
ಗುವಾಹಟಿ (ನ.10): ಮೊದಲ ಪತ್ನಿ/ ಪತಿಗೆ ವಿಚ್ಛೇದನ ನೀಡದೇ ಎರಡನೇ ವಿವಾಹವಾದರೆ ಗರಿಷ್ಠ 7 ವರ್ಷ ಶಿಕ್ಷೆ ನೀಡುವ ಕಾನೂನು ಜಾರಿಗೆ ಅಸ್ಸಾಂನ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತ ಕರಡು ಮಸೂದೆಗೆ ಭಾನುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಲವ್ ಜಿಹಾದ್ ನಿಷೇಧಿಸುವ ಕಾಯ್ದೆ ಜಾರಿಯ ಘೋಷಣೆ ಮತ್ತು ಈ ಹಿಂದೆ ಬಾಲ್ಯವಿವಾಹ ಪಿಡುಗಿಗೆ ಕಡಿವಾಣ ಹಾಕಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧಿಸುವ ಕಾನೂನು ಜಾರಿಗೆ ನಿರ್ಧರಿಸಲಾಗಿದೆ. ಈ ನಿಯಮ ಯಾವುದೇ ಧರ್ಮದವರಿಗಾದರೂ ಅನ್ವಯವಾಗುತ್ತದೆ. ಈ ಕಾಯ್ದೆ ಅನ್ವಯ ಮೊದಲ ಪತ್ನಿಯ ಅನುಮತಿ ಇಲ್ಲದೆ ಅಥವಾ ಮೊದಲ ಪತ್ನಿಗೆ ಡೈವೋರ್ಸ್ ನೀಡದೇ ಎರಡನೇ ಮದುವೆ ಆದಲ್ಲಿ ಆರೋಪಿಗೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಬಹುಪತ್ನಿತ್ವವನ್ನು ಅಸ್ಸಾಂ ಸರ್ಕಾರ ಎಂದಿಗೂ ಒಪ್ಪುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಮಹಿಳೆಯ ಘನತೆಯನ್ನು ಕಾಆಡಲು ರಾಜ್ಯ ಸರ್ಕಾರ ಬದ್ಧ ಎಂದರು. ಜೊತೆಗೆ ಸಂತ್ರಸ್ತ ವ್ಯಕ್ತಿಗೆ ಮುಂದಿನ ಜೀವನ ಸಾಗಿಸಲು ಅನುವಾಗುವಂತೆ ಆರ್ಥಿಕ ನೆರವು ನೀಡಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಲಿಂಗ ಸಮಾನತೆ, ಮಹಿಳೆಯರ ಹಕ್ಕುಗಳ ರಕ್ಷಣೆ, ವಿವಾಹದ ಪಾವಿತ್ರ್ಯತೆ ಕಾಪಾಡುವ ವಿಶಾಲ ಪ್ರಯತ್ನದ ಭಾಗವಾಗಿ ಈ ಕಾಯ್ದೆ ರೂಪಿಸಲಾಗುತ್ತಿದೆ. ಜೊತೆಗೆ ವೈಯಕ್ತಿಕ ಕಾನೂನುಗಳು, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ತತ್ವಗಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ