ಒಂದೇ ದಿನ ಸೋಂಕಿಗೆ 200 ಜನ ಬಲಿ| ಸಾವಿನ ಸಂಖ್ಯೆ 3345ಕ್ಕೆ ಏರಿಕೆ, 5092 ಹೊಸ ಸೋಂಕಿತರು ಪತ್ತೆ| ಮಹಾನಗರಗಳಲ್ಲಿ ಮುಂದುವರೆದ ಕೊರೋನಾ ವೈರಸ್ ಸ್ಫೋಟ
ನವದೆಹಲಿ(ಮೇ.21): ದೇಶದಲ್ಲಿ ಕೊರೋನಾ ಹಾವಳಿ ಮತ್ತಷ್ಟುಹೆಚ್ಚಳವಾಗಿದ್ದು ಬುಧವಾರ ಒಂದೇ ದಿನ 200 ಜನರನ್ನು ಬಲಿ ಪಡೆದಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 3355ಕ್ಕೆ ತಲುಪಿದೆ. ಮತ್ತೊಂದೆಡೆ ಬುಧವಾರ ಮತ್ತೆ 5092 ಸೋಂಕಿತರು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,10,590ಕ್ಕೆ ತಲುಪಿದೆ. ಇದೇ ವೇಳೆ ಈವರೆಗೆ 44757 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಇನ್ನು ದೇಶದಲ್ಲೇ ಅತಿ ಹೆಚ್ಚು ಸೋಂಕು ಕಂಡುಬಂದಿರುವ ಮಹಾರಾಷ್ಟ್ರದಲ್ಲಿ ಸತತ 4ನೇ ದಿನವೂ 2000ಕ್ಕಿಂತ ಹೆಚ್ಚಿನ ಕೇಸು ಬೆಳಕಿಗೆ ಬಂದಿದೆ. ಬುಧವಾರ ರಾಜ್ಯದಲ್ಲಿ 2250 ಹೊಸ ಕೇಸಿನೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 39297ಕ್ಕೆ ತಲುಪಿದೆ. ಜೊತೆಗೆ 65 ಜನ ಒಂದೇ ದಿನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1390ಕ್ಕೆ ಮುಟ್ಟಿದೆ. ಉಳಿದಂತೆ ತಮಿಳುನಾಡಿನಲ್ಲಿ 743 ಕೇಸು, 3 ಸಾವು, ದೆಹಲಿಯಲ್ಲಿ 534 ಕೇಸು, 10 ಸಾವು, ಗುಜರಾತ್‌ನಲ್ಲಿ 398 ಕೇಸು, 30 ಸಾವು, ಮಧ್ಯಪ್ರದೇಶದಲ್ಲಿ 270 ಸೋಂಕು, 9 ಸಾವು ದಾಖಲಾಗಿದೆ.
ಮಹಾ ಸ್ಫೋಟ: ಈ ನಡುವೆ ಮಹಾನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಸೋಂಕು ಬೆಳಕಿಗೆ ಬರುವುದು ಮುಂದುವರೆದಿದೆ. ಬುಧವಾರ ಮುಂಬೈನಲ್ಲಿ 1372 ಕೇಸು, 41 ಸಾವು, ಚೆನ್ನೈನಲ್ಲಿ 557 ಕೇಸು, 2 ಸಾವು, ಅಹಮದಾಬಾದ್‌ನಲ್ಲಿ 271 ಕೇಸು, 26 ಸಾವು, ಪುಣೆಯಲ್ಲಿ 237 ಸೋಂಕು, 15 ಸಾವು, ಥಾಣೆಯಲ್ಲಿ 186 ಕೇಸು, 05 ದಾಖಲಾಗಿದೆ.