
ಮನುಷ್ಯರಿಗೆ ಮಾತ್ರವಲ್ಲ, ಇಲಿಗಳಿಗೂ ಸಹ ಹಣ ನುಂಗಲು ಬರುತ್ತದೆ! ಮನುಷ್ಯರು ಕೋಟಿ ಕೋಟಿ ಹಣ ಗುಳುಂ ಮಾಡಿದ್ರೆ, ಈ ಕಿತಾಪತಿ ಇಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 12.38 ಲಕ್ಷ ರೂಪಾಯಿಗಳ ನೋಟುಗಳನ್ನು ನುಂಗಿ ಪ್ರಾಣ ಬಿಟ್ಟಿದೆ. ಪ್ರಾಣ ಬಿಡುವುದಕ್ಕಾಗಿಯೇ ಈ ನೋಟುಗಳನ್ನು ನುಂಗಲಿಲ್ಲ ಮತ್ತೆ, ಏನೋ ಹಣ ಕಂಡರೆ ಹೆಣನೂ ಬಾಯಿ ಬಿಡುತ್ತೆ ಎನ್ನೋ ಹಾಗೆ, ಇಲಿನೂ ಬಾಯ್ಬಿಟ್ಟಿದೆ. ನೋಟು ಕಂಡು ಅದಕ್ಕೂ ಆಸೆಯಾಗಿರಬೇಕು. ಇಷ್ಟೆಲ್ಲಾ ಹಣವನ್ನು ಮನುಷ್ಯರು ಗುಳುಂ ಮಾಡ್ತಾರೆ, ನಾನ್ಯಾಕೆ ಮಾಡಬಾರದು ಎನ್ನಿಸಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲಾ ಹಣ ಚಿಂದಿ ಚಿತ್ರಾನ್ನ ಮಾಡಿಬಿಟ್ಟಿದ್ದು, ಅದರ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಂದಹಾಗೆ ಈ ಘಟನೆ ಆಗಿರುವುದು, ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಲೈಪುಲಿ ಪ್ರದೇಶದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಟಿಎಂ ಒಳಗೆ ನುಗ್ಗಿದ ಇಲಿ, ಅಲ್ಲಿ 12,38,000 ರೂ. ಮೌಲ್ಯದ ನೋಟುಗಳನ್ನು ಹರಿದು ಹಾಕಿದ್ದು, ನುಂಗಿಯೂ ಹಾಕಿವೆ. ತಾಂತ್ರಿಕ ದೋಷದಿಂದಾಗಿ ಎಟಿಎಂ ಮುಚ್ಚಲ್ಪಟ್ಟಿತ್ತು ಮತ್ತು ಕೆಲ ದಿನಗಳ ಬಳಿಕ ತಂತ್ರಜ್ಞರು ದುರಸ್ತಿಗಾಗಿ ಯಂತ್ರವನ್ನು ತೆರೆದಾಗ, ಇಲಿಗಳು ಮತ್ತು ಕರೆನ್ಸಿ ನೋಟುಗಳ ರಾಶಿಯನ್ನು ನೋಡಿ ಆಶ್ಚರ್ಯಚಕಿತರಾದರು. ಇಲಿ ಅಲ್ಲಿ ಸತ್ತುಬಿದ್ದಿದ್ದರೆ, ಹರಿದ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ
ಬ್ಯಾಂಕ್ ಅಧಿಕಾರಿಗಳು ಹೇಳುವಂತೆ 12,38,000 ರೂ. ಮೌಲ್ಯದ ನೋಟುಗಳು ಹರಿದು ಹೋಗಿವೆ. ಎಟಿಎಂಗೆ ನೋಟುಗಳನ್ನು ಲೋಡ್ ಮಾಡುವ ಗುವಾಹಟಿ ಮೂಲದ ಕಂಪನಿಯೊಂದು ಯಂತ್ರಕ್ಕೆ 29 ಲಕ್ಷ ರೂ.ಗಳನ್ನು ಲೋಡ್ ಮಾಡಲಾಗಿತ್ತು ಮತ್ತು ಮರುದಿನವೇ ಎಟಿಎಂ ಕೆಟ್ಟುಹೋಯಿತು ಎಂದು ಹೇಳಿದೆ . "ನಾವು 17 ಲಕ್ಷ ರೂಪಾಯಿಗಳನ್ನು ಉಳಿಸಲು ಸಾಧ್ಯವಾಯಿತು" ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಸ್ಥಳೀಯ ಟಿವಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಆದರೆ ಜನರು ಅಧಿಕಾರಿಗಳ ಈ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿ, ಎಟಿಎಂನಲ್ಲಿ ಅಷ್ಟೊಂದು ಮೊತ್ತ ಹಾಕಿರುವಾಗ, ಅದರ ರಿಪೇರಿಗೆ ಬರಲು ಅಷ್ಟು ವಿಳಂಬ ಮಾಡಿದ್ದು ಏಕೆ ಎನ್ನುವ ಪ್ರಶ್ನೆ ಕೇಳಿದ್ದಾರೆ.
ಎಟಿಎಂ ಮೆಷಿನ್ ಒಳಗೆ ನುಗ್ಗಿದ ಇಲಿಯೇ ಈ ಕೆಲಸ ಮಾಡಿದೆ ಎಂದು ಭಾವಿಸಲಾಗಿದೆ. ಈ ಘಟನೆಯ ಬಗ್ಗೆ ಟಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆಯನ್ನೂ ನಡೆಸಿದರು. ಒಟ್ಟಿನಲ್ಲಿ ಇಲಿಗಳು ಮಾಡಿದ ಕಿತಾಪತಿಯಿಂದ ಬ್ಯಾಂಕ್ಗೆ ಭಾರಿ ಪ್ರಮಾಣದ ನಷ್ಟವಾಗಿದೆ. ಇದು ಕೆಲ ವರ್ಷಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ತನಿಖೆಯ ಬಳಿಕ ಏನಾಯಿತು, ಜನರ ಪ್ರಶ್ನೆಗಳಿಗೆ ಉತ್ತರ ದೊರಕಿತೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇದರ ಸುದ್ದಿ ವೈರಲ್ ಆಗುತ್ತಲೇ ಜನರು ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಬಹುಶಃ ಹಿಂದಿನ ಜನ್ಮದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯಾಗಿತ್ತು ಅನ್ನಿಸತ್ತೆ. ಅದಕ್ಕೇ ಈ ಜನ್ಮದಲ್ಲಿಯೂ ಅದನ್ನು ಮುಂದುವರೆಸಿದೆ ಎಂದು ಕೆಲವರು ಹೇಳಿದ್ರೆ, ಬಹುಶಃ ಇದು ಯಾವುದೋ ಲಂಚಕೋರನ ಮನೆಯಲ್ಲಿ ಬೆಳೆದ ಇಲಿ ಇರಬೇಕು. ಮಾಲೀಕ ಹಣ ನುಂಗಿದ್ದನ್ನು ನೋಡಿ ಇದಕ್ಕೂ ಆಸೆಯಾಗಿರಬೇಕು ಎನ್ನುತ್ತಿದ್ದಾರೆ.
ಮಷಿನ್ ಮೇಲೆ ಮಲಗಿಸಿ ಗಗನಸಖಿಯರಿಗೆ ಮಾಡ್ತಿರೋದೇನು? ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ