
ನರೇಂದ್ರ ಮೋದಿ, ಪ್ರಧಾನಿ
ಭಾರತವು ಇಂದು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಭಾರತೀಯರ ನವೀನ ಉತ್ಸಾಹದ ಫಲ. ಇಂದು ಜಗತ್ತು ಭಾರತವನ್ನು ಭರವಸೆ, ವಿಶ್ವಾಸದಿಂದ ನೋಡುತ್ತಿದೆ. ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ, ಮುಂದಿನ ಪೀಳಿಗೆಯ ಸುಧಾರಣೆಗಳ ಮೂಲಕ ಪ್ರಗತಿಯ ವೇಗವನ್ನು ಜಗತ್ತು ಶ್ಲಾಘಿಸುತ್ತಿದೆ.
ಭಾರತವು ಈಗ ''ಸುಧಾರಣಾ ಎಕ್ಸ್ ಪ್ರೆಸ್'' (Reform Express) ನಲ್ಲಿ ಪಯಣಿಸುತ್ತಿದೆ. ಇದರ ಪ್ರಾಥಮಿಕ ಎಂಜಿನ್ ಭಾರತದ ಜನಸಂಖ್ಯಾ ವೈವಿಧ್ಯತೆ, ಯುವ ಪೀಳಿಗೆ ಮತ್ತು ಜನರ ಅದಮ್ಯ ಚೇತನ. ಕಳೆದ 11 ವರ್ಷಗಳಲ್ಲಿ ಕ್ರಮಿಸಿದ ಹಾದಿಯಲ್ಲಿ, ಸುಧಾರಣೆಗಳನ್ನೇ ಒಂದು ನಿರಂತರ ''ರಾಷ್ಟ್ರೀಯ ಸಂಕಲ್ಪ''ವನ್ನಾಗಿ ಕೇಂದ್ರೀಕರಿಸಿದ ವರ್ಷವಾಗಿ, 2025 ಚಿರಸ್ಥಾಯಿಯಾಗಲಿದೆ. ಸುಧಾರಣೆಗಳು ಪ್ರತಿಯೊಬ್ಬರು ಗೌರವ, ಆತ್ಮವಿಶ್ವಾಸದಿಂದ ಬದುಕಲು ಅನುವು ಮಾಡಿಕೊಟ್ಟಿದೆ. ಹಾಗಾದರೆ ಈ ವರ್ಷದ ಪ್ರಮುಖ ಸುಧಾರಣೆಗಳನ್ನು ನೋಡುವುದಾದರೆ,
ಶೇ. 5 ಮತ್ತು ಶೇ. 18ರ ಎರಡು ಹಂತದ ಸ್ಪಷ್ಟ ತೆರಿಗೆ ವ್ಯವಸ್ಥೆಯನ್ನು ಈ ವರ್ಷ ಜಾರಿಗೆ ತರಲಾಗಿದೆ. ಇದರಿಂದ ಜನ ಸಾಮಾನ್ಯರು, ಎಂಎಸ್‌ಎಂಇಗಳು, ರೈತರು ಮತ್ತು ಕಾರ್ಮಿಕ ಪ್ರಧಾನ ವಲಯಗಳ ಮೇಲಿನ ಹೊರೆ ತಗ್ಗಿಸಲಾಗಿದೆ.
ಈ ಸುಧಾರಣೆಯು ಗ್ರಾಹಕರ ಉತ್ಸಾಹ ಮತ್ತು ಬೇಡಿಕೆಯನ್ನು ಹೆಚ್ಚಿಸಿದೆ.
ಇದು ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಿಲ್ಲ ಎನ್ನುವ ನಿಯಮ ಜಾರಿಗೆ ತರಲಾಗಿದೆ. 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಆಧುನಿಕ ಮತ್ತು ಸರಳವಾದ ''ಆದಾಯ ತೆರಿಗೆ ಕಾಯ್ದೆ, 2025'' ಅನ್ನು ತರಲಾಗಿದೆ.
ಶೇ. 100ರ ಎಫ್‌ಡಿಐ ವಿಮಾ ಸುಧಾರಣೆ:
ಭಾರತೀಯ ವಿಮಾ ಕಂಪನಿಗಳಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ.
ಇದು ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಜನರ ಭದ್ರತೆ ಉತ್ತೇಜಿಸಲಿದೆ. ಸ್ಪರ್ಧೆಗಳ ಹೊರತಾಗಿಯೂ ಇದು ಜನರಿಗೆ ಉತ್ತಮ ವಿಮಾ ಆಯ್ಕೆಗಳನ್ನು ಮತ್ತು ಸುಧಾರಿತ ಸೇವೆಗಳನ್ನು ಒದಗಿಸುತ್ತದೆ.
ಸಂಸತ್ತಿನಲ್ಲಿ ''ಸೆಕ್ಯೂರಿಟೀಸ್ ಮಾರುಕಟ್ಟೆ ಸಂಹಿತೆ ಮಸೂದೆ''ಯನ್ನು ಮಂಡಿಸಲಾಗಿದೆ. ಇದು ಸೆಬಿಯಲ್ಲಿ (SEBI) ಆಡಳಿತದ ಮಾನದಂಡಗಳನ್ನು ಹೆಚ್ಚಿಸುತ್ತದೆ.ನಿಯಮ ಪಾಲನೆಯ ಹೊರೆಯನ್ನು ಕಡಿಮೆ ಮಾಡಿ ''ವಿಕಸಿತ ಭಾರತ''ಕ್ಕಾಗಿ ತಂತ್ರಜ್ಞಾನ ಆಧಾರಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.
ಸಾಗರ, ನೀಲಿ ಆರ್ಥಿಕತೆ ಸುಧಾರಣೆಗಳು:
ಸಂಸತ್ತಿನ ಮುಂಗಾರು ಅಧಿವೇಶನವೊಂದರಲ್ಲೇ ಐದು ಐತಿಹಾಸಿಕ ಕಡಲ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಬಿಲ್ಸ್ ಆಫ್ ಲೇಡಿಂಗ್ ಆಕ್ಟ್ 2025, ಸಮುದ್ರದ ಮೂಲಕ ಸರಕು ಸಾಗಣೆ ಮಸೂದೆ 2025, ಕರಾವಳಿ ಹಡಗು ಮಸೂದೆ 2025, ಮರ್ಚೆಂಟ್ ಶಿಪ್ಪಿಂಗ್ ಮಸೂದೆ 2025, ಭಾರತೀಯ ಬಂದರುಗಳ ಮಸೂದೆ 2025 ಅಂಗೀಕರಿಸಲಾಗಿದೆ. 1908, 1925 ಮತ್ತು 1958ರ ಹಳೆಯ ಕಾಯ್ದೆಗಳನ್ನು ಸಹ ರದ್ದುಗೊಳಿಸಿ ಹೊಸತನ್ನು ತರಲಾಗಿದೆ. ಜತೆಗೆ ''ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ, 2025''ರ ಮೂಲಕ 71 ಕಾಯ್ದೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಸುಲಭ ವ್ಯವಹಾರಕ್ಕೆ ಉತ್ತೇಜನ:
ಸಿಂಥೆಟಿಕ್ ಫೈಬರ್, ನೂಲು, ಪ್ಲಾಸ್ಟಿಕ್, ಪಾಲಿಮರ್ ಮತ್ತು ಮೂಲ ಲೋಹಗಳ ವಲಯದಲ್ಲಿ ಒಟ್ಟು 22 ಗುಣಮಟ್ಟ ನಿಯಂತ್ರಣ ಆದೇಶಗಳನ್ನು (ಕ್ಯೂಸಿಒ) ರದ್ದುಗೊಳಿಸಲಾಗಿದೆ. ಹಾಗೆಯೇ ಉಕ್ಕು, ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮಿಶ್ರಲೋಹ ಮತ್ತು ಗ್ರಾಹಕ ಉತ್ಪನ್ನಗಳ ವಿಭಾಗಗಳಲ್ಲಿ 53 ಕ್ಯೂಸಿಒಗಳನ್ನು ಅಮಾನತುಗೊಳಿಸಲಾಗಿದೆ. ಇದು ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯನ್ನು ಒಳಗೊಂಡಿದೆ.
ಇದರಿಂದ ಭಾರತದ ಸಿದ್ಧ ಉಡುಪುಗಳ ರಫ್ತಿನ ಪಾಲು ಹೆಚ್ಚಲಿದೆ. ಪಾದರಕ್ಷೆ ಮತ್ತು ಆಟೋಮೊಬೈಲ್‌ನಂತಹ ಕೈಗಾರಿಕೆ ಗಳಲ್ಲಿ ಉತ್ಪಾದನಾ ವೆಚ್ಚ ತಗ್ಗಲಿದೆ. ಎಲೆಕ್ಟ್ರಾನಿಕ್ಸ್, ಬೈಸಿಕಲ್ ಮತ್ತು ಆಟೋಮೋಟಿವ್ ಉತ್ಪನ್ನಗಳ ಬೆಲೆಗಳು ದೇಶೀಯ ಗ್ರಾಹಕರಿಗೆ ಕಡಿಮೆಯಾಗುವುದನ್ನು ಇದು ಖಚಿತಪಡಿಸುತ್ತದೆ.
ಕಾರ್ಮಿಕ ಸುಧಾರಣೆಗಳು:
ಕಾರ್ಮಿಕ ಕಾನೂನುಗಳನ್ನು ಪುನರ್ ರೂಪಿಸಲಾಗಿದ್ದು, ಚದುರಿ ಹೋಗಿದ್ದ 29 ಕಾನೂನುಗಳನ್ನು ಒಗ್ಗೂಡಿಸಿ ನಾಲ್ಕು ಆಧುನಿಕ ಸಂಹಿತೆಗಳನ್ನಾಗಿ ರೂಪಿಸಲಾಗಿದೆ. ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕಾರ್ಮಿಕ ಚೌಕಟ್ಟನ್ನು ಭಾರತ ಸೃಷ್ಟಿಸಿದೆ.ಇವು ನ್ಯಾಯಯುತ ವೇತನ, ಸಕಾಲಿಕ ವೇತನ ಪಾವತಿ, ಸುಗಮ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸಿವೆ. ಉದ್ಯೋಗಿಗಳ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುತ್ತದೆ. ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಇಎಸ್ ಐಸಿ ಮತ್ತು ಇಪಿಎಫ್‌ಒ ವ್ಯಾಪ್ತಿಗೆ ತರಲಾಗಿದ್ದು, ಔಪಚಾರಿಕ ಉದ್ಯೋಗಿ ವಲಯದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
ವಿಸ್ತೃತ ಮಾರುಕಟ್ಟೆಗಳು:
ನ್ಯೂಜಿಲೆಂಡ್, ಒಮಾನ್ ಮತ್ತು ಬ್ರಿಟನ್ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇವು ಹೂಡಿಕೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿವೆ ಮತ್ತು ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಲಿವೆ.
ಸ್ವಿಟ್ಜರ್ಲೆಂಡ್, ನಾರ್ವೆ, ಐಸ್‌ಲ್ಯಾಂಡ್ ಮತ್ತು ಲಿಚ್ಟೆನ್‌ಸ್ಟೈನ್ ದೇಶಗಳನ್ನು ಒಳಗೊಂಡಿರುವ ''ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್'' ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬಂದಿದೆ. ಇದು ಅಭಿವೃದ್ಧಿ ಹೊಂದಿದ ಯುರೋಪಿಯನ್ ಆರ್ಥಿಕತೆಗಳೊಂದಿಗೆ ಭಾರತದ ಮೊದಲ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.
ಪರಮಾಣು ಇಂಧನ ಸುಧಾರಣೆಗಳು:
ಶಾಂತಿ (SHANTI) ಕಾಯ್ದೆಯು ಭಾರತದ ಶುದ್ಧ ಇಂಧನ ಮತ್ತು ತಂತ್ರಜ್ಞಾನದ ಪಯಣದಲ್ಲಿ ಪರಿವರ್ತನೆ ಹೆಜ್ಜೆಯಾಗಿದೆ.
ಇದು ಡೇಟಾ ಸೆಂಟರ್ ಗಳು, ಸುಧಾರಿತ ಉತ್ಪಾದನೆ, ಗ್ರೀನ್ ಹೈಡ್ರೋಜನ್ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳಿಗೆ ವಿದ್ಯುತ್ ನೀಡುವ ಮೂಲಕ, ಎಐ ಯುಗದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಇದು ಭಾರತವನ್ನು ಶಕ್ತಗೊಳಿಸುತ್ತದೆ.
ಆರೋಗ್ಯ ರಕ್ಷಣೆ, ಕೃಷಿ, ಆಹಾರ ಭದ್ರತೆ, ಜಲ ನಿರ್ವಹಣೆ, ಕೈಗಾರಿಕೆ, ಸಂಶೋಧನೆ ಮತ್ತು ಪರಿಸರ ಸುಸ್ಥಿರತೆಯಲ್ಲಿ ಪರಮಾಣು ತಂತ್ರಜ್ಞಾನಗಳ ಶಾಂತಿಯುತ ಅನ್ವಯವನ್ನು ಉತ್ತೇಜಿಸುತ್ತದೆ. ಖಾಸಗಿ ವಲಯದ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಹಾದಿಗಳನ್ನು ತೆರೆಯುತ್ತದೆ.
ಹೂಡಿಕೆದಾರರು, ನಾವೀನ್ಯಕಾರರು ಮತ್ತು ಸಂಸ್ಥೆಗಳು ಭಾರತದೊಂದಿಗೆ ಕೈಜೋಡಿಸಲು, ಹೂಡಿಕೆ ಮಾಡಲು, ಹೊಸತನವನ್ನು ಅನ್ವೇಷಿಸಲು ಸನ್ನದ್ಧವಾದ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.
ಜಿ ರಾಮ್ ಜಿ ಮೈಲಿಗಲ್ಲು ಸುಧಾರಣೆ:
ವಿಕಸಿತ ಭಾರತ- ಜಿ ರಾಮ್ ಜಿ ಕಾಯ್ದೆ, 2025 ಅಡಿ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ಹಳ್ಳಿಯ ಮೂಲಸೌಕರ್ಯ ಮತ್ತು ಜೀವನೋಪಾಯವನ್ನು ಬಲಪಡಿಸುವುದಕ್ಕೆ ಕಾರಣವಾಗಲಿದೆ.
ಶಿಕ್ಷಣ ಸುಧಾರಣೆಗೂ ಈ ವರ್ಷ ಸಾಕ್ಷಿಯಾಗಿದೆ. ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಿ,
ಯುಜಿಸಿ, ಎಐಸಿಟಿಇ, ಎನ್ ಸಿ ಟಿ ಇ ಯಂತಹ ಒಂದಕ್ಕೊಂದು ಸಂಬಂಧಿಸಿದ ವಿವಿಧ ಸಂಸ್ಥೆಗಳ ಬದಲಿಗೆ ''ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ'' ಎಂಬ ಒಂದೇ ಸಂಸ್ಥೆಗೆ ತರುವತ್ತ ಕಾರ್ಯ ನಡೆದಿದೆ.
2025ರ ಸುಧಾರಣೆಗಳ ಮಹತ್ವವು ಕೇವಲ ಅವುಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಮೂಲತತ್ವದಲ್ಲೂ ಅಡಗಿದೆ. ಆಧುನಿಕ ಪ್ರಜಾಪ್ರಭುತ್ವದ ನೈಜ ಆಶಯದಂತೆ, ನಮ್ಮ ಸರ್ಕಾರವು ನಿಯಂತ್ರಣಕ್ಕಿಂತ ಸಹಯೋಗಕ್ಕೆ ಮತ್ತು ನಿರ್ಬಂಧಗಳಿಗಿಂತ ಸೌಲಭ್ಯ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ಸಣ್ಣ ಉದ್ಯಮಿಗಳು, ಯುವ ವೃತ್ತಿಪರರು, ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಪರಿಸ್ಥಿತಿಗಳನ್ನು ಗಮನಿಸಿ ಈ ಎಲ್ಲಾ ಸುಧಾರಣೆಗಳನ್ನು ರೂಪಿಸಲಾಗಿದೆ. ನಿಯಂತ್ರಣಾಧಾರಿತ ಆರ್ಥಿಕತೆಯಿಂದ ಹೊರಬಂದು, ಪ್ರಜೆಯನ್ನೇ ಕೇಂದ್ರಬಿಂದುವಾಗಿರಿಸಿಕೊಂಡಿರುವ ''ವಿಶ್ವಾಸ ಆಧಾರಿತ'' ವ್ಯವಸ್ಥೆಯತ್ತ ಸಾಗಲು ನಾವು ದಶಕದಿಂದ ನಡೆಸುತ್ತಿರುವ ಪ್ರಯತ್ನಗಳಿಗೆ ಈ ಸುಧಾರಣೆಗಳು ಹೊಸ ವೇಗವನ್ನು ನೀಡಿವೆ.
ಈ ಸುಧಾರಣೆಗಳು ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿ ಹೊಂದಿವೆ. ''ವಿಕಸಿತ ಭಾರತ'' ನಿರ್ಮಾಣವೇ ನಮ್ಮ ಅಭಿವೃದ್ಧಿ ಪಥದ ಧ್ರುವತಾರೆ. ಮುಂಬರುವ ವರ್ಷಗಳಲ್ಲೂ ನಾವು ಸುಧಾರಣಾ ಕಾರ್ಯಸೂಚಿಯನ್ನು ಮುಂದುವರೆಸಲಿದ್ದೇವೆ.
ಭಾರತದ ಈ ಬೆಳವಣಿಗೆಯ ಪಯಣದೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆಂದು ಭಾರತೀಯರು ಮತ್ತು ಅನಿವಾಸಿ ಭಾರತೀಯರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ದೇಶದ ಮೇಲೆ ವಿಶ್ವಾಸವಿಡಿ. ಜನರ ಶಕ್ತಿ ಸದ್ವಿನಿಯೋಗ ಮಾಡಿಕೊಳ್ಳಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ