ಬ್ರಿಟಿಷ್ ಕಾಯ್ದೆ ರದ್ದತಿ ಪರಿಣಾಮ ಇನ್ನು 420 ವಂಚನೆ ಅಲ್ಲ, 302 ಕೊಲೆ ಅಲ್ಲ. ಚಿರಪರಿಚಿತ ಕಾಯ್ದೆಗಳ ಸಂಖ್ಯೆ ಮಾಯ.ಇನ್ನು ಹೊಸ ನಂಬರ್ ನೆನಪಿಟ್ಟುಕೊಳ್ಳಬೇಕು
ನವದೆಹಲಿ (ಆ.13): ಅಪರಾಧಿಗಳನ್ನು ದಂಡಿಸಲು ಬ್ರಿಟಿಷರು 160 ವರ್ಷಗಳ ಹಿಂದೆ ರೂಪಿಸಿದ್ದ ಮೂರು ಕಾಯ್ದೆಗಳನ್ನು ರದ್ದುಗೊಳಿಸಿ, ಮೂರು ಹೊಸ ಶಾಸನಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಈವರೆಗೆ ದೇಶದ ಜನರಿಗೆ ಚಿರಪರಿಚಿತವಾಗಿದ್ದ ಬಹುತೇಕ ಕಾಯ್ದೆಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ.
ಕೊಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302, ವಂಚನೆ (cheating) ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 ಹಾಗೂ ಅತ್ಯಾಚಾರವೆಸಗಿದವರ ಮೇಲೆ ಐಪಿಸಿ ಸೆಕ್ಷನ್ 375, 376 ಹಾಗೂ ಕೊಲೆ ಯತ್ನ ನಡೆಸಿದವರ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ದೇಶದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಹೆಚ್ಚು ಚರ್ಚೆಯಾಗುವ ಪ್ರಕರಣಗಳ ಬಗ್ಗೆ ಮಾಹಿತಿಯುಳ್ಳವರಿಗೆ, ಸಿನಿಮಾ- ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಜನಸಾಮಾನ್ಯರಿಗೆ ಈ ಕಾಯ್ದೆಗಳು ಹೆಸರು ಅಪರೂಪಕ್ಕೊಮ್ಮೆಯಾದರೂ ಕಿವಿಗೆ ಬಿದ್ದಿರುತ್ತದೆ. ಇನ್ನು ಪೊಲೀಸರು, ವಕೀಲರು ಹಾಗೂ ಅಪರಾಧ ವರದಿಗಾರರಂತೂ ಬರೀ ಕಾಯ್ದೆ ಸಂಖ್ಯೆಗಳಿಂದಲೇ ಅಪರಾಧವನ್ನು ನಿರ್ಧರಿಸುತ್ತಾರೆ. ಕೇಂದ್ರ ಸರ್ಕಾರ ಮಂಡಿಸಿರುವ ಮೂರು ವಿಧೇಯಕಗಳು ಸಂಸದೀಯ ಸಮಿತಿ ಪರಿಶೀಲನೆ ಬಳಿಕ ಸಂಸತ್ತಿನಲ್ಲಿ ಅಂಗೀಕಾರವಾದರೆ ಈ ಎಲ್ಲ ಸಂಖ್ಯೆಗಳು ಮಾಯವಾಗಲಿವೆ. ಹೊಸ ಸಂಖ್ಯೆಗಳು ಅಸ್ತಿತ್ವಕ್ಕೆ ಬರಲಿವೆ.
ಸೆಕ್ಷನ್ 377ಗೆ ಕೊಕ್ ನೀಡಿದ ಕೇಂದ್ರ, ಪುರುಷರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯೇ ಇಲ್ಲ!
ಏನೇನು ಬದಲಾವಣೆ?: ಐಪಿಸಿ ಸೆಕ್ಷನ್ 420 ಎಂಬುದು ಜನರಿಗೆ ಅತ್ಯಂತ ಚಿರಿಪರಿಚಿತವಾದ ಪದ. ವಂಚಕರನ್ನು ‘420’ ಎಂದು ಕರೆಯುವಷ್ಟುಈ ಪದ ಜನಪ್ರಿಯವಾಗಿದೆ. ಬಾಲಿವುಡ್‌ನಲ್ಲಿ ‘ಶ್ರೀ 420’ ಹಾಗೂ ಕನ್ನಡದಲ್ಲಿ ‘ಮಿಸ್ಟರ್ 420’ ಎಂಬ ಸಿನಿಮಾ ಕೂಡ ತೆರೆ ಕಂಡಿವೆ. ವಂಚಕರ ವಿರುದ್ಧ ಇದೇ ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಆದರೆ ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ 420 ಎಂಬ ಸೆಕ್ಷನ್ನೇ ಇಲ್ಲ. ವಂಚನೆಯನ್ನು 316ನೇ ಸೆಕ್ಷನ್‌ಗೆ ಸೇರಿಸಲಾಗಿದೆ.
ಕೊಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲು ಮಾಡಲಾಗುತ್ತದೆ. ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 302 ಎಂದರೆ ಅದು ಸರಗಳ್ಳತನ ಎಂದಾಗುತ್ತದೆ. ಸೆಕ್ಷನ್ 99 ಕೊಲೆಗಳಿಗೆ ಸಂಬಂಧಿಸಿದ ಕಾಯ್ದೆಯಾಗಿದೆ.
ಕೊಲೆ ಯತ್ನ ನಡೆದಾಗ ಪೊಲೀಸರು ಐಪಿಸಿ ಸೆಕ್ಷನ್ 307ರಡಿ ಎಫ್‌ಐಆರ್ ದಾಖಲು ಮಾಡುತ್ತಾರೆ. ಆದರೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 307 ಕಳ್ಳತನಕ್ಕೆ ಸಂಬಂಧಿಸಿದ್ದಾಗಿದೆ. ಕೊಲೆ ಯತ್ನವನ್ನು ಸೆಕ್ಷನ್ 107 ಎಂದು ಪರಿಗಣಿಸಲಾಗಿದೆ.
ಎರಡನೇ ಮದುವೆ ಕಾನೂನು ಬಾಹಿರವಾಗಿದ್ರೂ ಜೀವನಾಂಶ ಪಡೆಯಲು ಪತ್ನಿ, ಮಕ್ಕಳು ಅರ್ಹ: ಹೈಕೋರ್ಟ್ ಮಹತ್ವದ ಆದೇಶ
ಅತ್ಯಾಚಾರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 375 ಹಾಗೂ 376ರಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 376 ಇಲ್ಲವೇ ಇಲ್ಲ. ಸೆಕ್ಷನ್ 63ರಡಿ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲಾಗಿದೆ.
ಐಪಿಸಿ ಸೆಕ್ಷನ್ 499 ಮಾನನಷ್ಟಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಯಾಗಿದೆ. ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 499 ಇಲ್ಲ. 354ನೇ ಸೆಕ್ಷನ್‌ನಡಿ ಮಾನನಷ್ಟಮೊಕದ್ದಮೆ ಹೂಡಲು ಅವಕಾಶವಿದೆ.