ಪಾಕಿಸ್ತಾನದಿಂದ ಬಂದ ಗೀತಾಗೆ ಕೊನೆಗೂ ಸಿಕ್ಕರು ಪೋಷಕರು!

By Kannadaprabha NewsFirst Published Mar 8, 2021, 7:34 AM IST
Highlights

ಕೊನೆಗೂ ಪಾಕ್‌ನಿಂದ ಬಂದ| ಗೀತಾಗೆ ಸಿಕ್ಕರು ಪೋಷಕರು!| 20 ವರ್ಷದ ನಂತರ ಅಮ್ಮನ ನೋಡಿದ ಗೀತಾ!| ಅಚಾನಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದಳು| 5 ವರ್ಷದ ಹಿಂದೆ ಭಾರತಕ್ಕೆ ಮರಳಿದ್ದ ಯುವತಿ| ಈಗ ಕುಟುಂಬದ ಜತೆ ಸಮ್ಮಿಲನದ ಭಾವುಕ ಕ್ಷಣ| ಹೊಟ್ಟೆಮೇಲಿನ ಸುಟ್ಟಕಲೆಯ ಸುಳಿವು ನೀಡಿದ ಫಲ

ಭೋಪಾಲ್‌/ಪರಭಣಿ(ಮಾ.08): ಸಂಝೌತಾ ಎಕ್ಸ್‌ಪ್ರೆಸ್‌ ರೈಲನ್ನೇರಿ 20 ವರ್ಷದ ಹಿಂದೆ ಅಕಸ್ಮಾತ್‌ ಪಾಕಿಸ್ತಾನಕ್ಕೆ ಹೋಗಿ ಕಾಣೆಯಾಗಿದ್ದ ಶ್ರವಣದೋಷವುಳ್ಳ ಬಾಲಕಿ ಗೀತಾ, 2015ರಲ್ಲಿ ಭಾರತದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಪಾಕಿಸ್ತಾನದ ಎಧಿ ಪ್ರತಿಷ್ಠಾನದ ಪ್ರಯತ್ನದಿಂದ ಭಾರತಕ್ಕೆ ಮರಳಿದ್ದಳು. ಆದರೆ ಈಕೆಗೆ ತಂದೆ-ತಾಯಿ ಯಾರೆಂದೇ ಗೊತ್ತಿರಲಿಲ್ಲ. ಇದೀಗ 5 ವರ್ಷದ ಶ್ರಮದ ನಂತರ ಈಕೆಗೆ ತಾಯಿ ಸಿಕ್ಕಿದ್ದಾಳೆ. ತಾಯಿಯನ್ನು 20 ವರ್ಷದ ನಂತರ ತಬ್ಬಿಕೊಂಡ ಗೀತಾಳಿಗೆ ಆದ ಆನಂದ ಅಂತಿಂಥದ್ದಲ್ಲ.

ಹೌದು. ಈ ಭಾವುಕ ದೃಶ್ಯ ಕಂಡುಬಂದಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ. 29 ವರ್ಷದ ಗೀತಾಳ ತಾಯಿ, ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಜಿಂಟೂರು ಗ್ರಾಮದ ಮೀನಾ ಎಂಬುದು ಮೇಲ್ನೋಟಕ್ಕೆ ಖಚಿತಪಟ್ಟಿದೆ ಹಾಗೂ ಗೀತಾಳ ನಿಜನಾಮ ರಾಧಾ ವಾಘ್ಮಾರೆ ಎಂಬುದು ಗೊತ್ತಾಗಿದೆ. ಡಿಎನ್‌ಎ ಪರೀಕ್ಷೆ ಕೂಡ ಖಚಿತವಾದರೆ ಇದು ಅಧಿಕೃತವಾಗಲಿದೆ.

9 ವರ್ಷದ ಬಾಲಕಿ ಇದ್ದಾಗ ಗೀತಾ ಅದ್ಹೇಗೋ ಸಂಝೌತಾ ಎಕ್ಸ್‌ಪ್ರೆಸ್‌ ರೈಲನ್ನೇರಿ ಪಾಕಿಸ್ತಾನಕ್ಕೆ ಹೋಗಿದ್ದಳು. ಆಗಿನಿಂದ ಪಾಕ್‌ನಲ್ಲೇ ಇದ್ದ ಈಕೆ ಸುಷ್ಮಾ ಸ್ವರಾಜ್‌ರ ಶ್ರಮದಿಂದ 2015ರಲ್ಲಿ ಭಾರತಕ್ಕೆ ಮರಳಿದ್ದಳು. ತಂದೆ-ತಾಯಿ ಯಾರೆಂದು ಹಾಗೂ ಊರು ಯಾವುದೆಂದು ಮರೆತ ಕಾರಣ ಈಕೆ ಇಂದೋರ್‌ನ ಆನಂದ ಫೌಂಡೇಶನ್‌ ಎಂಬ ಸಂಸ್ಥೆಯ ಬಾಲಿಕಾ ಗೃಹದಲ್ಲಿದ್ದಳು. ಆಗಿನಿಂದ 24 ದಂಪತಿಗಳು, ‘ಈಕೆ ನಮ್ಮ ಮಗಳು’ ಎಂದು ವಾದಿಸಿದ್ದರಾದರೂ ಡಿಎನ್‌ಎ ತಾಳೆ ಆಗಿರಲಿಲ್ಲ.

ಆದರೆ ಇತ್ತೀಚೆಗೆ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ಫೌಂಡೇಶನ್‌ನವರು ಮಹಾರಾಷ್ಟ್ರದ ಪರಭಣಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರ ಮೂಲಕ ಗೀತಾಳ ತಾಯಿಯ ಸುಳಿವು ಸಿಕ್ಕಿದೆ. ‘ನನ್ನ ಮಗಳು 1999-2000ನೇ ಇಸವಿಯಿಂದ ಕಾಣೆಯಾಗಿದ್ದಳು. ಆಕೆಯ ಹೊಟ್ಟೆಯ ಮೇಲೆ ಸುಟ್ಟಕಲೆ ಇದೆ’ ಎಂದು ಎಂದು 71 ವರ್ಷದ ವೃದ್ಧೆ ಗೀತಾ ಹೇಳಿದ್ದಳು. ಗೀತಾಳ ಹೊಟ್ಟೆಯನ್ನು ಪೊಲೀಸರು ಪರಿಶೀಲಿಸಿದಾಗ ಸುಟ್ಟಕಲೆ ಇರುವುದು ದೃಢಪಟ್ಟಿದೆ.

ಇನ್ನು ಗೀತಾಗೆ ‘ನಿಮ್ಮ ಊರಲ್ಲಿ ಏನು ಇತ್ತು?’ ಎಂದು ಪ್ರಶ್ನಿಸಿದಾಗ, ‘ಅಲ್ಲಿ ಕಬ್ಬಿನ ಗದ್ದೆ ಇತ್ತು. ರೈಲು ನಿಲ್ದಾಣದ ಮುಂದೆ ಹೆರಿಗೆ ಆಸ್ಪತ್ರೆ ಇತ್ತು. ಡೀಸೆಲ್‌ ಎಂಜಿನ್‌ ರೈಲು ಓಡುತ್ತಿತ್ತು’ ಎಂದಿದ್ದಾಳೆ ಹಾಗೂ ತನ್ನ ಊರಿನ ಇಷ್ಟದ ಊಟ-ತಿಂಡಿಯ ವಿವರ ನೀಡಿದ್ದಾಳೆ. ಈ ವಿವರವೆಲ್ಲ ಜಿಂಟೂರಿನ ಈಗಿನ ಸ್ಥಿತಿಗೆ ಹೋಲಿಕೆ ಆಗುತ್ತಿದೆ.

ಇದರ ನಡುವೆಯೇ, ಮೀನಾ ಇಂದೋರ್‌ಗೆ ಆಗಮಿಸಿ ಮಗಳು ಗೀತಾಳನ್ನು ನೋಡಿದ್ದಾಳೆ. ತಾಯಿ-ಮಗಳು ತಬ್ಬಿಕೊಂಡು ಖುಷಿಪಟ್ಟಿದ್ದಾರೆ. ಆದರೆ ಡಿಎನ್‌ಎ ಫಲಿತಾಂಶ ಇನ್ನೂ ಬರಬೇಕು ಹಾಗೂ 20 ವರ್ಷದ ಹಿಂದಿನ ನೆನಪುಗಳು ಇನ್ನೂ ಗೀತಾಗೆ ಸಂಪೂರ್ಣ ಮರುಕಳಿಸದ ಕಾರಣ ತಾಯಿಯ ಜತೆ ಊರಿಗೆ ಹೋಗಲು ಇನ್ನೂ ಮನಸ್ಸು ಮಾಡಿಲ್ಲ.

click me!