
ನಾಗ್ಪುರ(ಜೂ.23) ಚೀನಾ ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಈ ವಸ್ತುಗಳು ಅಷ್ಟೇ ಅಪಾಯಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಮಕ್ಕಳ ಕೈಗೆ ಚೀನಾ ವಸ್ತುಗಳನ್ನು ನೀಡುವಾಗ ಅತೀವ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಹೀಗೆ 9 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಮೇಡ್ ಇನ್ ಚೀನಾ ಆಟಿಕೆ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ ಕೂಲಿ ಕಾರ್ಮಿಕ ದಂಪತಿಯ ಪುತ್ರ ತನ್ನ ಆಟಿಕೆಗಳೊಂದಿಗೆ ಆಟವಾಡುತ್ತಿದ್ದ. ಪೇಪರ್ ಫ್ಯಾನ್ ಆಟಿಕೆಯಲ್ಲಿ ಮಗ್ನನಾಗಿದ್ದ. ಈ ಪೇಪರ್ ಫ್ಯಾನ್ ಆಟಿಕೆಯಲ್ಲಿ ಸಣ್ಣ ಮೋಟರ್ ಇಡಲಾಗಿದೆ. ಈ ಮೋಟರ್ ತಿರುಗಲು ಬ್ಯಾಟರಿ ಅಳವಡಿಸಲಾಗಿದೆ. ಪೇಪರ್ ಫ್ಯಾನ್ ಕೆಲ ಹೊತ್ತು ತಿರುಗಿದ ಕಾರಣ ಬ್ಯಾಟರಿ ಬಿಸಿಯಾಗಿದೆ. ಈ ಆಟಿಕೆಯಲ್ಲೇ ಹೆಚ್ಚು ಹೊತ್ತು ಆಟವಾಡಿದ್ದಾನೆ. ಆಟಿಕೆಯ ಫ್ಯಾನ್ ವೇಗ ಕಡಿಮೆಯಾಗಿದೆ. ಈ ವೇಳೆ ಬಾಲಕ ಆಟಿಕೆ ತೆಗೆದು ಬ್ಯಾಟರಿ ಹಾಗೂ ಮೋಟಾರ್ ನಡುವಿನ ವಯರ್ ಕಚ್ಚಿದ್ದಾನೆ.
ಮೊಬೈಲ್ ಬ್ಯಾಟರಿ ಸ್ಫೋಟಕ್ಕೆ ವ್ಯಕ್ತಿ ಬಲಿ: ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವ..!
ವೈಯರ್ ಕಚ್ಚಿದ ಕೆಲ ಹೊತ್ತಲ್ಲೇ ಬ್ಯಾಟರಿ ಸ್ಫೋಟಗೊಂಡಿದೆ. ಬಾಲಕನ ಬಾಯಲ್ಲೇ ಬ್ಯಾಟರಿ ಸ್ಪೋಟಗೊಂಡಿದೆ. ಸ್ಫೋಟದಿಂದ ಬಾಲಕ ದವಡೆ ಛಿದ್ರವಾಗಿದೆ. ಕ್ಷಣದಲ್ಲೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ. ಇತ್ತ ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಐಸಿಯು ಘಟಕದಲ್ಲಿ ಇದೀಗ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಚೀನಾ ಎಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಗಾಯಗೊಂಡ ಹಲವು ಉದಾಹರಣೆಗಳಿವೆ. ಅದರಲ್ಲೂ ಮಕ್ಕಳು ಮೊಬೈಲ್ ವೀಕ್ಷಿಸುತ್ತಿರುವ ವೇಳೆ ಬ್ಯಾಟರಿ ಸ್ಫೋಟಗೊಂಡ ಘಟನೆ ಭಾರತದ ಹಲವು ಭಾಗದಲ್ಲಿ ನಡೆದಿದೆ. ಮಕ್ಕಳ ಕೈಯಲ್ಲೇ ಸ್ಫೋಟಗೊಂಡು ಅನಾಹುತಗಳು ಸೃಷ್ಟಿಯಾಗಿದೆ. ದುರಂತಗಳು ನಡದು ಹೋಗಿದೆ. ಈ ಘಟನೆಗಳ ಸಾಲಿಗೆ ಇದೀಗ ಆಟಿಕೆ ದುರಂತ ಸೇರಿಕೊಂಡಿದೆ.
LED TV ಸ್ಫೋಟಿಸಿ 16 ವರ್ಷದ ಬಾಲಕ ಸಾವು: ಸ್ಫೋಟದ ತೀವ್ರತೆಗೆ ಕಾಂಕ್ರೀಟ್ ಗೋಡೆಯೇ ಛಿದ್ರ
ಮೇಡ್ ಇನ್ ಚೀನಾ ವಸ್ತುಗಳಿಗೆ ಗ್ಯಾರೆಂಟಿ ಕಡಿಮೆ. ಆಯಸ್ಸು ಕಡಿಮೆ. ಇತ್ತೀಚೆಗೆ ಭಾರತದಲ್ಲಿ ಚೀನಾ ಬ್ಯಾಟರಿಗಳ ಸಮಸ್ಯೆಯಿಂದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆಗಳು ನಡೆದಿದೆ. ಕೆಲೆವೆಡೆ ಎಲೆಕ್ಟ್ರಿಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಹೊತ್ತಿ ಉರಿದ ಘಟನೆಗಳು ನಡೆದಿದೆ. ಚಾರ್ಚಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಹಲವು ಜೀವಗಳು ಬಲಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ