ಸೈಕಲ್‌ನಲ್ಲೇ 2000 ಕಿ.ಮೀ. ದೂರದ ಊರು ತಲುಪಿದ!| ಮಹಾರಾಷ್ಟ್ರದಿಂದ 7 ದಿನದಲ್ಲಿ ಒಡಿಶಾಗೆ
ಭುವನೇಶ್ವರ(ಏ.12): ತೆಲಂಗಾಣದ ಶಿಕ್ಷಕಿಯೊಬ್ಬರು ತಮ್ಮ ಮಗನನ್ನು ಕರೆತರಲು ಸ್ಕೂಟರ್‌ನಲ್ಲಿ 3 ದಿನಗಳಲ್ಲಿ 1400 ಕಿ.ಮೀ ಕ್ರಮಿಸಿದ ಸುದ್ದಿ ಬೆನ್ನಲ್ಲೇ ಒಡಿಶಾದ ವಲಸಿಗ ಕಾರ್ಮಿಕನೊಬ್ಬ ಮಹಾರಾಷ್ಟ್ರದ ಸಾಂಗ್ಲಿಯಿಂದ 2000 ಕಿ.ಮೀ. ದೂರದ ತನ್ನೂರಿಗೆ ಸೈಕಲ್‌ನಲ್ಲೇ ಪ್ರಯಾಣಿಸಿದ ರೋಚಕ ಪ್ರಕರಣ ಬೆಳಕಿಗೆ ಬಂದಿದೆ.
ಒಡಿಶಾ ಮೂಲದ ಮಹೇಶ್ ಜೇನಾ (20) ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಬಂದಿದ್ದ. ಆದರೆ ದೇಶವ್ಯಾಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆತನ ಕಾರ್ಖಾನೆಯನ್ನು ಧಿಡೀರ್ ಮುಚ್ಚಲಾಯಿತು. ಅಲ್ಲದೆ ಇನ್ನು 5 ತಿಂಗಳು ಬಾಗಿಲು ತೆರೆಯಲ್ಲ ಎಂದು ಮಾಲೀಕ ಹೇಳಿದ್ದ. ಕೈಯಲ್ಲಿ ಹೆಚ್ಚಿನ ದುಡ್ಡೂ ಇಲ್ಲದ ಕಾರಣ ಇನ್ನಷ್ಟುದಿನ ಇಲ್ಲೇ ಉಳಿದರೆ ಸಂಕಷ್ಟಖಚಿತ ಎಂದು ಕಂಡುಕೊಂಡ ಜೇನಾ, ಪರಿಚಿತರೊಬ್ಬರಿಗೆ 1200 ರು. ಕೊಟ್ಟು ಹಳೆ ಸೈಕಲ್ ಖರೀದಿಸಿ ಏ.1ರಂದು ತನ್ನೂರಿನತ್ತ ಪ್ರಯಾಣ ಬೆಳೆಸಿದ.
ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ!
ಹಗಲೂ- ರಾತ್ರಿ ಸೈಕಲ್ ತುಳಿಯುತ್ತಲೇ, ಮಾರ್ಗ ಮಧ್ಯ ಸಿಕ್ಕ ಡಾಬಾ, ದೇಗುಲಗಳಲ್ಲಿ ರಾತ್ರಿ ಕಳೆದು, ಪೊಲೀಸರು, ಸ್ವಯಂಸೇವಕರು ನೀಡಿದ ಆಹಾರ ಸೇವಿಸಿಕೊಂಡೇ ಬಂದ ಜೇನಾ ಏ.7ರಂದು 2000 ಕಿ.ಮೀ ದೂರದ ಒಡಿಶಾದಲ್ಲಿನ ತನ್ನೂರು ಜಪುರ್ ತಲುಪಿದ್ದಾನೆ. ಮಾರ್ಗ ನಡುವೆ ಎರಡು ಕಡೆ ಗಡಿ ಪೊಲೀಸರು ಅಡ್ಡಹಾಕಿ ವಿಚಾರಿಸಿದ್ದು ಬಿಟ್ಟರೆ ಇನ್ನೆಲ್ಲೂ ತೊಂದರೆಯಾಗಲಿಲ್ಲ ಎಂದಿರುವ ಜೇನಾನನ್ನು ಒಡಿಶಾ ಗಡಿಯಲ್ಲಿ ಕೊರೋನಾ ತಪಾಸಣೆಗೆ ಗುರಿಪಡಿಲಾಗಿದೆ. ಆತನಲ್ಲಿ ಸೋಂಕಿನ ಲಕ್ಷಣ ಕಂಡುಬಂದಿಲ್ಲವಾದರೂ, 14 ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬಳಿಕ ಆತನನ್ನು ಮನೆಗೆ ತೆರಳಲು ಬಿಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.