
ಮುಂಬೈ(ಜು.04): ಮುಂಬೈ ಅರಣ್ಯಪ್ರದೇಶವಾದ ಆರೇನಲ್ಲಿ ಮೆಟ್ರೋ ಕಾರ್‌ಶೆಡ್ ನಿರ್ಮಿಸಲು ಹೊಸ ಸರ್ಕಾರ ಮರು ಅನುಮೋದನೆ ನೀಡಿದ್ದನ್ನು ಮಹಾ ಅಘಾಡಿ ಸರ್ಕಾರದಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಆದಿತ್ಯ ಠಾಕ್ರೆ ಬಲವಾಗಿ ವಿರೋಧಿಸಿದ್ದಾರೆ. ಮುಂಬೈನ ಜೀವವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ ಮಾತ್ರವೇ ನಾವು ಆರೇಯಲ್ಲಿ ಕಾರ್‌ಶೆಡ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಆದಿತ್ಯ ಠಾಕ್ರೆ ‘ಆರೇ ಪ್ರದೇಶ ಮುಂಬೈ ಮಹಾನಗರಿಯ ಶ್ವಾಸಕೋಶವಿದ್ದಂತೆ. ನಗರದ ಜೀವವೈವಿಧ್ಯತೆ ಉಳಿಸಲೆಂದೇ ನಾವು ಇಲ್ಲಿ ಮೆಟ್ರೋ ಕಾರ್‌ಶೆಡ್‌ಗೆ ನೀಡಿದ್ದ ಅನುಮತಿ ರದ್ದು ಪಡಿಸಿದ್ದೆವು. ಅದರ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಹಲವು ಜೀವ ಸಂಕುಲಗಳ ಜೀವ ತಳೆದಿವೆ. ನಿತ್ಯವೆಂಬಂತೆ ಚಿರತೆಗಳು ಕೂಡಾ ಕಾಣಿಸಿಕೊಳ್ಳುತ್ತಿವೆ. ಅರೇ ಎಂಬುದು ಕೇವಲ 2700 ಮರಗಳ ಪ್ರದೇಶವಲ್ಲ. ಅದು ಜೀವವೈವಿಧ್ಯತೆ. ಅದನ್ನು ಮುಂಬೈಗೆ ಉಳಿಸಲೆಂದೇ ಅಲ್ಲಿ ನಿರ್ಮಾಣ ಚಟುವಟಿಕೆಗೆ ತಡೆ ನೀಡಲಾಗಿತ್ತು. ಮುಂಬೈ ಅಭಿವೃದ್ಧಿ ಸುಸ್ಥಿರ ಮತ್ತು ಹೆಚ್ಚು ಯೋಜಿತ ರೀತಿಯಲ್ಲಿ ಆಗಬೇಕು’ ಎಂದು ಹೇಳಿದ್ದಾರೆ.
ಮಹಾ ಅಘಾಡಿ ಸರ್ಕಾರ ರಚನೆಗೂ ಹಿಂದಿದ್ದ ಬಿಜೆಪಿ ಸರ್ಕಾರ, ಆರೇಯಲ್ಲಿ ಮೆಟ್ರೋ ಕಾರ್‌ಶೆಡ್‌ಗೆ ಅನುಮತಿಸಿತ್ತು. ಆದರೆ ಉದ್ಧವ್ ಠಾಕ್ರೆ ಸಿಎಂ ಆಗುತ್ತಲೇ ಆರೇ ಕಾಮಗಾರಿಗೆ ತಡೆ ನೀಡಿ, 800 ಎಕರೆ ಭೂಮಿಯನ್ನು ಅರಣ್ಯ ಪ್ರದೇಶ ಎಂದು ಘೋಷಿಸಿದ್ದರು. ಜೊತೆಗೆ ಮೆಟ್ರೋ ಕಾರ್‌ಶೆಡ್‌ಗೆ ಕಂಜುರ್‌ಮಾಗ್‌ರ್‍ನಲ್ಲಿ ಜಾಗ ಕಲ್ಪಿಸಿದ್ದರು. ಆದರೆ ಇದೀಗ ಶಿಂಧೆ ತಮ್ಮ ಮೊದಲ ಸಂಪುಟ ಸಭೆಯಲ್ಲೇ ಮರಳಿ ಆರೇಯಲ್ಲೇ ಮೆಟ್ರೋ ಕಾರ್‌ಶೆಡ್‌ಗೆ ಅನುಮೋದನೆ ನೀಡಿದ್ದಾರೆ.
ಮೊದಲ ಸಂಪುಟ ಸಭೆಯಲ್ಲೇ ಉದ್ಧವ್ ನಿರ್ಧಾರ ರದ್ದು ಮಾಡಿದ ಶಿಂಧೆ
ಏಕನಾಥ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ಜೋಡಿಯ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ, ಈ ಹಿಂದಿನ ಮುಖ್ಯಮಂತ್ರಿ ಉದ್ಧವ ಠಾಕ್ರೆ ಕೈಗೊಂಡಿದ್ದ ನಿರ್ಣಯವೊಂದನ್ನು ರದ್ದುಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರ ಬೆನ್ನಲ್ಲೇ ಉದ್ಧವ್ ಅವರು ಈ ನಿರ್ಧಾರಕ್ಕೆ ಕಿಡಿಕಾರಿದ್ದು, ಠಾಕ್ರೆ ಹಾಗೂ ನೂತನ ಸರ್ಕಾರದ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.
ಹಿಂದಿನ ಫಡ್ನವೀಸ್ ಸರ್ಕಾರವು ಮುಂಬೈನ ಅರಣ್ಯ ಭಾಗವಾಗಿರುವ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ಲೈನ್-3ರ ಶೆಡ್ ನಿರ್ಮಿಸಲು ನಿರ್ಧರಿಸಿತ್ತು. ಇದು ಮುಂಬೈ ನಿವಾಸಿಗಳನ್ನು ಕೆರಳಿಸಿತ್ತು ಹಾಗೂ ಆರೇ ಕಾಲೋನಿಯಲ್ಲಿನ ಕಾಡು ನಾಶ ವಿರೋಧಿಸಿದ್ದರು. ನಂತರ ಬಂದ ಉದ್ಧವ್ ಸರ್ಕಾರ, ಜನರ ಮನವಿಗೆ ಸ್ಪಂದಿಸಿ ಮೆಟ್ರೋ ಶೆಡ್ ಅನ್ನು ಕಾಂಜೂರ್‌ಮಾಗ್‌ರ್ ಎಂಬಲ್ಲಿಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿತ್ತು.
ಆದರೆ ಶಿಂಧೆ-ಫಡ್ನವೀಸ್ ಸರ್ಕಾರ ಈಗ ಮತ್ತೆ ಆರೇ ಕಾಲೋನಿಯಲ್ಲಿ ಮೆಟ್ರೋ ಶೆಡ್ ನಿರ್ಮಿಸುವ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಇದನ್ನು ಉದ್ಧವ್ ವಿರೋಧಿಸಿದ್ದು, ಪರಿಸರದ ಜತೆ ಚೆಲ್ಲಾಟ ಆಡಬೇಡಿ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ