ಹೊಸ ತಳಿಯ ಕೊರೋನಾತಂಕ ನಡುವೆಯೇ ಶಾಕಿಂಗ್ ಮಾಹಿತಿ ಕೊಟ್ಟ ಐಸಿಎಂಆರ್| ಬ್ರಿಟನ್‌ನಿಂದ ಆಗಮಿಸಿದ ಆರು ಮಂದಿಯಲ್ಲಿ ರೂಪಾಂತರಿ ಕೊರೋನಾ| ಬೆಂಗಳೂರಿನ ಮೂವರಿಗೂ ಹೊಸ ತಳಿ ಕೊರೋನಾ ಸೋಂಕು ದೃಢ
ನವದೆಹಲಿ(ಡಿ.29): ಕಳೆದೊಂದು ವರ್ಷದ ಹಿಂದೆ ಚೀನಾದ ವುಹಾನ್ ಪ್ರಾಂತ್ಯದಿಂದ ಹಬ್ಬಿದ್ದ ಕೊರೋನಾ ವೈರಸ್ ಎಂಬ ಮಹಾಮಾರಿ ಇಡೀ ವಿಶ್ವಕ್ಕೇ ವ್ಯಾಪಿಸಿ ಅಬ್ಬರಿಸುತ್ತಿದೆ. ಈ ಮಹಾಮಾರಿ ಅನೇಕರ ಜೀವ ಬಲಿ ಪಡೆದಿದೆ. ಈ ವೈರಸ್‌ಗೆ ಲಸಿಕೆ ಸಿಗುವ ಹಂತದಲ್ಲಿರುವಾಗಲೇ ಇದೀಗ ಈ ಕೊರೋನಾದ ಹೊಸ ತಳಿಯೊಂದು ಪತ್ತೆಯಾಗಿದ್ದು, ಇಡೀ ವಿಶ್ವವನ್ನು ಆತಂಕಕ್ಕೆ ದೂಡಿದೆ. ಈ ಆಘಾತದ ನಡುವೆಯೇ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಆರು ಮಂದಿ ಪ್ರಯಾಣಿಕರಲ್ಲಿ ಈ ಸೋಂಕು ದೃಢಪಟ್ಟಿದೆ. ಅದರಲ್ಲೂ ಬೆಂಗಳೂರಿಗೆ ಆಗಮಿಸಿದ ಮೂವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬುವುದು ಮತ್ತಷ್ಟು ಚಿಂತೆಗೀಡು ಮಾಡಿದೆ.
ಬ್ರಿಟನ್‌ನಿಂದ ಬಂದವರ ಪೈಕಿ ಎಷ್ಟು ಮಂದಿ ಈ ರೂಪಾಂತರಿ ವೈರಸ್ ತೆಕ್ಕೆಗೆ ಸಿಲುಕಿದ್ದಾರೆ ಎಂಬ ಮಾಹಿತಿಯನ್ನು ICMR- ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೊರ ಹಾಕಿದೆ. ಈ ಆರು ಮಂದಿಯಲ್ಲಿ ಮೂವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇಬ್ಬರು ಹೈದರಾಬಾದ್‌ನ ಸಿಸಿಎಂಬಿಯಲ್ಲಿದ್ದಾರೆ. ಇನ್ನೊಬ್ಬ ಪ್ರಯಾಣಿಕ ಪುಣೆಯ ಎನ್‌ಐವಿಯಲ್ಲಿ ದಾಖಲಾಗಿದ್ದಾರೆ.
ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
— Dr Sudhakar K (@mla_sudhakar)
ಈ ಕುರಿತಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಟ್ವೀಟ್ ಮಾಡಿದ್ದು ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.