
ನವದೆಹಲಿ (ಅ.10): ಕಾಕ್ರೋಚ್ ಜನತಾ ಪಾರ್ಟಿ (CJP) ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ಮುಂಬೈನಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke), ಅಶುತೋಷ್ ರಂಕಾ ಹಾಗೂ ಸೌರವ್ ಘೋಷ್‌ರನ್ನು ದೆಹಲಿ ಪೊಲೀಸರು ವಿಮಾನದ ಒಳಗೇ ನುಗ್ಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ 10:17 ಕ್ಕೆ ಮುಂಬೈನಿಂದ ಬಂದಿದ್ದ ಏರ್ ಇಂಡಿಯಾ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ಲ್ಯಾಂಡ್ ಆದ ತಕ್ಷಣವೇ ಈ ಹೈಡ್ರಾಮಾ ಸಂಭವಿಸಿದೆ. ಆದರೆ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಕಾಕ್ರೋಚ್‌ಗೆ ಸಖತ್ ಸಾಥ್ ನೀಡಿದ್ದ ನಟ ಪ್ರಕಾಶ್ ರಾಜ್ ಮಾತ್ರ ಈ ಎಲ್ಲಾ ದೃಶ್ಯಗಳಿಂದ ಎಸ್ಕೇಪ್ ಆಗಿರುವುದು ಹುಬ್ಬೇರುವಂತೆ ಮಾಡಿದೆ. ಪ್ರತಿ ಹೆಜ್ಜೆಯಲ್ಲೂ ಇವರೊಂದಿಗೆ ಇರುತ್ತಿದ್ದ ಪ್ರಕಾಶ್ ರಾಜ್ ಮಾತ್ರ ಪೊಲೀಸ್ ಬಂಧನದ ವೇಳೆ ಎಲ್ಲೂ ಕಾಣಿಸಿಕೊಂಡ ಬಗ್ಗೆ ವರದಿಯಾಗಿಲ್ಲ.
ವಿಮಾನ ನಿಲ್ದಾಣದ ರನ್‌ವೇನಲ್ಲಿ ವಿಮಾನ ನಿಲ್ಲುತ್ತಿದ್ದಂತೆಯೇ ಒಳಗಡೆ ಆಗಮಿಸಿದ ದೆಹಲಿ ಪೊಲೀಸ್ ತಂಡವು, ಅಭಿಜೀತ್ ದೀಪ್ಕೆ ಅವರೊಂದಿಗೆ ಇದ್ದ ಸಿಜೆಪಿ ನಾಯಕರಾದ ಸೌರವ್ ದಾಸ್ (Sourav Das) ಹಾಗೂ ಅಶುತೋಷ್ ರಂಕಾ (Ashutosh Ranka) ಅವರನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದುಕೊಂಡಿತು.
ಪೊಲೀಸರು ವಿಮಾನಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅಭಿಜೀತ್ ದೀಪ್ಕೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೇರ ಪ್ರಸಾರ (Live) ಆರಂಭಿಸಿದರು. ವಿಮಾನದ ಒಳಗೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, "ನಾವು ವಿಮಾನದಿಂದ ಹೊರಬರುವವರೆಗಾದರೂ ನೀವು ಕಾಯಬಹುದಿತ್ತು. ಬನ್ನಿ, ನಮ್ಮನ್ನು ಬಂಧಿಸಿ, ನಾವು ಯಾರಿಗೂ ಹೆದರುವುದಿಲ್ಲ" ಎಂದು ವಿಮಾನವೇರಿದ ಮಹಿಳಾ ಪೊಲೀಸ್ ಸಿಬ್ಬಂದಿಗೆ ದೀಪ್ಕೆ ನೇರವಾಗಿ ಸವಾಲು ಹಾಕುವ ದೃಶ್ಯಗಳು ವೈರಲ್ ಆಗಿವೆ.
"ನಾನು ಬಂಧನಕ್ಕೆ ಸಂಪೂರ್ಣವಾಗಿ ಸಿದ್ಧನಾಗಿಯೇ ಬಂದಿದ್ದೇನೆ. 'ಮೈ ಕಿಸೀಸೆ ಡರ್ತಾ ನಹಿ ಹೂಂ' (ನಾನು ಯಾರಿಗೂ ಹೆದರುವುದಿಲ್ಲ)" ಎಂದು ಅಭಿಜೀತ್ ದೀಪ್ಕೆ ತಾವು ಬಂಧನಕ್ಕೊಳಗಾಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ಅವರ ವಿರುದ್ಧ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯ ನಾಯಕತ್ವ ವಹಿಸಲು ಅವರು ಮುಂಬೈನಿಂದ ದೆಹಲಿಗೆ ಆಗಮಿಸಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆಯೇ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಅವರನ್ನು ಗುರುಗ್ರಾಮದ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದೇ ವೇಳೆ ಸಿಜೆಪಿ ಕಾನೂನು ಕೋಶದ ಮುಖ್ಯಸ್ಥೆ ರತ್ನಾ ಸಿಂಗ್ (Ratna Singh) ಅವರ ಮನೆಗೂ ಬೆಳಿಗ್ಗೆ ದೆಹಲಿ ಪೊಲೀಸರು ಆಗಮಿಸಿದ್ದರು. ಈ ಕುರಿತು ಮಾತನಾಡಿದ ರತ್ನಾ ಸಿಂಗ್, "ಪೊಲೀಸರು ಬೆಳಿಗ್ಗೆ ಮನೆಗೆ ಬಂದಾಗ ಅಧಿಕೃತ ನೋಟಿಸ್ ಅಥವಾ ಕಾಗದಪತ್ರಗಳನ್ನು ತೋರಿಸಲಿಲ್ಲ. ಮೇಲಾಧಿಕಾರಿಗಳ ಆದೇಶವಿದೆ ಎಂದು ಹೇಳಿ ವಶಕ್ಕೆ ಪಡೆಯಲು ಯತ್ನಿಸಿದರು" ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಗೆ ಸೂಕ್ತ ಪೂರ್ವಾನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ದೆಹಲಿ ಪೊಲೀಸರು ಶುಕ್ರವಾರವೇ ಸಿಜೆಪಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿದ್ದರು. ಆದರೆ, ಪ್ರತಿಭಟನಾಕಾರರು ನಗರಕ್ಕೆ ತಲುಪುವುದನ್ನು ತಡೆಯಲು ರಾಜಧಾನಿಯಾದ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ದೆಹಲಿಯ ವಿವಿಧ ಭಾಗಗಳಿಂದ ಶುಕ್ರವಾರ ರಾತ್ರೋರಾತ್ರಿ 400ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರ ಚಲನವಲನ ತಡೆಯಲು ಬರೋಬ್ಬರಿ 45 ಮೆಟ್ರೋ ನಿಲ್ದಾಣಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಹತ್ತಾರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜಂತರ್ ಮಂತರ್ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರವು ದೆಹಲಿ ಪೊಲೀಸ್ ಹಾಗೂ ಸಿಎಪಿಎಫ್ (CAPF) ನ ಬರೋಬ್ಬರಿ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ.
Abhijit Dipke, Saurav Das and Ashutosh Ranka detained as soon as they landed in Delhi.
These visuals from inside the aircraft https://t.co/H9UlmUadGF
— Padmaja Joshi (@PadmajaJoshi) October 10, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ