
ದೆಹಲಿ(ಜ.16) ಮುದ್ದಿನ ನಾಯಿಯನ್ನು ಮಕ್ಕಳಂತೆ ಸಾಕುತ್ತಾರೆ. ಪ್ರತಿ ದಿನ ಆರೈಕೆ ಮಾಡುತ್ತಾರೆ. ಹಲವು ಬಾರಿ ನಾಯಿಗೆ ಸಿಗುತ್ತಿರುವ ಆರೈಕೆ, ಪಾಲನೆ ಬಗ್ಗೆ ಅಸೂಯೆ ಪಟ್ಟ ಘಟನೆಗಳೂ ಇವೆ. ಇದರ ನಡುವೆ ಅದೇ ಮುದ್ದಿನ ನಾಯಿ ಮೇಲೆ ಕ್ರೂರವಾಗಿ ನಡೆದುಕೊಂಡ ಘಟನೆಗಳು ವರದಿಯಾಗಿದೆ. ಇದೀಗ ದೆಹಲಿ ಮಾರುಕಟ್ಟೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಜರ್ಮನ್ ಶೆಫರ್ಡ್ ನಾಯಿಯನ್ನು ಮಾಲೀಕರು ದೆಹಲಿ ಮಾರುಕಟ್ಟೆಗೆ ಕರೆದುಕೊಂಡು ಬಂದಿದ್ದಾರೆ. ಸ್ಕೂಟರ್ ಮೂಲಕ ಕರೆದುಕೊಂಡು ಬಂದು ನಾಯಿಯನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಮಾಲೀಕನ ಕಳೆದುಕೊಂಡ ನಾಯಿ ಸಾಲಾಗಿ ಪಾರ್ಕ್ ಮಾಡಿದ್ದ ಸ್ಕೂಟಿ ಬಳಿ ನಿಂತು ಮಾಲೀಕನಿಗಾಗಿ ಕಾಯುತ್ತಾ ಕುಳಿತಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 8 ಗಂಟೆ ತನ್ನ ಮಾಲೀಕನಿಗೆ ಕಾದ ಮನಕಲುಕುವ ಘಟನೆ ವಿಡಿಯೋ ಎಂತವರನ್ನು ಭಾವುಕರನ್ನಾಗಿ ಮಾಡುತ್ತೆ.
ಅಜಯ್ ಜೋ ಅನ್ನೋ ವ್ಯಕ್ತಿ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 14ರಂದು ಈ ಘಟನೆ ನಡೆದಿದೆ. ಜನವರಿ 14 ಹಬ್ಬದ ಪ್ರಯುಕ್ತ ರಜಾ ದಿನವಾಗಿತ್ತು. ಮಾರುಕಟ್ಟೆಗಳು ತುಂಬಿ ತುಳುಕುತ್ತಿತ್ತು. ಖರೀದಿ ಭರಾಟೆ ಜೋರಾಗಿತ್ತು. ಇದರ ನಡುವೆ ಸ್ಕೂಟರ್ ಮೂಲಕ ವ್ಯಕ್ತಿಯೊಬ್ಬರು ತಮ್ಮ ಜರ್ಮನ್ ಶೆಫರ್ಡ್ ನಾಯಿಯನ್ನು ಕರೆದುಕೊಂಡು ಮಾರುಕಟ್ಟೆಗೆ ಬಂದಿದ್ದಾರೆ. ಬಳಿಕ ಸ್ಕೂಟರ್ ನಿಲ್ಲಿಸಿ ನಾಯಿಗೆ ಒಂದಷ್ಟು ಬಿಸ್ಕೆಟ್ ಹಾಕಿದ್ದಾರೆ. ನಾಯಿ ಬಿಸ್ಕೆಟ್ ತಿನ್ನುವಷ್ಟರಲ್ಲಿ ಮಾಲೀಕ ನಾಪತ್ತೆ.
ವಿಮಾನ ಅಪಘಾತದಲ್ಲಿ ಕುಟುಂಬದ ಎಲ್ಲಾ 9 ಸದಸ್ಯರು ಮೃತ, ಆಹಾರ ನೀರಿಲ್ಲದೆ ಅನಾಥವಾದ ನಾಯಿ!
ದ್ವಿಚಕ್ರ ವಾಹನ ಪಾರ್ಕಿಂಗ್ ಬಳಿ ನಾಯಿ ಒಂದಷ್ಟು ಸುತ್ತು ಹೊಡೆದಿದೆ. ಆದರೆ ಮಾಲೀಕನ ಪತ್ತೆ ಇಲ್ಲ. ನಾಯಿ ಪಾರ್ಕಿಂಗ್ ಏರಿಯಾ ಬಿಟ್ಟು ಹೋಗುತ್ತಿಲ್ಲ. ಎಲ್ಲಿ ತನ್ನ ಮಾಲೀಕ ವಾಪಸ್ ಬಂದು ಕರೆದುಕೊಂಡು ಹೋಗುತ್ತಾನೋ ಅನ್ನೋ ಕಾರಣದಿಂದ ಪಾರ್ಕಿಂಗ್ ಸ್ಥಳದಲ್ಲೇ ಸುತ್ತು ಹೊಡೆದಿದೆ. ಆದರೆ ಮಾಲೀಕನ ಪತ್ತೆ ಇಲ್ಲ. ಕೊನೆಗೆ ನಿಲ್ಲಿಸಿದ್ದ ಯಾರದ್ದೋ ಸ್ಕೂಟಿ ಮೇಲೆ ಹತ್ತಿ ಕುಳಿತಿದೆ. ಆದರೂ ಮಾಲೀಕ ಬರಲೇ ಇಲ್ಲ. ಈ ನಾಯಿಯನ್ನು ಮಾರುಕಟ್ಟೆಯಲ್ಲಿದ್ದ ಹಲವರು ಗಮನಿಸಿದ್ದಾರೆ. ಆದರೆ ಯಾರು ಬಿಟ್ಟು ಹೋಗಿದ್ದಾರೆ ಅನ್ನೋ ಮಾಹಿತಿ ಯಾರಿಗೂ ಇರಲಿಲ್ಲ.
ಗಂಟೆಗಳು ಉರುಳತೊಡಗಿದೆ. ಸಂಜೆ ವೇಳೆ ಭಾರಿ ಜನಜಂಗಳು ಶುರುವಾಗಿದೆ. ಆದರೆ ನಾಯಿ ಮಾತ್ರ ತನ್ನ ಮಾಲೀಕನಿಗಾಗಿ ಪರದಾಡಿದೆ. ಮಾಲೀಕ ಮರಳಿ ಬಂದು ತನ್ನನ್ನು ಮನೆಗೆ ಕರೆದುಕೊಂಡಡು ಹೋಗುತ್ತಾನೆ ಅನ್ನೋ ಭರವಸೆಯಿಂದ ದಾರಿ ನೋಡುತ್ತಾ ನಾಯಿ ಅಲ್ಲೆ ಕುಳಿತಿದೆ. ಹೀಗೆ ಬರೋಬ್ಬರಿ 8 ಗಂಟೆ ಉರುಳಿದೆ. ನಾಯಿ ಅನ್ನ ನೀರು ಮುಟ್ಟಿಲ್ಲ. ನಿಂತ ಜಾಗದಿಂದ ಕದಲಿಲ್ಲ. ಆದರೆ ಮಾಲೀಕನ ಸುಳಿವಿಲ್ಲ.
ಅದೇ ಮಾರುಕಟ್ಟೆ ದಾರಿಯಲ್ಲಿ ಹಲವು ಬಾರಿ ಡೆಲಿವರಿ ಮಾಡಲು ತರಳಿದ ಸ್ವಿಗ್ಗಿ ಡೆಲಿವರಿ ಎಜೆಂಟ್ ಕೂಡ ಈ ನಾಯಿಯನ್ನು ನೋಡಿದ್ದಾನೆ. ಬಳಿಕ ಪ್ರಾಣಿ ರಕ್ಷಣಾ ಸಂಘಟನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪ್ರಾಣಿ ಸಂಘಟನೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಏಕಾಏಕಿ ನಾಯಿಯನ್ನು ಹಿಡಿದರೆ ಕಚ್ಚುವ ಸಾಧ್ಯತೆ ಇದೆ. ಮೊದಲೇ ಮಾಲೀಕನಿಲ್ಲದೆ ನಾಯಿ ಸಂಕಟಪಡುತ್ತಿದೆ. ಹೀಗಾಗಿ ಸಿಬ್ಬಂದಿಗಳು ನಾಯಿ ಜೊತೆ ರಾತ್ರಿ ಇಡಿ ನಿಂತಿದ್ದಾರೆ. ನಾಯಿಗೆ ಆಹಾರ, ನೀರು ನೀಡಿದ್ದಾರೆ. ಬಳಿಕ ನಾಯಿ ಜೊತೆ ಆತ್ಮೀಯವಾಗಿಸುವ ಪ್ರಯತ್ನ ಮಾಡಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ನಾಯಿಯನ್ನು ವಶಕ್ಕೆ ಪಡೆದ ಸಿಬ್ಬಂದಿಗಳು ಆ್ಯಂಬುಲೆನ್ಸ್ ಮೂಲಕ ಶೋಫಿ ಮೆಮೋರಿಯಲ್ ಆ್ಯನಿಮಲ್ ಟ್ರಸ್ಟ್ ಸಂಸ್ಥೆಗೆ ಸ್ಥಳಾಂತರಿಸಿದ್ದಾರೆ.
ಶೋಫಿ ಮೆಮೋರಿಯಲ್ ಆ್ಯನಿಮಲ್ ಟ್ರಸ್ಟ್‌ಗೆ ಕರೆದೊಯ್ದ ಸಿಬ್ಬಂಧಿಗಳು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಈ ಹೆಣ್ಣು ನಾಯಿಗೆ ಸ್ವಿಗ್ಗಿ ಎಂದು ಹೆಸರಿಟ್ಟಿದ್ದಾರೆ. ಕಾರಣ ಸ್ವಿಗ್ಗಿ ಡೆಲಿವರಿ ಎಜೆಂಟ್ ನೀಡಿದ ಮಾಹಿತಿಯಿಂದ ಈ ನಾಯಿಯನ್ನು ರಕ್ಷಣೆ ಮಾಡಲಾಗಿದೆ.ಸದ್ಯ ನಾಯಿ ಪ್ರಾಣಿ ಸಂಘಟನೆಯ ಆರೈಕೆಯಲ್ಲಿದೆ.
ಭಾರತೀಯ ರೈಲ್ವೇಯಲ್ಲಿ ನಿಮ್ಮ ಮುದ್ದಿನ ನಾಯಿ ಜೊತೆ ಪ್ರಯಾಣಿಸಲು ಏನು ಮಾಡಬೇಕು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ