ಮತ್ತೆ ಕೊರೋನಾ ಸ್ಫೋಟ: ಸೋಂಕು ಭಾರೀ ಏರಿಕೆ..!

By Kannadaprabha NewsFirst Published Jun 16, 2022, 6:12 AM IST
Highlights

*  10 ದಿನ ಬಳಿಕ ಕೋವಿಡ್‌ಗೆ ಮೊದಲ ಬಲಿ
*  ಪಾಸಿಟಿವಿಟಿ ದರ ಶೇ.2.76ಕ್ಕೇರಿಕೆ
*  ಸಕ್ರಿಯ ಕೇಸು ಸಂಖ್ಯೆ 4000ಕ್ಕೆ ಹೆಚ್ಚಳ
 

ನವದೆಹಲಿ(ಜೂ.16): 4ನೇ ಅಲೆಯ ಭೀತಿಯ ನಡುವೆಯೇ ದೇಶದಲ್ಲಿ ಕೋವಿಡ್‌ ಆರ್ಭಟ ಇನ್ನಷ್ಟು ಹೆಚ್ಚಾಗಿದ್ದು, ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 8822 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಂಕ್ರಿಯ ಸೋಂಕಿತರ ಸಂಖ್ಯೆಯು 53,637ಕ್ಕೆ ಏರಿಕೆಯಾಗಿದೆ. 

ಇದೇ ಅವಧಿಯಲ್ಲಿ 15 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 7, ಮಹಾರಾಷ್ಟ್ರದಲ್ಲಿ 4, ದೆಹಲಿಯಲ್ಲಿ 2, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ 1 ಸೋಂಕಿತರು ಮೃತಪಟ್ಟಿದ್ದಾರೆ. ದೈನಂದಿನ ಪಾಸಿಟಿವಿಟಿ ದರವು ಶೇ. 2ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 2.35ಕ್ಕೆ ಏರಿಕೆಯಾಗಿದೆ. ಕೋವಿಡ್‌ ಚೇತರಿಕೆ ದರವು ಶೇ. 98.66ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 195.5 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

Covid Crisis: 6594 ಕೇಸು, 6 ಜನ ಸಾವು: 50000 ಗಡಿ ದಾಟಿದ ಸಕ್ರಿಯ ಸೋಂಕು

ರಾಜ್ಯದಲ್ಲಿ 638 ಕೋವಿಡ್‌ ಕೇಸು: 112 ದಿನದ ಗರಿಷ್ಠ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬುಧವಾರ 648 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದು 112 ದಿನದ ಗರಿಷ್ಠ. ಬೆಂಗಳೂರಿನ 72 ವರ್ಷದ ಪುರುಷರೊಬ್ಬರು ಮರಣವನ್ನಪ್ಪಿದ್ದಾರೆ. ಇದು 10 ದಿನಗಳ ನಂತರ ಮೊದಲ ಕೋವಿಡ್‌ ಸಾವಾಗಿದೆ.

ಜೂನ್‌ ಐದಕ್ಕೆ ಒಬ್ಬರು ಮೃತರಾಗಿದ್ದು ಈ ತಿಂಗಳಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದಂತಾಗಿದೆ. ಕಳೆದ ಕೆಲ ದಿನಗಳಿಂದ 20 ಸಾವಿರದ ಅಸುಪಾಸಿನಲ್ಲಿ ನಿತ್ಯದ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದರೂ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಫೆಬ್ರವರಿ 23ಕ್ಕೆ 667 ಪ್ರಕರಣ ದಾಖಲಾಗಿತ್ತು. ಇದಾದ ನಂತರ ಗರಿಷ್ಠ ಪ್ರಕರಣ ಬುಧವಾರ ವರದಿಯಾಗಿವೆ. ಪಾಸಿಟಿವಿಟಿ ದರ ಶೇ. 2.76 ದಾಖಲಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4000ದ ಗಡಿ ತಲುಪಿದ್ದು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 30 ಮುಟ್ಟಿದೆ. ಒಟ್ಟು ಸೋಂಕಿತರಲ್ಲಿ ಶೇ. 0.75 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾದಿಂದ ತಗ್ಗಿದ್ದ ರಕ್ತದಾನ ಚೇತರಿಕೆಯತ್ತ!

ಬೆಂಗಳೂರು ನಂ.1:

ಹೊಸ ಪ್ರಕರಣಗಳಲ್ಲಿ ಬೆಂಗಳೂರು ನಗರದ್ದೇ ಸಿಂಹಪಾಲು. ನಗರದಲ್ಲಿ 615 ಮಂದಿ ಹೊಸ ಸೊಂಕಿತರಿದ್ದಾರೆ. ಇತರೆ ಜಿಲ್ಲೆಗಳಲ್ಲೂ ಸೋಂಕು ಕ್ರಮೇಣ ಹೆಚ್ಚಳವಾಗತೊಡಗಿದೆ. ದಕ್ಷಿಣ ಕನ್ನಡ 12, ಮೈಸೂರು 5, ಶಿವಮೊಗ್ಗ 3, ತುಮಕೂರು 2, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಹಾಸನ, ಕಲಬುರಗಿ, ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ 39.57 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.13 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,067 ಮಂದಿ ಮರಣವನ್ನಪ್ಪಿದ್ದಾರೆ.

2.50 ಲಕ್ಷ ಮಂದಿಗೆ ಲಸಿಕೆ:

ರಾಜ್ಯದಲ್ಲಿ ಬುಧವಾರ 2.50 ಲಕ್ಷ ಮಂದಿ ಕೋವಿಡ್‌-19 ಲಸಿಕೆ ಪಡೆದಿದ್ದಾರೆ. 35,117 ಮಂದಿ ಮೊದಲ ಡೋಸ್‌, 1.17 ಲಕ್ಷ ಮಂದಿ ಎರಡನೇ ಡೋಸ್‌ ಮತ್ತು 1 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಈವರೆಗೆ ಒಟ್ಟು 11.05 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!