ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಕಡ್ಡಾಯ

By Kannadaprabha News  |  First Published Jan 25, 2020, 7:29 AM IST

ವೋಟರ್ ಐಡಿ ಜೊತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯು ದೊರಕಿದೆ. 


ನವದೆಹಲಿ [ಜ.25]:  ಮತದಾರರ ಗುರುತು ಚೀಟಿಯೊಂದಿಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವ ಮಹತ್ವದ ಯೋಜನೆ ಶೀಘ್ರದಲ್ಲೇ ಸಾಕಾರಗೊಳ್ಳುವ ಸಾಧ್ಯತೆ ಇದೆ. ವೋಟರ್‌ ಐಡಿ ಜತೆ ಆಧಾರ್‌ ಸಂಯೋಜಿಸುವ ಭಾರತೀಯ ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಕೇಂದ್ರ ಕಾನೂನು ಸಚಿವಾಲಯ ಸಮ್ಮತಿ ಸೂಚಿಸಿದ್ದು, ಸಚಿವ ಸಂಪುಟದ ಅನುಮೋದನೆಗಾಗಿ ಈ ಕುರಿತ ಟಿಪ್ಪಣಿ ಸಿದ್ಧಪಡಿಸುವಿಕೆ ಆರಂಭಿಸಿದೆ.

ಒಬ್ಬನೇ ಮತದಾರ ಎರಡೆರಡು ಕಡೆ ಹೆಸರು ನೋಂದಾಯಿಸುವುದು, ಎರಡೆರಡು ಕಡೆ ಮತ ಹಾಕುವುದು, ನಕಲಿ ಮತದಾನ ಮಾಡುವುದು ಅಥವಾ ಮತದಾನದ ವೇಳೆ ಇನ್ನಾವುದೇ ಅಕ್ರಮ ಎಸಗುವುದನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು, ವೋಟರ್‌ ಐಡಿಗೆ ಆಧಾರ್‌ ಸಂಯೋಜಿಸುವ ಪ್ರಸ್ತಾಪವನ್ನು 2019ರ ಆಗಸ್ಟ್‌ನಲ್ಲೇ ಕೇಂದ್ರ ಕಾನೂನು ಸಚಿವಾಲಯದ ಮುಂದೆ ಇರಿಸಿತ್ತು. ಇದರ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿದ ಕಾನೂನು ಸಚಿವಾಲಯ, ಇದೀಗ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆ-1950 ಹಾಗೂ ಆಧಾರ್‌ ಕಾಯ್ದೆ-2016ಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಆ ಬಳಿಕ ಚುನಾವಣಾ ಆಯೋಗಕ್ಕೆ, ಮತದಾರ ಗುರುತು ಚೀಟಿಯನ್ನು ಆಧಾರ್‌ನೊಂದಿಗೆ ಸಂಯೋಜಿಸುವ ಕಾನೂನಾತ್ಮಕ ಅಧಿಕಾರ ಸಿಗುತ್ತದೆ.

Tap to resize

Latest Videos

undefined

ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದೆ ಈ ಕುರಿತ ಟಿಪ್ಪಣಿಯನ್ನು ಕಾನೂನು ಸಚಿವಾಲಯ ಇಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತರೆ ಈ ಮಾಸಾಂತ್ಯಕ್ಕೆ ಆರಂಭವಾಗುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗಳು ಮಂಡನೆಗೊಳ್ಳುವ ಸಾಧ್ಯತೆಗಳಿವೆ.

ಸಂಸತ್ತು ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದರೆ, ಹೊಸದಾಗಿ ಮತದಾನಕ್ಕೆ ನೋಂದಣಿ ಮಾಡಿಸುವವರು ಅರ್ಜಿ ಸಲ್ಲಿಸುವ ವೇಳೆ ಆಧಾರ್‌ ಸಂಖ್ಯೆಯನ್ನು ನೀಡಬೇಕಾಗುತ್ತದೆ ಹಾಗೂ ಈಗಾಗಲೇ ನೋಂದಣಿ ಮಾಡಿಸಿ ಗುರುತು ಚೀಟಿ ಹೊಂದಿದವರು ಆಧಾರ್‌ ಸಂಖ್ಯೆಯನ್ನು ನೀಡಬೇಕಾಗುತ್ತದೆ.

ಈ ಹಿಂದೆ 2019ರ ಆಗಸ್ಟ್‌ನಲ್ಲಿ ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದಾಗ, ಆಯೋಗಕ್ಕೆ ಕಾನೂನು ಸಚಿವಾಲಯ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಆಧಾರ್‌ ವಿವರಗಳು ಕಳ್ಳತನವಾಗದಂತೆ ಹಾಗೂ ಗೌಪ್ಯತೆಯನ್ನು ಕಾಪಾಡಲು ಯಾವ ಕ್ರಮಗಳನ್ನು ಜರುಗಿಸುತ್ತೀರಿ ಎಂದು ಪ್ರಶ್ನಿಸಿತ್ತು. ಬಳಿಕ ತಾನು ಕೈಗೊಳ್ಳುವ ಸುರಕ್ಷತಾ ಕ್ರಮಗಳನ್ನೂ ಆಯೋಗವು ಸಚಿವಾಲಯಕ್ಕೆ ರವಾನಿಸಿತ್ತು.

ಇದಕ್ಕೂ ಮುನ್ನ 2015ರಲ್ಲೇ ಚುನಾವಣಾ ಆಯೋಗವು ಮತದಾರ ಗುರುತು ಚೀಟಿಯೊಂದಿಗೆ ಆಧಾರ್‌ ಸಂಯೋಜಿಸುವ ಕಾರ್ಯಕ್ಕೆ ಕೈಹಾಕಿತ್ತು. ಆದರೆ ಆಧಾರ್‌ ಸಂಯೋಜಿಸುವ ಕಾನೂನಾತ್ಮಕ ಅಧಿಕಾರ ಆಯೋಗಕ್ಕೆ ಇರದ ಕಾರಣ, ಸಂಯೋಜನೆಯ ಕೆಲಸಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಹಾಗಾಗಿ ಈಗ ಆಧಾರ್‌ ಕಾಯ್ದೆ ಹಾಗೂ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಆಧಾರ್‌ ಸಂಯೋಜನೆ ಅಧಿಕಾರವನ್ನು ತನಗೆ ನೀಡಬೇಕೆಂಬ ಹೊಸ ಪ್ರಸ್ತಾಪವನ್ನು ಸರ್ಕಾರಕ್ಕೆ ಚುನಾವಣಾ ಆಯೋಗ ಕಳಿಸಿತ್ತು.

 ಕೇಂದ್ರ ಸರ್ಕಾರ ಸಮ್ಮತಿ

- ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಒಪ್ಪಿಗೆ

- ಜಾರಿಯಾದರೆ ನಕಲಿ ಮತದಾನಕ್ಕೆ ಕಡಿವಾಣ

ಲಿಂಕ್‌ ಹೇಗೆ?

- ವೋಟರ್‌ ಐಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ಆಧಾರ್‌ ಸಂಖ್ಯೆ ನೀಡಬೇಕು

- ಈಗಾಗಲೇ ವೋಟರ್‌ ಐಡಿ ಇರುವವರು ಆಧಾರ್‌ ಸಂಖ್ಯೆ ನೀಡಿ ಪರಿಷ್ಕರಿಸಬೇಕು

ಏನು ಲಾಭ?

- ಒಬ್ಬ ಮತದಾರ ಹಲವು ಕಡೆ ಹೆಸರು ನೊಂದಾಯಿಸುವುದಕ್ಕೆ ಬ್ರೇಕ್‌

- ಎರಡೆರಡು ಕಡೆ ಮತದಾನ ಮಾಡುವುದನ್ನು ತಡೆಯಲು ಸಹಕಾರಿ

- ಯಾರದೋ ಮತಚೀಟಿ ಬಳಸಿ ಇನ್ಯಾರೋ ಮತ ಹಾಕುವುದಕ್ಕೆ ತಡೆ

-ಆಧಾರ್‌ ನೀಡದೆ ಇದ್ದರೆ ಏನಾಗುತ್ತೆ?

ಆದರೆ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ, ‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ವೇಳೆ ಆಧಾರ್‌ ಸಂಖ್ಯೆ ನೀಡದೇ ಹೋದರೆ ಅಂಥವರ ಅರ್ಜಿಯನ್ನು ತಿರಸ್ಕರಿಸುವುದಿಲ್ಲ ಅಥವಾ ಮತದಾರರ ಪಟ್ಟಿಯಿಂದ ಅವರ ವಿವರನ್ನು ಅಳಿಸಿ ಹಾಕುವುದಿಲ್ಲ ಎಂದು ಬರೆಯಲಾಗಿದೆ’ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಹಾಗಾಗಿ ವೋಟರ್‌ ಐಡಿ ಜತೆ ಆಧಾರ್‌ ಸಂಯೋಜನೆ ಆಗದೇ ಹೋದ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡುತ್ತಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ.

click me!