ನವದೆಹಲಿ (ಆ.17): ಸರ್ಕಾರದ ಸಹಾಯಧನ ಮತ್ತು ಇತರೆ ಸವಲತ್ತುಗಳನ್ನು ಪಡೆಯಲು ಆಧಾರ್(Adhar Card) ಸಂಖ್ಯೆಯನ್ನು ಕಡ್ಡಾಯ ಮಾಡಿ ವಿಶಿಷ್ಟಗುರುತಿನ ಪ್ರಾಧಿಕಾರ(UIDAI)ಹೊಸ ಸುತ್ತೋಲೆ ಹೊರಡಿಸಿದೆ. ಆ.11ರಂದು ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಾಧಿಕಾರ ಹೊರಡಿಸಿರುವ ಈ ಸುತ್ತೋಲೆಯು ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.
ಆಧಾರ್-ಪಾನ್ ಕಾರ್ಡ್ ಲಿಂಕ್ ಗಡುವು ವಿಸ್ತರಿಸಿದ ಕೇಂದ್ರ!
undefined
ಈವರೆಗೆ ಏನಿತ್ತು?: ಆಧಾರ್ ಕಾಯ್ದೆಯ ಸೆಕ್ಷನ್ 7 ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ ಸಹಾಯಧನ ಅಥವಾ ಸರ್ಕಾರದ ಇನ್ಯಾವುದೇ ಲಾಭ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿತ್ತು. ಒಂದು ವೇಳೆಗೆ ಯಾವುದೇ ವ್ಯಕ್ತಿಗೆ ಆಧಾರ್ ಸಂಖ್ಯೆ ನೀಡಿರದಿದ್ದರೆ, ಅಂಥವರಿಗೆ ಇತರೆ ಯಾವುದೇ ಪರ್ಯಾಯ ಮತ್ತು ಗುರುತು ಖಚಿತಪಡಿಸುವ ಕಾರ್ಯಸಾಧು ವಿಧಾನದ ಮೂಲಕ (ಅಂದರೆ ಅನ್ಯ ಅಧಿಕೃತ ಐಡಿ ಕಾರ್ಡುಗಳನ್ನು ಪಡೆದುಕೊಂಡು) ಸೌಲಭ್ಯ ನೀಡಬಹುದು ಎಂದು ಹೇಳಲಾಗಿತ್ತು.
ಇನ್ನು ಮುಂದೇನು?: ಆದರೆ ಆ.11ರಂದು ಹೊರಡಿಸಿರುವ ಸುತ್ತೋಲೆ ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ, ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಆಧಾರ್ ನೀಡಿರದೇ ಇದ್ದರೆ, ಅಂಥ ವ್ಯಕ್ತಿ ಆಧಾರ್ ನೋಂದಣಿಗೆ ತಕ್ಷಣವೇ ಅರ್ಜಿ ಸಲ್ಲಿಸಬೇಕು. ಬಳಿಕ ಇತರೆ ಯಾವುದೇ ಪರ್ಯಾಯ ಮತ್ತು ಗುರುತು ಖಚಿತಪಡಿಸುವ ಕಾರ್ಯಸಾಧು ವಿಧಾನದ ಮೂಲಕ ಸೌಲಭ್ಯ ನೀಡಬಹುದು ಎಂದು ಹೇಳಲಾಗಿದೆ. ಈ ಮೂಲಕ ಆಧಾರ್ ಸಂಖ್ಯೆ ಇಲ್ಲದೇ ಇರುವವರು ಇನ್ನು ಸಹಾಯಧನ ಪಡೆಯಬೇಕಿದ್ದರೆ, ಕನಿಷ್ಠ ಆಧಾರ್ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಮುಂಬರುವ ಮತ್ತಾವುದೋ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಎದುರಾದರೆ ಆ ವೇಳೆ ಆ ವ್ಯಕ್ತಿ ಆಧಾರ್ ಕಾರ್ಡುದಾರನಾಗಿಬಿಟ್ಟಿರುತ್ತಾನೆ.
ಇನ್ನಿತರ ಬದಲಾವಣೆ: ಜೊತೆಗೆ ಆಧಾರ್ ಸಂಖ್ಯೆ ದುರ್ಬಳಕೆ ತಪ್ಪಿಸಿ, ಗ್ರಾಹಕರಿಗೆ ಹೆಚ್ಚಿನ ಭರವಸೆ ನೀಡುವ ನಿಟ್ಟಿನಲ್ಲಿ ಮತ್ತು ಆಧಾರ್ ಸಂಖ್ಯೆ ಇಲ್ಲದವರಿಗೆ ಇ- ಕೆವೈಸಿ ಮತ್ತು ಇತರೆ ಆಧಾರ್ ಅಥೆಂಟಿಕೇಷನ್‌ಗೆ ವರ್ಚುವಲ್ ಐಡೆಂಟಿಫೈರ್ (ವಿಐಡಿ) ವಿತರಣೆ ಮಾಡಲಾಗುತ್ತಿತ್ತು.
ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ನವೀಕರಣ,ತಿದ್ದುಪಡಿಗೆ ಆಧಾರ್ ಕಡ್ಡಾಯ!
ಆದರೆ ಹೊಸ ಸುತ್ತೋಲೆಯಲ್ಲಿ ಸಮಾಜ ಕಲ್ಯಾಣ ಯೋಜನೆಗಳನ್ನು ಇನ್ನಷ್ಟುಸುಲಲಿತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲ ಸರ್ಕಾರಿ ಸಂಸ್ಥೆಗಳು ತಮ್ಮ ದತ್ತಾಂಶ ಸಂಗ್ರಹದಲ್ಲಿ ಎಲ್ಲಾ ಫಲಾನುಭವಿಗಳ ಆಧಾರ್ ಸಂಖ್ಯೆ ಹೊಂದಬೇಕಾಗಿ ಬರಬಹುದು. ಹೀಗಾಗಿ ಇಂಥ ಸಂಸ್ಥೆಗಳು ಫಲಾನುಭವಿಗಳಿಂದ ಆಧಾರ್ ಸಂಖ್ಯೆ ಸಂಗ್ರಹಿಸಿ, ವಿಐಡಿ ವಿಧಾನವನ್ನು ಐಚ್ಛಿಕವಾಗಿ ಮಾಡಬೇಕು ಎಂದು ಹೇಳಲಾಗಿದೆ.
ಈ ಮೂಲಕ ಭವಿಷ್ಯದ ಎಲ್ಲಾ ಸಹಾಯಧನ ಮತ್ತು ಸವಲತ್ತು ಪಡೆಯಲು ಆಧಾರ್ ಕಡ್ಡಾಯ ಎಂದು ಪರೋಕ್ಷವಾಗಿ ಹೇಳಲಾಗಿದೆ. ಇದುವರೆಗೂ ಭಾರತದಲ್ಲಿ ಒಟ್ಟಾರೆ 134 ಕೋಟಿ ಆಧಾರ್ ಸಂಖ್ಯೆಗಳನ್ನು ಸೃಷ್ಟಿಸಲಾಗಿದೆ.