ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ!

By Kannadaprabha NewsFirst Published Jul 14, 2021, 9:02 AM IST
Highlights

* ಕಮ್ಮಿ ಸಂಬಳ ನೀಡುತ್ತಿರುವುದಾಗಿ ತೆರಿಗೆ ವಂಚನೆ

* ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ

* ಆದಾಯ ತೆರಿಗೆ ವೇಳೆ ತೆರಿಗೆ ಅಕ್ರಮ ಬೆಳಕಿಗೆ

ನವದೆಹಲಿ(ಜು.14): ಬೆಂಗಳೂರಿನ ಕಂಪನಿಯೊಂದರ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕಂಪನಿಯು ಘೋಷಿಸಿಕೊಳ್ಳದೆ ‘ಬಚ್ಚಿಟ್ಟಿದ್ದ’ 880 ಕೋಟಿ ರು. ಆದಾಯವನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಇಷ್ಟುಆದಾಯಕ್ಕೆ ಅನೇಕ ವರ್ಷಗಳಿಂದ ತೆರಿಗೆ ವಂಚನೆ ಮಾಡುತ್ತಿದ್ದ ಕೃತ್ಯವನ್ನು ಬಯಲಿಗೆಳೆದಿದ್ದಾರೆ.

ಈ ಮಾನವ ಸಂಪನ್ಮೂಲ ಸೇವಾ ಕಂಪನಿಯ 2 ಕ್ಯಾಂಪಸ್‌ಗಳ ಮೇಲೆ ಜುಲೈ 8ರಂದೇ ದಾಳಿ ನಡೆದಿದೆ. ಆದರೆ ಅದು ಯಾವ ಕಂಪನಿ ಎಂಬ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿಲ್ಲ.

ವಂಚನೆ ಹೇಗೆ ನಡೆದಿತ್ತು?:

ಆದಾಯ ತೆರಿಗೆ ಕಾಯ್ದೆಯಲ್ಲಿ 80ಜೆಜೆಎಎ ಎಂಬ ಪರಿಚ್ಛೇದವಿದೆ. ಇದರ ಅಡಿ ಉದ್ಯೋಗಿಗೆ 25 ಸಾವಿರ ರು.ಗಿಂತ ಕಡಿಮೆ ಸಂಬಳವನ್ನು ಕಂಪನಿ ನೀಡುತ್ತಿದ್ದರೆ ಆ ಕಂಪನಿಗೆ ತೆರಿಗೆ ಕಟ್ಟುವುದರಿಂದ ವಿನಾಯಿತಿ ಲಭಿಸುತ್ತದೆ. ಈಗ ಆಪಾದಿತ ಕಂಪನಿಯ ಮಾಲೀಕ ಇದೇ ಪರಿಚ್ಛೇದವನ್ನು ದುರ್ಬಳಕೆ ಮಾಡಿಕೊಂಡು 880 ಕೋಟಿ ರು. ಆದಾಯ ಮುಚ್ಟಿಟ್ಟು ವಂಚನೆ ಮಾಡಿದ್ದಾನೆ ಎಂಬುದು ದಾಳಿಯಲ್ಲಿ ಪತ್ತೆಯಾಗಿದೆ.

ಈ ಕಂಪನಿಯಲ್ಲಿ ಮಾಸಿಕ 25 ಸಾವಿರ ರು.ಗಿಂತ ಹೆಚ್ಚು ವೇತನ ಪಡೆಯುವ ಹಲವಾರು ಉದ್ಯೋಗಿಗಳಿದ್ದಾರೆ. ಆದರೆ ಈ ಉದ್ಯೋಗಿಗಳಿಗೆ 25 ಸಾವಿರಕ್ಕಿಂತ ಕಡಿಮೆ ಸಂಬಳ ನೀಡುತ್ತಿದ್ದೇವೆ ಎಂದು ಕಂಪನಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದೆ. ಈ ಪ್ರಕಾರ, ‘25 ಸಾವಿರ ರು.ಗಿಂತ ಕಮ್ಮಿ ಸಂಬಳ ಪಡೆಯುವ ಇಂತಿಷ್ಟುನೌಕರರು ನಮ್ಮಲ್ಲಿ ಇದ್ದು, ಸಂಬಳದ ಮೇಲೆ 80ಜೆಜೆಎಎ ಅಡಿ ತೆರಿಗೆ ವಿನಾಯಿತಿ ಕೊಡಿ’ ಎಂದು ಆದಾಯ ತೆರಿಗೆ ಇಲಾಖೆಗೆ ಕೋರಿಕೆ ಸಲ್ಲಿಸಿ ನೂರಾರು ಕೋಟಿ ರುಪಾಯಿ ತೆರಿಗೆ ಕಟ್ಟದೇ ಉಳಿಸಿಕೊಂಡಿದ್ದು ತಿಳಿದುಬಂದಿದೆ.

ಇದಲ್ಲದೆ, ಇನ್ನೂ ಕೆಲವರು ಈ ಕಂಪನಿಯ ನೌಕರರೇ ಅಲ್ಲದಿದ್ದರೂ, ಅಂಥವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರಿಗೂ 25 ಸಾವಿರ ರು.ಗಿಂತ ಕಡಿಮೆ ಸಂಬಳ ನೀಡುತ್ತಿರುವುದಾಗಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹಲವಾರು ವರ್ಷಗಳಿಂದ ಈ ಕೃತ್ಯವನ್ನು ಕಂಪನಿ ಎಸಗಿದೆ. ಈ ಮೂಲಕ ನಿಜವಾದ 880 ಕೋಟಿ ರು. ಆದಾಯ ಬಚ್ಚಿಟ್ಟು, ಅಷ್ಟುಆದಾಯಕ್ಕೆ ತೆರಿಗೆ ಇಲಾಖೆಗೆ ತೆರಿಗೆ ವಂಚನೆ ಎಸಗಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದೆ.

click me!