ಅಧಿಕಾರಕ್ಕೇರಲು 70 ದಿನಗಳು: ವಿವಾದಾತ್ಮಕ ವಿದೇಶಾಂಗ ನೀತಿಗೆ ಟ್ರಂಪ್ ತಳಹದಿ

By Suvarna News  |  First Published Nov 12, 2024, 5:52 PM IST

ಅಮೆರಿಕಾದ ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಕಳೆದ ಗುರುವಾರದಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ದೂರವಾಣಿ ಮಾತುಕತೆ ನಡೆಸಿದ್ದು, ಉಕ್ರೇನ್ ವಿರುದ್ಧದ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸದಂತೆ ಸಲಹೆ ನೀಡಿದ್ದಾರೆ.


- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ವಿದೇಶಾಂಗ ವಿಶ್ಲೇಷಕ)

ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಇನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಕೇವಲ 70 ದಿನಗಳಷ್ಟೇ ಬಾಕಿಯಿದ್ದು, ಅವರು ತನ್ನ ಅಂತಾರಾಷ್ಟ್ರೀಯ ಯೋಜನೆಗಳಿಗೆ ಸೂಕ್ತ ತಳಹದಿ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Latest Videos

undefined

ಅಧಿಕೃತವಾಗಿ ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರಕ್ಕೆ ಇನ್ನೂ 70 ದಿನಗಳಿವೆ. ಆದರೆ, ಟ್ರಂಪ್ ಈಗಾಗಲೇ ವಿದೇಶಾಂಗ ನೀತಿಯ ಕುರಿತು ನಿರ್ಧಾರ ಕೈಗೊಳ್ಳಲು ಆರಂಭಿಸಿದ್ದಾರೆ.

1. ವಿಶ್ವಸಂಸ್ಥೆ: ನವೆಂಬರ್ 11, ಸೋಮವಾರದಂದು ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್ ಪ್ರತಿನಿಧಿ ಎಲಿಸ್ ಸ್ಟೆಫಾನಿಕ್ ಅವರನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ.

ಸ್ಟೆಫಾನಿಕ್ ಅವರು ದೀರ್ಘ ಕಾಲದಿಂದಲೂ ವಿಶ್ವಸಂಸ್ಥೆಯ ಟೀಕಾಕಾರರಾಗಿ ಗುರುತಿಸಲ್ಪಟ್ಟಿದ್ದಾರೆ. ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿನ ವಸಾಹತನ್ನು ಟೀಕಿಸುವ, ಖಂಡಿಸುವ ಮೂಲಕ ವಿಶ್ವಸಂಸ್ಥೆ ಯಹೂದಿ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ ಎಂದು ಆಕೆ ಆರೋಪಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಸ್ಟೆಫಾನಿಕ್ ಅವರು ಇನ್ನಷ್ಟು ಕಟುವಾಗಿ ಮಾತನಾಡಿದ್ದು, ವಿಶ್ವಸಂಸ್ಥೆಗೆ ಅಮೆರಿಕಾ ನೀಡುತ್ತಿರುವ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಮತ್ತೊಮ್ಮೆ ಅವಲೋಕಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಬಳಕೆಗೆ ಸಿದ್ಧವಾದ ಭಾರತದ ಸ್ವಂತ ಜಿಪಿಎಸ್: ನಾವಿಕ್ ಯೋಜನೆಯ ಪ್ರಯೋಜನಗಳು

ಸ್ಟೆಫಾನಿಕ್ ಅವರನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿ ನೇಮಿಸಿರುವುದು, ಟ್ರಂಪ್ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲನ್ನು ಸಮರ್ಥಿಸಲು ಇನ್ನಷ್ಟು ಗಟ್ಟಿಯಾದ ನಿಲುವು ತಳೆಯಬಹುದು ಎನ್ನುವುದರ ಸಂಕೇತವಾಗಿದೆ.

2. ಇಸ್ರೇಲ್ - ಹಮಾಸ್ ಯುದ್ಧ: ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ನವೆಂಬರ್ 10, ಭಾನುವಾರದಂದು ತಾನು ನವೆಂಬರ್‌ 5ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಬಳಿಕ ಡೊನಾಲ್ಡ್ ಟ್ರಂಪ್ ಅವರೊಡನೆ ಮೂರು ಬಾರಿ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ. ಇರಾನಿನಿಂದ ಎದುರಾಗಿರುವ ಅಪಾಯದ ಕುರಿತಂತೆ ಉಭಯ ನಾಯಕರೂ ಸಮಾನ ಆಲೋಚನೆ ಹೊಂದಿರುವುದಾಗಿ ನೆತನ್ಯಾಹು ವಿವರಿಸಿದ್ದಾರೆ. ಇರಾನಿನಿಂದ ಎದುರಾಗುವ ವಿವಿಧ ಆಯಾಮಗಳ ಅಪಾಯವನ್ನು ಇಬ್ಬರು ನಾಯಕರೂ ಒಪ್ಪಿಕೊಂಡಿದ್ದು, ಅದರಿಂದ ಎದುರಾಗಬಲ್ಲ ಅಪಾಯಗಳನ್ನು ಗುರುತಿಸಿದ್ದಾರೆ.

ಆದರೆ ಹಮಾಸ್ ಮತ್ತು ಇಸ್ರೇಲ್‌ ನಡುವೆ ಕದನ ವಿರಾಮದ ಸ್ಥಾಪನೆಯ ಕುರಿತಾದ ಮಾತುಕತೆಗಳಿಗೆ ಟ್ರಂಪ್ ತಂಡ ನೆರವು ನೀಡಬಹುದೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಡೊನಾಲ್ಡ್ ಟ್ರಂಪ್ ಅವರು ಹಮಾಸ್ ವಿರುದ್ಧ 'ಸಂಪೂರ್ಣ ಗೆಲುವು' ಸಾಧಿಸುವ ನೆತನ್ಯಾಹು ಗುರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕದನ ವಿರಾಮ ಜಾರಿಗೆ ಬಂದರೆ, ಅದು ಹಮಾಸ್ ಸಂಘಟನೆಗೆ ಚೇತರಿಸಿಕೊಳ್ಳಲು ಸಮಯಾವಕಾಶ ಕಲ್ಪಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

3. ರಷ್ಯಾ - ಉಕ್ರೇನ್ ಯುದ್ಧ: ಅಮೆರಿಕಾದ ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಕಳೆದ ಗುರುವಾರದಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ದೂರವಾಣಿ ಮಾತುಕತೆ ನಡೆಸಿದ್ದು, ಉಕ್ರೇನ್ ವಿರುದ್ಧದ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸದಂತೆ ಸಲಹೆ ನೀಡಿದ್ದಾರೆ.

ಆದರೆ ನವೆಂಬರ್ 11, ಸೋಮವಾರದಂದು ಕ್ರೆಮ್ಲಿನ್ ಈ ವರದಿಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದ್ದು, ಪ್ರಸ್ತುತ ಸಮಯದಲ್ಲಿ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರೊಡನೆ ಸಮಾಲೋಚನೆ ನಡೆಸುವ ಯಾವುದೇ ಉದ್ದೇಶ ರಷ್ಯಾಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಮರದ ಉಪಗ್ರಹಗಳು: ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ!

ಡೊನಾಲ್ಡ್ ಟ್ರಂಪ್ ಅವರು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ಉಪಸ್ಥಿತಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರೊಡನೆ ನವೆಂಬರ್ 6, ಬುಧವಾರದಂದು ಮಾತುಕತೆ ನಡೆಸಿದ್ದರು.

ಡೊನಾಲ್ಡ್ ಟ್ರಂಪ್ ಅವರು ಚುನಾವಣೆಗೂ ಮುನ್ನ ತಾನು ರಷ್ಯಾ - ಉಕ್ರೇನ್ ಯುದ್ಧವನ್ನು ಕೇವಲ 24 ಗಂಟೆಗಳ ಒಳಗಾಗಿ ಮುಗಿಸಬಲ್ಲೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅವರು ಇದನ್ನು ಹೇಗೆ ಸಾಧಿಸಲು ಉದ್ದೇಶಿಸಿದ್ದಾರೆ ಎನ್ನುವುದು ಮಾತ್ರ ಇಂದಿಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

click me!