ಬಂದರುಗಳಲ್ಲೇ ಕೊಳೆಯುತ್ತಿವೆ ಆಮದಾದ 21000 ಟೀವಿ ಸೆಟ್‌!

By Kannadaprabha NewsFirst Published Aug 15, 2020, 10:04 AM IST
Highlights

ಬಂದರುಗಳಲ್ಲೇ ಕೊಳೆಯುತ್ತಿವೆ ಆಮದಾದ 21000 ಟೀವಿ ಸೆಟ್‌| ಆಮದು ಲೈಸೆನ್ಸ್‌ ಸಿಗದೆ ಕಂಪನಿಗಳು ಕಂಗಾಲು

ಕೋಲ್ಕತಾ(ಆ.15): ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಟೀವಿ ಸೆಟ್‌ಗಳನ್ನು ಆಮದು ನಿಯಂತ್ರಣ ಪಟ್ಟಿಗೆ ಸೇರಿಸಿದ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ, ಪ್ರಮುಖ ಟೀವಿ ಸೆಟ್‌ ಉತ್ಪಾದಕ ಕಂಪನಿಗಳನ್ನು ಕಂಗಾಲಾಗಿಸಿದೆ.

ಈಗಾಗಲೇ ದೇಶದ ವಿವಿಧ ಬಂದರುಗಳಿಗೆ ಬಂದಿರುವ ವಿವಿಧ ಕಂಪನಿಗಳ 21000 ಟೀವಿ ಸೆಟ್‌ಗಳನ್ನು ಪಡೆದುಕೊಳ್ಳಲು ಆಯಾ ಕಂಪನಿಗಳು ಸರ್ಕಾರದಿಂದ ಹೊಸದಾಗಿ ಲೈಸೆನ್ಸ್‌ ಪಡೆಯಬೇಕಾಗಿದೆ. ಈ ಕುರಿತು ಅವು ಈಗಾಗಲೇ ಅರ್ಜಿ ಸಲ್ಲಿಸಿವೆಯಾದರೂ, ಅದು ಯಾವಾಗ ಕೈಸೇರುತ್ತದೆ ಎಂಬುದರ ಮಾಹಿತಿ ಇಲ್ಲ.

ಮತ್ತೊಂದೆಡೆ ಹಬ್ಬದ ಸಮಯವಾದ ಕಾರಣ ಟೀವಿ ಮಾರಾಟ ಹೆಚ್ಚಿದೆ. ಆದರೆ ಅಂಗಡಿಗಳಿಗೆ ಪೂರೈಕೆಯಾಗಬೇಕಾಗಿದ್ದ ಟೀವಿ ಸೆಟ್‌ಗಳು ಬಂದರಿನಲ್ಲೇ ಲಂಗರುಹಾಕಿವೆ. ತಕ್ಷಣಕ್ಕೆ ಲೈಸೆನ್ಸ್‌ ಸಿಕ್ಕು, ಟೀವಿ ಸೆಟ್‌ಗಳು ಕೈಸೇರದೇ ಹೋದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಮಾದರಿಯ ಟೀವಿ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂದು ಸ್ಯಾಮ್‌ಸಂಗ್‌, ಎಲ್‌ಜಿ, ಸೋನಿ, ಟಿಸಿಎಲ್‌ ಸೇರಿದಂತೆ ವಿದೇಶಿ ಕಂಪನಿಗಳು ಅಳಲು ತೋಡಿಕೊಂಡಿವೆ.

ಈ ಕಂಪನಿಗಳು ತಾವು ಭಾರತದಲ್ಲಿ ಮಾರಾಟ ಮಾಡುವ ಒಟ್ಟು ಟೀವಿ ಸೆಟ್‌ಗಳ ಪೈಕಿ ಶೇ.35ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತವೆ.

ಭಾರತದಲ್ಲಿ ಟೀವಿ ಮಾರುಕಟ್ಟೆಮೌಲ್ಯ 25000 ಕೋಟಿ ರು. ಎಂಬ ಅಂದಾಜಿದೆ. ಆದರೆ ಆತ್ಮನಿರ್ಭರ ಭಾರತ ಯೋಜನೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಜು.30ರಂದು ಟೀವಿ ಸೆಟ್‌ಗಳನ್ನು ಆಮದು ನಿಯಂತ್ರಣ ಪಟ್ಟಿಗೆ ಸೇರಿಸಿತು. 20 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ಈ ಬೆಳವಣಿಗೆ ವಿದೇಶಿ ಮೂಲದ ಕಂಪನಿಗಳಿಗೆ ಹೆಚ್ಚಿನ ಬಿಸಿ ಮುಟ್ಟಿಸಿದೆ.

click me!