
ಭೋಪಾಲ್: ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 23 ವರ್ಷದ ಯುವತಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಇಂದೋರ್ ನಿವಾಸಿಯಾಗಿರುವ ಪರಿಣಿತಾ ಜೈನ್, ಸೋದರ ಸಂಬಂಧಿಯ ಮದುವೆಯಲ್ಲಿ ಭಾಗಿಯಾಗಿದ್ದರು. ಪರಿಣಿತಾ ಡ್ಯಾನ್ಸ್ ಮಾಡುತ್ತಾ ವೇದಿಕೆಯಲ್ಲಿ ಕುಸಿದು ಬೀಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋದರಿಯ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವೇಳೆ ವೇದಿಕೆ ಮೇಲೆ ತೆರಳಿದ್ದ ಪರಿಣಿತಾ, ಸುಮಾರು 200ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದರು. ಈ ವೇಳೆ ದಿಢೀರ್ ಹೃದಯ ಸ್ತಂಭನದಿಂದಾಗಿ ಪರಿಣಿತಾ ಮೃತಪಟ್ಟಿದ್ದಾರೆ. ಸಂಭ್ರಮ ಮನೆ ಮಾಡಿದ್ದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪರಿಣಿತಾಳ ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ರಾಜ್ಯಪಾಲರ ಭಾಷಣ ಮಾಡ್ತಿರುವಾಗಲೇ ಕುಸಿದು ಬಿದ್ದ ಪೊಲೀಸ್ ಕಮಿಷನರ್: ಶಾಕಿಂಗ್ ವಿಡಿಯೋ ವೈರಲ್
ವೇದಿಕೆ ಮೇಲೆ ಪರಿಣಿತಾ ಕುಸಿಯುತ್ತಿದ್ದಂತೆ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕಾರ್ಡಿಯಾಕ್ ಅರೆಸ್ಟ್‌ನಿಂದ ಯುವತಿಯ ಜೀವ ಹೋಗಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. 23 ವರ್ಷದ ಪರಿಣಿತಾ ಎಂಬಿಎ ಪದವೀಧರೆಯಾಗಿದ್ದು, ದಕ್ಷಿಣ ಇಂದೋರ್ ನಗರದ ತುಕೊಗಂಜ್‌ನಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರಿಣಿತಾಳ 12 ವರ್ಷದ ಕಿರಿಯ ಸೋದರ ಹೃದಯ ಸ್ತಂಭನದಿಂದ ಮೃತನಾಗಿದ್ದನು. ಆಗ್ರಾದಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿಯೂ 15 ವರ್ಷದ ಬಾಲಕನ ಸಾವು ಆಗಿತ್ತು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಿಣಿತಾ ಮಾದರಿಯ ಮತ್ತೊಂದು ಘಟನೆ ನಡೆದಿದೆ. ಯೋಗ ಕಾರ್ಯಕ್ರಮದ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 73 ವರ್ಷದ ಹಿರಿಯ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ .
ಇದನ್ನೂ ಓದಿ: ಶಾಲೆಯಲ್ಲಿ ಬಾಲಕಿಯರ ನಡುವೆ ಇದೇನಿದು? ಶಾಕಿಂಗ್ ವಿಡಿಯೋ ನೋಡಿ ಕೆಂಡ ಕಾರುತ್ತಿರೋ ನೆಟ್ಟಿಗರು....
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ