ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕ್‌ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಭಾರತೀಯ ನೌಕಾಪಡೆಯ 7 ಸಿಬ್ಬಂದಿಯನ್ನು ಹಾಗೂ ಒಬ್ಬ ಹವಾಲಾ ಆಪರೇಟರ್‌ನನ್ನು ಬಂಧಿಸಲಾಗಿದೆ.
ಅಮರಾವತಿ/ಕಾರವಾರ [ಡಿ.21]: ಪಾಕಿಸ್ತಾನದ ಜೊತೆಗೆ ಕೈಜೋಡಿಸಿ ಭಾರತದ ವಿರುದ್ಧ ಬೇಹುಗಾರಿಕೆಯಲ್ಲಿ ತೊಡಗಿದ್ದ ಜಾಲವನ್ನು ಭೇದಿಸಿರುವ ಆಂಧ್ರಪ್ರದೇಶ ‘ಕೌಂಟರ್ ಇಂಟೆಲಿಜೆನ್ಸ್’ ವಿಭಾಗದ ಪೊಲೀಸರು, ಪಾಕ್‌ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಭಾರತೀಯ ನೌಕಾಪಡೆಯ 7 ಸಿಬ್ಬಂದಿಯನ್ನು ಹಾಗೂ ಒಬ್ಬ ಹವಾಲಾ ಆಪರೇಟರ್‌ನನ್ನು ಬಂಧಿಸಿದ್ದಾರೆ. ಈ 7 ಸಿಬ್ಬಂದಿಯಲ್ಲಿ ಇಬ್ಬರು ಕಾರವಾರದ ಕದಂಬ ನೌಕಾನೆಲೆಯಲ್ಲಿ ನಿಯೋಜಿತರಾದ ಸಿಬ್ಬಂದಿ ಕೂಡ ಇದ್ದಾರೆ.
‘ಈ ಸಿಬ್ಬಂದಿಯನ್ನು ಹಣದ ಆಮಿಷ ಒಡ್ಡಿ ‘ಹನಿ ಟ್ರ್ಯಾಪ್’ (ಸುಂದರ ಹುಡುಗಿಯರ ಮೋಹದ ಬಲೆಗೆ ಬೀಳಿಸುವ ಜಾಲ) ಮಾಡಲಾಗಿತ್ತು. ಈ ಮೂಲಕ ಇವರಿಂದ ಕಾರವಾರ ನೌಕಾನೆಲೆ ಸೇರಿದಂತೆ ಭಾರತದ ಯುದ್ಧನೌಕೆಗಳ ಚಲನವಲನಗಳ ಹಾಗೂ ಕಾರ್ಯಾಚರಣೆಗಳ ಬಗ್ಗೆ ಗುಪ್ತ ಮಾಹಿತಿಯನ್ನು ಪಾಕಿಸ್ತಾನವು ಪಡೆಯುತ್ತಿತ್ತು. 7 ಜನರಲ್ಲಿ ಇಬ್ಬರು ಕಾರವಾರದಲ್ಲಿ ನಿಯೋಜಿತರಾಗಿದ್ದರೆ, ಉಳಿದವರು ಮುಂಬೈ ಹಾಗೂ ವಿಶಾಖಪಟ್ಟಣದ ನೌಕಾಪಡೆ ನೆಲೆಯಲ್ಲಿ ನಿಯೋಜಿತರಾಗಿದ್ದರು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರವಾರ ನೌಕಾನೆಲೆಯಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆ ಇರುವುದು ಇಲ್ಲಿ ಗಮನಾರ್ಹ.
undefined
ಅಲ್ಲದೆ, ಈ ಪ್ರಕರಣ ಸಂಬಂಧ ದೇಶದ ವಿವಿಧ ಭಾಗಗಳಿಂದ ಹವಾಲಾ ದಂಧೆಯಲ್ಲಿ ತೊಡಗಿದ್ದ ಒಬ್ಬನನ್ನು ಸಹ ಸೆರೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಹನಿ ಟ್ರ್ಯಾಪ್: ಫಸ್ಟ್ ರಿಯಾಕ್ಷನ್ ಕೊಟ್ಟ ಸಿಎಂ ಯಡಿಯೂರಪ್ಪ...
ಬಂಧಿತರಿಂದ ಮೊಬೈಲ್, ಅಂತಾರಾಷ್ಟ್ರೀಯ ವ್ಯವಹಾರ ಮಾಡಿದ ಬ್ಯಾಂಕ್ ದಾಖಲೆ, ನೌಕಾನೆಲೆಗಳ ಆಂತರಿಕ ಸಿಗ್ನಲ್ ನಕ್ಷೆ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
‘ರಾಜ್ಯ ಪೊಲೀಸ್ ಇಲಾಖೆಯ ಗುಪ್ತಚರ ದಳ, ಕೇಂದ್ರೀಯ ಗುಪ್ತಚರ ತಂಡಗಳು ಹಾಗೂ ನೌಕಾಪಡೆಯ ಗುಪ್ತಚರ ದಳಗಳು ‘ಡಾಲ್ಫಿನ್ಸ್ ನೋಸ್’ ಹೆಸರಿನ ಜಂಟಿ ಕಾರ್ಯಾಚರಣೆ ಮೂಲಕ ದೇಶದ ವಿರುದ್ಧವೇ ಬೇಹುಗಾರಿಕೆಯಲ್ಲಿ ತೊಡಗಿದ್ದ ಜಾಲವನ್ನು ಭೇದಿಸಿದ್ದೇವೆ. ಈ ಸಂಬಂಧ ಪ್ರಕರಣ ದಾಖಲಿಸಿ ದೇಶದ ವಿವಿಧ ಭಾಗಗಳಿಂದ ಹವಾಲಾ ದಂಧೆ ನಡೆಸುತ್ತಿದ್ದವರು ಹಾಗೂ ನೌಕಾಪಡೆಯ 7 ಸಿಬ್ಬಂದಿಯನ್ನು ಬಂಧಿಸಿದ್ದೇವೆ. ಆದರೆ ತನಿಖೆ ಮುಂದುವರಿದಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.