ವಿಧಾನಸೌಧಕ್ಕೆ ವರ್ಲಿ ಮೂಲಕವೇ ಸಾಗಬೇಕು: ಆದಿತ್ಯ ಎಚ್ಚರಿಕೆ

Published : Jun 27, 2022, 08:02 AM IST
ವಿಧಾನಸೌಧಕ್ಕೆ ವರ್ಲಿ ಮೂಲಕವೇ ಸಾಗಬೇಕು: ಆದಿತ್ಯ ಎಚ್ಚರಿಕೆ

ಸಾರಾಂಶ

* ಬಂಡುಕೋರರಿಗೆ ಪಕ್ಷದ ಬಾಗಿಲು ಬಂದ್‌: ಆದಿತ್ಯ ಠಾಕ್ರೆ * ಮೇ 30ರಂದೇ ಶಿಂಧೆಗೆ ಉದ್ಧವ್‌ ಸಿಎಂ ಆಫರ್‌ ನೀಡಿದ್ದರು * ಆದರೂ ಶಿಂಧೆ ಬಂಡಾಯ ಸಾರಿದ್ದೇಕೆ? * ವಿಧಾನಸೌಧಕ್ಕೆ ವರ್ಲಿ ಮೂಲಕವೇ ಸಾಗಬೇಕು: ಆದಿತ್ಯ ಎಚ್ಚರಿಕೆ

ಮುಂಬೈ(ಜೂ.27): ಬಂಡಾಯ ಶಾಸಕರ ವಿರುದ್ಧ ಬೆಂಕಿ ಉಗುಳಿರುವ ಶಿವಸೇನೆ ಮುುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಪುತ್ರ ಹಾಗೂ ಸಚಿವ ಆದಿತ್ಯ ಠಾಕ್ರೆ, ‘ಬಂಡಾಯ ಶಾಸಕರು ರಾಕ್ಷಸೀ ಉದ್ದೇಶಗಳನ್ನು ಹೊಂದಿದ್ದಾರೆ. ಅವರಿಗೆ ಪಕ್ಷದ ಬಾಗಿಲು ಬಂದ್‌ ಆಗಲಿದೆ. ಇಂಥವರಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಧೈರ್ಯವಿದ್ದರೆ ಮತ್ತೊಮ್ಮೆ ಅವರು ಚುನಾವಣೆ ಎದುರಿಸಬೇಕು ಎಂದು ಸವಾಲು ಹಾಕಿದ್ದಾರೆ.

ಜೊತೆಗೆ ಅಸೆಂಬ್ಲಿಗೆ ಬಂಡುಕೋರರು ಬರಲೇಬೇಕು. ಆಗ ನಮ್ಮ ಕಣ್ಣಿನಲ್ಲಿ ಕಣ್ಣು ಇಟ್ಟು ನೋಡಲು ಅವರಿಗೆ ಧೈರ್ಯ ಬೇಕು. ನೀವು ಮುಂಬೈಗೆ ಬಂದಾಗ ವರ್ಲಿ ಮೂಲಕವೇ ವಿಧಾನಸಭೆಗೆ ಹೋಗಬೇಕು’ ಎಂದು ಚಾಟಿ ಬೀಸಿದರು. ವರ್ಲಿ ಶಿವಸೇನೆಯ ಭದ್ರಕೋಟೆ ಆಗಿದ್ದು, ಆ ಪ್ರದೇಶದ ಮೂಲಕವೇ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಹೋಗಬೇಕು ಎಂಬುದು ಇಲ್ಲಿ ಗಮನಾರ್ಹ.

ಸಿಎಂ ಆಫರ್‌:

ಇದೆ ವೇಳೆ ಮೇ 30ರಂದೇ ಬಂಡಾಯ ನಾಯಕ ಏಕನಾಥ ಶಿಂಧೆ ಅವರನ್ನು ಕರೆದಿದ್ದ ಉದ್ಧವ್‌ ಅವರು ಮುಖ್ಯಮಂತ್ರಿ ಸ್ಥಾನದ ಆಫರ್‌ ನೀಡಿದ್ದರು. ಆದರೂ ಅವರನ್ನು ಬಿಟ್ಟು ಬಂಡಾಯ ಸಾರಿ ಬಿಜೆಪಿ ಜತೆ ಶಿಂಧೆ ಹೋಗಿದ್ದೇಕೆ?’ ಎಂದು ಆದಿತ್ಯ ಬಾಂಬ್‌ ಸಿಡಿಸಿದ್ದಾರೆ.

ಮಹಾರಾಷ್ಟ್ರ ಬಿಕ್ಕಟ್ಟು ಇದೀಗ ಸುಪ್ರೀಂಕೋರ್ಟ್‌ ಅಂಗಳಕ್ಕೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದೊಳಗಿನ ಬಂಡಾಯ ಮತ್ತು ಬಂಡಾಯ ಪರಿಣಾಮ ಮಹಾ ಅಘಾಡಿ ಸರ್ಕಾರದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟು ನಿರೀಕ್ಷೆಯಂತೆಯೇ ಇದೀಗ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದೆ. ಬಂಡಾಯ ಶಾಸಕರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯ ಉಪಸ್ಪೀಕರ್‌ ನರಹರಿ ಅವರು ಕೈಗೊಂಡ ಇತ್ತೀಚಿನ ಕೆಲ ನಿರ್ಧಾರಗಳನ್ನು ಪ್ರಶ್ನಿಸಿ ಬಂಡಾಯ ನಾಯಕ ಏಕನಾಥ್‌ ಶಿಂಧೆ ಸುಪ್ರೀಂಕೋರ್ಚ್‌ಗೆ ಭಾನುವಾರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸೋಮವಾರ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿರುವ ಕಾರಣ ಎಲ್ಲರ ಗಮನ ಇದೀಗ ಮುಂಬೈ ಮತ್ತು ಗುವಾಹಟಿಯಿಂದ ನವದೆಹಲಿಯತ್ತ ಹೊರಳಿದೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ 35ಕ್ಕೂ ಹೆಚ್ಚು ಶಾಸಕರು ಬಂಡೆದ್ದು ಸೂರತ್‌, ಬಳಿಕ ಗುವಾಹಟಿಗೆ ತೆರಳಿದ ಬೆನ್ನಲ್ಲೇ, ಶಿವಸೇನೆ ವಿಧಾನಸಭೆಯಲ್ಲಿನ ತನ್ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಏಕನಾಥ್‌ ಶಿಂಧೆ ಅವರನ್ನು ತೆಗೆದು ಹಾಕಿತ್ತು. ಜೊತೆಗೆ ಶಿಂಧೆ ಜಾಗಕ್ಕೆ ಅಜಯ್‌ ಚೌಧರಿ ಅವರನ್ನು ನೇಮಿಸಿತ್ತು. ಪಕ್ಷದ ಈ ಎರಡೂ ನಿರ್ಧಾರವನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿರುವ ಉಪ ಸ್ಪೀಕರ್‌ ನರಹರಿ ಅವರು ಅಂಗೀಕರಿಸಿದ್ದರು.

ಆದರೆ ಶಿವಸೇನೆಯಲ್ಲಿ ತಮಗೇ ಬಹುಮತ ಇರುವ ಕಾರಣ ತಮ್ಮದೇ ನಿಜವಾದ ಬಣ. ಪಕ್ಷ ತಮ್ಮನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಚೌಧರಿ ನೇಮಕ ಅಸಿಂಧುಗೊಳಿಸಬೇಕು ಎಂದು ಶಿಂಧೆ ಬಣ ಕೋರಿದೆ.

ಜೊತೆಗೆ ಶಾಸಕಾಂಗ ಸಭೆಗೆ ಗೈರಾದ ಕಾರಣ ನೀಡಿ 16 ಜನರನ್ನು ಅನರ್ಹಗೊಳಿಸಬೇಕು ಎಂದು ಪಕ್ಷದ ಸಚೇತಕ ಸುನಿಲ್‌ ಪ್ರಭು ಮಾಡಿದ್ದ ಶಿಫಾರಸಿನ ಅನ್ವಯ ಉಪಸ್ಪೀಕರ್‌ ಶಿವಸೇನೆಯ 16 ಶಾಸಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ ಮುಖ್ಯ ಸಚೇತಕ ಸ್ಥಾನದಿಂದ ಸುನಿಲ್‌ ಪ್ರಭು ಅವರನ್ನು ತೆಗೆದುಹಾಕಿ ಭರತ್‌ ಅವರನ್ನು ನೇಮಿಸಲಾಗಿದೆ. ಹೀಗಾಗಿ ಸುನಿಲ್‌ ಹೊರಡಿಸಿದ ವಿಪ್‌ ಕಾನೂನು ಬಾಹಿರ. ಹೀಗಾಗಿ ಈ ಪ್ರಕ್ರಿಯೆಗೂ ತಡೆ ನೀಡಬೇಕು ಎಂದು ಶಿಂಧೆ ಬಣ ಕೋರಿದೆ.

ಜೊತೆಗೆ ಬಂಡಾಯ ಶಾಸಕರ ಕಚೇರಿಗಳ ಮೇಲೆ ಹಲವೆಡೆ ದಾಳಿ ನಡೆದಿರುವ ಕಾರಣ ಮಹಾರಾಷ್ಟ್ರದಲ್ಲಿ ಶಾಸಕರ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಶಿಂಧೆ ಬಣ ಕೋರಿಕೆ ಸಲ್ಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಲಿಯನೇರ್ ಗೊತ್ತು ಮಿಲಿಯನೇರ್ ಗೊತ್ತು ಇದೇನಿದು ನಿಲಿಯನೇರ್‌: ನೀವು ನಿಲಿಯನೇರಾ ಚೆಕ್ ಮಾಡಿ
ಸಂಕ್ರಾಂತಿಗೆ ಸರ್ಕಾರದ ಗಿಫ್ಟ್‌?: ಹೆದ್ದಾರಿಯಲ್ಲಿ ಟೋಲ್‌ ವಿನಾಯಿತಿ ನೀಡುವಂತೆ ನಿತಿನ್‌ ಗಡ್ಕರಿಗೆ ಮನವಿ