ಮಾತನಾಡಿ, “ನನ್ನ ಜೀವನದ ಮೇಲಿದ್ದ ಕಳಂಕವನ್ನು ನ್ಯಾಯಾಲಯ ತೊಲಗಿಸಿದೆ. ಈಗ ನನಗೆ ಮೋಕ್ಷ ಸಿಗಲಿ ಎಂದು ನಾನು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದರು. ಪ್ರಕರಣದ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಸರ್ಕಾರಿ ಸೇವಾ ಸವಲತ್ತುಗಳು ಮತ್ತು ಬಾಕಿ ಹಣ ಪಡೆಯಲು ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲರು ಅವರಿಗೆ ಸಲಹೆ ನೀಡಿದ್ದರು. ಈ ಸಂಭಾಷಣೆ ವಕೀಲರ ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೂಡ ದಾಖಲಾಗಿದೆ. ಈ ಬಗ್ಗೆ ವಕೀಲರು ತೀರ್ಪು ತಮ್ಮ ಬಳಿಕ ಪ್ರಜಾಪತಿ ಅವರು ಹೇಳಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.
ಆದರೆ ಮನೆಗೆ ಹಿಂದಿರುಗಿದ ಮರುದಿನವೇ ಬಾಬುಭಾಯಿ ಪ್ರಜಾಪತಿ ನೈಸರ್ಗಿಕ ಕಾರಣಗಳಿಂದ ನಿಧನರಾದರು. ನ್ಯಾಯಕ್ಕಾಗಿ 30 ವರ್ಷಗಳ ಕಾಲ ನಡೆಸಿದ ಸುದೀರ್ಘ ಹೋರಾಟದ ನಂತರ ಸಿಕ್ಕ ನ್ಯಾಯವನ್ನು ಅವರು ಹೆಚ್ಚು ಕಾಲ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.
1996ರ ನವೆಂಬರ್ 20ರಂದು, ಅಹಮದಾಬಾದ್‌ನಲ್ಲಿ ಅಕ್ರಮವಾಗಿ ನಗರ ಪ್ರವೇಶಕ್ಕೆ ಅವಕಾಶ ನೀಡಲು ಟ್ರಕ್ ಚಾಲಕರಿಂದ 20 ರೂಪಾಯಿ ಲಂಚ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಲಭ್ಯವಾಯಿತು. ಈ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಬಲೆ ಬೀಸಿ, ವೆಜಲ್‌ಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಬಾಬುಭಾಯಿ ಪ್ರಜಾಪತಿ, ಸೆವೆನ್‌ಕುಮಾರ್ ರಥ್ವಾ ಮತ್ತು ನಸ್ರುಲ್ಲಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದರು.
1997ರಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಆದರೆ 2002ರಲ್ಲಿ ಮಾತ್ರ ಆರೋಪಗಳನ್ನು ರೂಪಿಸಲಾಗಿದ್ದು, 2003ರಲ್ಲಿ ವಿಚಾರಣೆ ಆರಂಭವಾಯಿತು. 2004ರಲ್ಲಿ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯವು ಮೂವರು ಕಾನ್‌ಸ್ಟೆಬಲ್‌ಗಳನ್ನು ದೋಷಿಗಳೆಂದು ಘೋಷಿಸಿ, ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 3,000 ರೂಪಾಯಿ ದಂಡ ವಿಧಿಸಿತು. ಈ ತೀರ್ಪಿನ ಪರಿಣಾಮವಾಗಿ ಮೂವರೂ ತಮ್ಮ ಸರ್ಕಾರಿ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು.
ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೂವರು ಕಾನ್‌ಸ್ಟೆಬಲ್‌ಗಳು ಅದೇ ವರ್ಷ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ ಅವರ ಮೇಲ್ಮನವಿ ಎರಡು ದಶಕಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿದ್ದವು. ವಿಚಾರಣೆಯ ವೇಳೆ, ಬಾಬುಭಾಯಿ ಪ್ರಜಾಪತಿ ಅವರ ಪರ ವಕೀಲರಾದ ನಿತಿನ್ ಗಾಂಧಿ, ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ಗೊಂದಲವಿದೆ ಎಂದು ವಾದಿಸಿದರು. ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳ ವಿಶ್ವಾಸಾರ್ಹತೆಯ ಮೇಲೂ ಅವರು ಪ್ರಶ್ನೆ ಎತ್ತಿದರು. ಈ ವಾದಗಳನ್ನು ಸ್ವೀಕರಿಸಿದ ಹೈಕೋರ್ಟ್, ಘಟನೆ ನಡೆದ ಸುಮಾರು 30 ವರ್ಷಗಳ ನಂತರ, ನ್ಯಾಯಮೂರ್ತಿ ಎಸ್.ವಿ. ಪಿಂಟೋ ಅವರ ಪೀಠವು ಮೂವರು ಕಾನ್‌ಸ್ಟೆಬಲ್‌ಗಳನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿತು.
ಸುದೀರ್ಘ ಕಾನೂನು ಹೋರಾಟದ ಅವಧಿಯಲ್ಲಿ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದ ಬಾಬುಭಾಯಿ ಪ್ರಜಾಪತಿ, ನಂತರ ಪಠಾಣ್ ಜಿಲ್ಲೆಯ ತಮ್ಮ ಹುಟ್ಟೂರಿಗೆ ಸ್ಥಳಾಂತರಗೊಂಡಿದ್ದರು. ಖುಲಾಸೆ ತೀರ್ಪಿನ ಸುದ್ದಿ ತಿಳಿದ ನಂತರ ಅವರು ವಕೀಲರನ್ನು ಭೇಟಿಯಾಗಿ ಸೇವಾ ಬಾಕಿಗಳ ಕುರಿತು ಚರ್ಚಿಸಿದ್ದರು. ಆದರೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಅವರು ಹೆಚ್ಚು ಉತ್ಸಾಹ ತೋರಿಸಿರಲಿಲ್ಲ ಎಂದು ವಕೀಲರು ಹೇಳಿದ್ದಾರೆ.
ತೀರ್ಪಿನ ದಿನದ ರಾತ್ರಿ ಅವರು ತಮ್ಮ ಸೋದರಳಿಯನ ಮನೆಯಲ್ಲಿ ತಂಗಿದ್ದರು. ಮರುದಿನ ಬೆಳಿಗ್ಗೆ ಅವರು ಎಷ್ಟು ಕರೆದರೂ ಮಾತನಾಡಲಿಲ್ಲ. ಬಳಿಕ ಗಮನಿಸಿದಾಗ ಅವರು ನಿದ್ರೆಯಲ್ಲೇ ಮೃತಪಟ್ಟಿದ್ದು ತಿಳಿದುಬಂತು. ಈ ತೀರ್ಪಿನೊಂದಿಗೆ, ಇತರ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಸೆವೆನ್‌ಕುಮಾರ್ ರಥ್ವಾ ಮತ್ತು ನಸ್ರುಲ್ಲಾ ಖಾನ್ ಕೂಡ ತಮ್ಮ ಮೇಲೆ ಕಳೆದ 3 ದಶಕಗಳ ಕಾಲ ಇದ್ದ ಕಾನೂನು ಸಂಕಷ್ಟದಿಂದ ಮುಕ್ತಿ ಪಡೆದಿದ್ದಾರೆ. ಕೇವಲ 20 ರೂಪಾಯಿ ಲಂಚ ಆರೋಪದಿಂದ ಆರಂಭವಾದ ಈ ಪ್ರಕರಣ, ನ್ಯಾಯ ವ್ಯವಸ್ಥೆಯಲ್ಲಿ ನಡೆಯುವ ವಿಳಂಬವು ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನವನ್ನು ಹೇಗೆ ಹಾಳು ಮಾಡಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ