ಪ್ರಧಾನಿ ಮೋದಿಗೆ ಭಾರಿ ಭದ್ರತಾ ಲೋಪ: 7 ಪೊಲೀಸರ ಅಮಾನತು ಮಾಡಿದ ಸರ್ಕಾರ

By BK AshwinFirst Published Nov 26, 2023, 5:53 PM IST
Highlights

ಕಳೆದ ವರ್ಷ ಜನವರಿ 5 ರಂದು ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ಭದ್ರತಾ ಲೋಪ ಸಂಭವಿಸಿತ್ತು. ಈಗ 7 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 

ನವದೆಹಲಿ (ನವೆಂಬರ್ 26, 2023): ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತಾ ಲೋಪ ಸಂಭವಿಸಿತ್ತು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡಿದ್ದವು. ಆದರೀಗ ಈ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ 7 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಫಿರೋಜ್‌ಪುರ ಜಿಲ್ಲೆಯ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇಬ್ಬರು ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ.

ಕಳೆದ ವರ್ಷ ಜನವರಿ 5 ರಂದು ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ಭದ್ರತಾ ಲೋಪ ಸಂಭವಿಸಿತ್ತು. ಪ್ರತಿಭಟನಾ ನಿರತ ರೈತರ ದಿಗ್ಬಂಧನದಿಂದಾಗಿ ಪ್ರಧಾನಿ ಬೆಂಗಾವಲು ಪಡೆ ಸುಮಾರು 20 ನಿಮಿಷಗಳ ಕಾಲ ಮೇಲ್ಸೇತುವೆಯಲ್ಲಿ ಸಿಲುಕಿತ್ತು. ಬಿಜೆಪಿ ನಾಯಕರು ಆಗಿನ ಚರಣ್‌ಜಿತ್ ಸಿಂಗ್ ಚನ್ನಿ ಸರ್ಕಾರದ ವೈಫಲ್ಯದ ಬಗ್ಗೆ ಗುರಿಯಿಟ್ಟುಕೊಂಡಿದ್ದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿಯವರ ಪ್ರಯಾಣದ ಪ್ಲ್ಯಾನ್‌ ಬದಲಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು.

Latest Videos

ಇದನ್ನು ಓದಿ: ರೋಡ್‌ಶೋ ವೇಳೆ ಮೋದಿಯತ್ತ ಎಸೆದ ಮೊಬೈಲ್‌ ತಡೆದ ಭದ್ರತಾ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!

ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಭದ್ರತಾ ಉಲ್ಲಂಘನೆಗೆ ಹಲವಾರು ರಾಜ್ಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿತ್ತು. ಈ ಹಿನ್ನೆಲೆ ಪ್ರಸ್ತುತ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಇದೀಗ 7 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಆಗ ಫಿರೋಜ್‌ಪುರ ಪೊಲೀಸ್ ಮುಖ್ಯಸ್ಥ ಮತ್ತು ಈಗ ಬಟಿಂಡಾ ಎಸ್‌ಪಿ ಗುರ್ಬಿಂದರ್ ಸಿಂಗ್ ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು. ಇದೇ ರೀತಿ ನವೆಂಬರ್ 22 ರ ಆದೇಶದಲ್ಲಿ ಇನ್ನೂ 6 ಪೊಲೀಸರ ಹೆಸರನ್ನು ಪಟ್ಟಿ ಮಾಡಿದ್ದು, ಶಿಸ್ತು ಕ್ರಮ ನೀಡಲಾಗಿದೆ.

ಪಂಜಾಬ್‌ ರಾಜ್ಯ ಗೃಹ ಇಲಾಖೆ ಆದೇಶದ ಪ್ರಕಾರ ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳಾದ ಪರ್ಸನ್ ಸಿಂಗ್ ಮತ್ತು ಜಗದೀಶ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಜತೀಂದರ್ ಸಿಂಗ್ ಮತ್ತು ಬಲ್ವಿಂದರ್ ಸಿಂಗ್, ಸಬ್ ಇನ್‌ಸ್ಪೆಕ್ಟರ್ ಜಸ್ವಂತ್ ಸಿಂಗ್ ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಮೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ ಕೇಸ್‌: ಫಿರೋಜ್‌ಪುರ ಎಸ್‌ಎಸ್‌ಪಿಗೆ ಸುಪ್ರೀಂ ಕೋರ್ಟ್‌ ತರಾಟೆ

7 ಪೊಲೀಸರು ಪಂಜಾಬ್ ನಾಗರಿಕ ಸೇವೆಗಳ (ಶಿಕ್ಷೆ ಮತ್ತು ಮೇಲ್ಮನವಿ) ನಿಯಮಗಳು, 1970 ರ ನಿಯಮ 8 ರ ಅಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆದೇಶವು ಹೇಳುತ್ತದೆ. ಈ ನಿಯಮಗಳ ಅಡಿಯಲ್ಲಿ ದಂಡಗಳು, ಬಡ್ತಿಯನ್ನು ತಡೆಹಿಡಿಯುವುದರಿಂದ ಹಿಡಿದು ಸೇವೆಯಿಂದ ವಜಾಗೊಳಿಸುವವರೆಗೆ ಇರುತ್ತದೆ ಎಂದೂ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: PM Security Breach: ಫ್ಲೈಓವರ್‌ನಲ್ಲಿ 20 ನಿಮಿಷ ಕಳೆದ ಮೋದಿ, ಪಂಜಾಬ್ ಸರ್ಕಾರದ ಪ್ರೀಪ್ಲ್ಯಾನ್.?

click me!