ಹಡಗುಗಳ ರಕ್ಷಣೆಗೆ ಭಾರತದ 5 ಯುದ್ಧನೌಕೆ ದೌಡು: ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಮತ್ತೆ ಹೌತಿ ದಾಳಿ

By Kannadaprabha NewsFirst Published Jan 1, 2024, 11:37 AM IST
Highlights

ಈ ವಲಯದಲ್ಲಿ 4 ಡೆಸ್ಟ್ರಾಯರ್‌ (ಯುದ್ಧನೌಕೆ), 1 ಫ್ರೈಗೇಟ್‌ (ಯುದ್ಧನೌಕೆ), ಪಿ-8ಐ ಕಣ್ಗಾವಲು ವಿಮಾನ, ಪ್ರಿಡೇಟರ್‌ ಡ್ರೋನ್‌, ಡೋರ್ನಿಯರ್‌ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾ ಪಡೆ ನಿಯೋಜಿಸಿದೆ.

ನವದೆಹಲಿ (ಜನವರಿ 1, 2024): ಅಂತಾರಾಷ್ಟ್ರೀಯ ಕಡಲ ಸೀಮೆಯಲ್ಲಿ ಭಾರತಕ್ಕೆ ಬರುವ ಮತ್ತು ಭಾರತದಿಂದ ತೆರಳುವ ಸರಕು ಹಡಗುಗಳ ಮೇಲೆ ಕಡಲ್ಗಳ್ಳರು ಮತ್ತು ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ನೌಕಾಪಡೆಯು ಉತ್ತರ, ಕೇಂದ್ರ ಅರಬ್ಬಿ ಸಮುದ್ರ ಮತ್ತು ಗಲ್ಫ್‌ ಆಫ್‌ ಏಡನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.

ಈಗಾಗಲೇ ಇರುವ ಯುದ್ಧ ನೌಕೆಗಳ ಜೊತೆಗೆ ಹೆಚ್ಚುವರಿ ಯುದ್ಧನೌಕೆ ಮತ್ತು ಕಣ್ಗಾವಲು ವಿಮಾನಗಳನ್ನು ನಿಯೋಜಿಸುವ ಮೂಲಕ ಹಡಗುಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಿದೆ. ಸದ್ಯ ಈ ವಲಯದಲ್ಲಿ 4 ಡೆಸ್ಟ್ರಾಯರ್‌ (ಯುದ್ಧನೌಕೆ), 1 ಫ್ರೈಗೇಟ್‌ (ಯುದ್ಧನೌಕೆ), ಪಿ-8ಐ ಕಣ್ಗಾವಲು ವಿಮಾನ, ಪ್ರಿಡೇಟರ್‌ ಡ್ರೋನ್‌, ಡೋರ್ನಿಯರ್‌ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾ ಪಡೆ ನಿಯೋಜಿಸಿದೆ.

ಭಾರತಕ್ಕೆ ಆಗಮಿಸುತ್ತಿದ್ದ ಹಡಗಿನ ಮೇಲೆ ಉಗ್ರರ ದಾಳಿ, ಹೌತಿ ಭಯೋತ್ಪಾದಕರಿಗೆ ಚೀನಾ ಕುಮ್ಮಕ್ಕು?

ಈ ವಲಯದಲ್ಲಿ ಪದೇ ಪದೇ ಹಡಗುಗಳ ಮೇಲೆ ದಾಳಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನೌಕಾಪಡೆ, ಹೆಚ್ಚುವರಿ ಪಡೆಗಳ ನಿಯೋಜನೆ ಮೂಲಕ ಕರಾವಳಿ ಕಾವಲು ಪಡೆಯ ಸಹಯೋಗದಲ್ಲಿ, ಕರಾವಳಿ ವಲಯದಲ್ಲಿ ಬರುವ ವಿಶೇಷ ಆರ್ಥಿಕ ವಲಯಗಳಿಗೆ ರಕ್ಷಣೆ ನೀಡುವ, ಭಾರತಕ್ಕೆ ಬರುವ ಮತ್ತು ಹೋಗುವ ಹಡಗುಗಳಿಗೆ ರಕ್ಷಣೆ ನೀಡುವ ಮತ್ತು ಇಡೀ ವಲಯಕ್ಕೆ ಭದ್ರತೆ ಒದಗಿಸುವ ಕೆಲಸವನ್ನು ಆರಂಭಿಸಿದೆ.

ಹಾಲಿ ಈ ವಲಯದಲ್ಲಿ ಐಎನ್‌ಎಸ್‌ ಕೊಚ್ಚಿ ಮತ್ತು ಐಎನ್‌ಎಸ್‌ ಕೋಲ್ಕತಾ ಯುದ್ಧನೌಕೆಗಳಿದ್ದು ಇವುಗಳ ಜೊತೆಗೆ ಇದೀಗ ಐಎನ್‌ಎಸ್‌ ಮುರ್ಮುಗೋವಾ ಯುದ್ಧನೌಕೆಯನ್ನು ನಿಯೋಜಿಸಲಾಗಿದೆ.

ಮಂಗಳೂರಿಗೆ ಬರ್ತಿದ್ದ ಹಡಗು ದಾಳಿಕೋರರು ಸಮುದ್ರದ ಆಳದಲ್ಲಿದ್ರೂ ಪತ್ತೆ ಮಾಡ್ತೇವೆ: ರಾಜನಾಥ್‌ ಸಿಂಗ್ ಎಚ್ಚರಿಕೆ

ಇತ್ತೀಚೆಗೆ ಭಾರತಕ್ಕೆ ಬರುತ್ತಿದ್ದ, ಭಾರತದಿಂದ ಹೊರಟಿದ್ದ ಹಡಗುಗಳ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಮತ್ತು ಕಡಲ್ಗಳ್ಳರು ಕ್ಷಿಪಣಿ ಮತ್ತು ಡ್ರೋನ್‌ ಬಳಸಿ ದಾಳಿ ನಡೆಸಿದ್ದರು.

ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಮತ್ತೆ ‘ಹೌತಿ’ ದಾಳಿ
ಕೆಂಪು ಸಮುದ್ರದಲ್ಲಿ ಉಗ್ರ ಚಟುವಟಿಕೆಯನ್ನು ಹೆಚ್ಚಿಸಿರುವ ಇರಾನ್‌ ಬೆಂಬಲಿತ ಯೆಮೆನ್‌ನ ಹೌತಿ ಉಗ್ರರು ಶನಿವಾರವೂ ಸರಕು ಸಾಗಣೆ ಹಡಗೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಮೆರಿಕ ನೌಕಾಪಡೆ ಪ್ರತಿದಾಳಿ ನಡೆಸಿದ್ದು, 3 ಹೌತಿ ಉಗ್ರರ ಹಡಗುಗಳನ್ನು ಮುಳುಗಿಸಿದೆ.

25 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಡ್ರೋನ್‌ ದಾಳಿ

ಡೆನ್ಮಾರ್ಕ್‌ ಒಡೆತನದ ಹಾಗೂ ನಿರ್ವಹಣೆಯ ಮಾರ್ಸೆಕ್‌ ಹ್ಯಾಂಗ್‌ಜೋ ಹಡಗಿನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಹಡಗಿನ ರಕ್ಷಣೆಯ ಹೊಣೆ ಹೊತ್ತಿದ್ದ ಅಮೆರಿಕ ನೌಕಾಪಡೆ, ಹೌತಿ ಉಗ್ರರ ಹಡಗುಗಳನ್ನು ಹಿಂತಿರುಗುವಂತೆ ಎಚ್ಚರಿಕೆ ನೀಡಿದೆ. ಈ ವೇಳೆ ಉಗ್ರರು ದಾಳಿ ಆರಂಭಿಸಿದ ಕಾರಣ, ನೌಕಾಪಡೆ ಪ್ರತಿದಾಳಿ ನಡೆಸಿದ್ದು, ಉಗ್ರರ 3 ಹಡಗುಗಳನ್ನು ಮುಳುಗಿಸಿದೆ. ಮತ್ತೊಂದು ಹಡಗು ತಪ್ಪಿಸಿಕೊಂಡಿದೆ. ದಾಳಿಯ ಸಮಯದಲ್ಲಿ ಉಗ್ರರ ಹಡಗುಗಳು ಹ್ಯಾಂಗ್‌ಜೋ ಹಡಗಿನ ತೀರ ಸಮೀಪಕ್ಕೆ ಬಂದಿದ್ದವು. ಈ ದಾಳಿಯಿಂದಾಗಿ ಹಡಗಿನಲ್ಲಿದ್ದ ಉಗ್ರರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಹೇಳಿದೆ.

ಹ್ಯಾಂಗ್‌ ಜೋ ಹಡಗಿನ ಮೇಲೆ ಕಳೆದ 24 ಗಂಟೆಯಲ್ಲಿ 2 ಬಾರಿ ದಾಳಿ ನಡೆದಿದ್ದು, ಈ ಮೊದಲು ನಡೆದ ಕ್ಷಿಪಣಿ ದಾಳಿಯನ್ನೂ ಸಹ ಅಮೆರಿಕ ನೌಕಾಪಡೆ ತಪ್ಪಿಸಿತ್ತು. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಆರಂಭವಾದ ಬಳಿಕ ಹಮಾಸ್‌ ಬೆಂಬಲಿಗರಾದ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ದಾಳಿಯ ಪ್ರಮಾಣವನ್ನು ಹೆಚ್ಚು ಮಾಡಿದ್ದಾರೆ. ಜಗತ್ತಿನ ಶೇ.12ರಷ್ಟು ವ್ಯಾಪಾರಿ ಹಡಗುಗಳು ಈ ಮಾರ್ಗದಲ್ಲೇ ಓಡಾಡುವುದರಿಂದ ಇಲ್ಲಿನ ದೇಶಗಳು ಅಮೆರಿಕದೊಂದಿಗೆ ಕೆಲವು ದಿನಗಳ ಕಾಲ ನೌಕಾ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅಮೆರಿಕ ಹೇಳಿದೆ.

click me!