ಗೋಧ್ರಾ ರೈಲಿಗೆ ಬೆಂಕಿ ಕೇಸ್‌: ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

By Kannadaprabha News  |  First Published Jul 4, 2022, 7:24 AM IST

* ಗುಜರಾತ್‌ ಗಲಭೆಗೆ ಕಾರಣವಾದ ಕೇಸ್‌ನಲ್ಲಿ 35ನೇ ಅಪರಾಧಿ

* ಗೋಧ್ರಾ ರೈಲಿಗೆ ಬೆಂಕಿ ಕೇಸ್‌: ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

* ತಲೆಮರೆಸಿಕೊಂಡು ಕಳೆದ ವರ್ಷ ಸಿಕ್ಕಿಬಿದ್ದಿದ್ದ ರಫೀಕ್‌ ಭಟೂಕ್‌


ಗೋಧ್ರಾ(ಜು.04): 20 ವರ್ಷಗಳ ಹಿಂದೆ 1200 ಮಂದಿಯನ್ನು ಬಲಿ ಪಡೆದ ಗುಜರಾತ್‌ ಗಲಭೆಗೆ ಮೂಲ ಕಾರಣವಾಗಿರುವ ಗೋಧ್ರಾ ರೈಲು ದಹನ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ 35ಕ್ಕೇರಿಕೆಯಾಗಿದೆ.

ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡು, 2021ರ ಫೆಬ್ರವರಿಯಲ್ಲಿ ಸೆರೆಸಿಕ್ಕಿದ್ದ ರಫೀಕ್‌ ಭಟೂಕ್‌ ಎಂಬಾತನೇ ಶಿಕ್ಷೆಗೆ ಒಳಗಾದವ. ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.

Tap to resize

Latest Videos

2002ರ ಫೆ.27ರಂದು ಅಯೋಧ್ಯೆಯಿಂದ ಕರಸೇವಕರನ್ನು ಹೊತ್ತು ಬರುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಮಂದಿ ಕರಸೇವಕರು ಸುಟ್ಟು ಕರಕಲಾಗಿದ್ದರು. ಇದಾದ ಮರುದಿನವೇ ಗುಜರಾತಿನಾದ್ಯಂತ ಗಲಭೆ ಆರಂಭವಾಗಿ, 1200 ಮಂದಿ ಬಲಿಯಾಗಿದ್ದರು.

ಘಟನೆ ಬಳಿಕ ಗೋಧ್ರಾದಿಂದ ಪರಾರಿಯಾಗಿದ್ದ ರಫೀಕ್‌, ವಿವಿಧ ನಗರಗಳಲ್ಲಿ ನೆಲೆಸಿದ್ದ. ತವರಿಗೆ ಮರಳಿದ ಆತನನ್ನು ಗೋಧ್ರಾದಲ್ಲೇ ವಿಶೇಷ ಕಾರ್ಯಾಚರಣೆ ಪಡೆ ಪೊಲೀಸರು ಬಂಧಿಸಿದ್ದರು.

35ನೇ ಅಪರಾಧಿ:

ಗೋಧ್ರಾ ರೈಲು ದಹನ ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಎಸ್‌ಐಟಿ ವಿಶೇಷ ನ್ಯಾಯಾಲಯ 31 ಮಂದಿಯನ್ನು ಅಪರಾಧಿಗಳು ಎಂದು 2011ರ ಮಾ.1ರಂದು ಘೋಷಿಸಿತ್ತು. ಆ ಪೈಕಿ 11 ಮಂದಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017ರಲ್ಲಿ ಗುಜರಾತ್‌ ಹೈಕೋರ್ಚ್‌ 11 ಮಂದಿಯ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ನಂತರ ಇನ್ನೂ ಮೂವರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ರಫೀಕ್‌ ಈ ಪ್ರಕರಣದ 35ನೇ ಅಪರಾಧಿ ಆಗಿದ್ದಾನೆ.

click me!