
ಕರ್ನೂಲ್(ಅ.22): ಆಂಧ್ರ ಪ್ರದೇಶದಲ್ಲಿ ಸೆ.21ರಿಂದ ಪ್ರೌಢಶಾಲೆಗಳು ಆರಂಭವಾದ ಬೆನ್ನಲ್ಲೇ ಕರ್ನೂಲ್ ಜಿಲ್ಲೆಯಲ್ಲಿ 9ರಿಂದ 10ನೇ ತರಗತಿಯ 27 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಶ್ರೀಶೈಲಂ ಮಂಡಲದ ಸುನ್ನಿಪೆಂಟಾ ಪ್ರದೇಶದ ನಾಲ್ಕು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಶಾಲೆಗಳನ್ನು 10 ದಿನಗಳ ಮಟ್ಟಿಗೆ ಮುಚ್ಚುವಂತೆ ಹಾಗೂ ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡುವಂತೆ ಆದೇಶ ನೀಡಿದ್ದಾರೆ.
"
ಆಟೋ ರಿಕ್ಷಾಗಳಲ್ಲಿ ವಿದ್ಯಾರ್ಥಿಗಳು ಆಗಮಿಸುವ ವೇಳೆ ಕೊರೋನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಗಳು ಇವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹೀಗಾಗಿ ಸೋಂಕು ಕಾಣಿಸಿಕೊಂಡ ನಾಲ್ಕು ಶಾಲೆಗಳ ಎಲ್ಲಾ ಶಿಕ್ಷಕರು ಹಾಗೂ ಶಾಲೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನೂಲ್ ಜಿಲ್ಲಾ ಶಿಕ್ಷಣ ಅಧಿಕಾರಿ ಸಾಯಿರಾಮ್, ಪೋಷಕರ ಒಪ್ಪಿಗೆಯೊಂದಿಗೆ ಜಿಲ್ಲೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ 25,000 ದಿಂದ 30 ಸಾವಿರ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಕೊರೋನಾ ನಿಯಮಾವಳಿಗಳನ್ನು ಸೂಕ್ತವಾಗಿ ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಂಧ್ರ ಪ್ರದೇಶದಲ್ಲಿ 9, 10 ತರಗತಿ ಹಾಗೂ ಪದವಿ ಪೂರ್ವ 11 ಹಾಗೂ 12ನೇ ತರಗತಿಗಳು ಸೆ.21ರಿಂದ ಆರಂಭವಾಗಿದ್ದವು. ಆದರೆ, ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ