ಚೀನೀಯರ ಮಣಿಸಿದ ಐಟಿಬಿಪಿಯ 20 ವೀರರಿಗೆ ಶೌರ್ಯಪದಕ!

By Suvarna NewsFirst Published Aug 15, 2021, 8:25 AM IST
Highlights

* ಲಡಾಖ್‌ನಲ್ಲಿ ಚೀನಾ ಯೋಧರನ್ನು ಹಿಮ್ಮೆಟ್ಟಿಸಿದವರಿಗೆ ಗೌರವ'

* ಚೀನೀಯರ ಮಣಿಸಿದ ಐಟಿಬಿಪಿಯ 20 ವೀರರಿಗೆ ಶೌರ್ಯಪದಕ

* ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ 1380 ಜನರಿಗೆ ಸೇವಾ ಪದಕ

ನವದೆಹಲಿ(ಆ.15): ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಚೀನಾ ಯೋಧರ ಅತಿಕ್ರಮವನ್ನು ತಡೆದು ದೇಶದ ಗಡಿಯನ್ನು ಯಶಸ್ವಿಯಾಗಿ ರಕ್ಷಿಸಿದ ಇಂಡೋ ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ 20 ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಶೌರ್ಯಪದಕ ಘೋಷಿಸಲಾಗಿದೆ.

ಸ್ವಾತಂತ್ರೋ್ಯತ್ಸವ ಅಂಗವಾಗಿ ಕೇಂದ್ರ ಸರ್ಕಾರ ಒಟ್ಟು 1380 ಜನರಿಗೆ ಸೇವಾ ಪದಕಗಳನ್ನು ಪ್ರಕಟಿಸಿದೆ. ಅದರಲ್ಲಿ ಶೌರ್ಯಪದಕ ಪುರಸ್ಕೃತ ಐಟಿಬಿಪಿಯ 20 ಯೋಧರು ಕೂಡಾ ಸೇರಿದ್ದಾರೆ.

1380 ಪದಕಗಳ ಪೈಕಿ ಇಬ್ಬರಿಗೆ ರಾಷ್ಟ್ರಪತಿಗಳ ಪೊಲೀಸ್‌ ಪದಕ (ಶೌರ್ಯ) ನೀಡಲಾಗಿದೆ. ಅವರೆಂದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಸಬ್‌ ಇನ್‌ಸ್ಪೆಕ್ಟರ್‌ ಅಮರ್‌ ದೀಪ್‌ ಮತ್ತು ಸಿಆರ್‌ಪಿಎಫ್‌ನ ಕಾಳೆ ಸುನಿಲ್‌ ದತ್ತಾತ್ರೇಯ (ಮರಣೋತ್ತರ), ಉಳಿದಂತೆ 628 ಜನರಿಗೆ ಪೊಲೀಸ್‌ ಸೇವಾ ಪದಕ (ಶೌರ್ಯ), 88 ಜನರಿಗೆ ವಿಶಿಷ್ಟಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್‌ ಪದಕ, 662 ಜನರಿಗೆ ಶ್ಲಾಘನೀಯ ಪೊಲೀಸ್‌ ಪದಕ ಪ್ರಕಟಿಸಲಾಗಿದೆ.

ಗಡಿ ರಕ್ಷಣೆಗೆ ಮನ್ನಣೆ:

ಕಳೆದ ವರ್ಷದ ಮೇ- ಜೂನ್‌ ತಿಂಗಳಲ್ಲಿ ಗಲ್ವಾನ್‌ ಕಣಿವೆಯಲ್ಲಿ ಚೀನಾ ಯೋಧರೊಂದಿಗೆ ನಡೆದ ಮುಖಾಮುಖಿ ಸೆಣಸಿನಲ್ಲಿ 20 ಭಾರತೀಯ ಯೋಧರ ಹತರಾಗಿದ್ದಾರೆ. ಆದರೆ ಇದೇ ವೇಳೆ ಚೀನಾ ಸೇನೆಯ 35ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. ಈ ವೇಳೆ ಗಡಿಯನ್ನು ರಕ್ಷಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಐಟಿಬಿಪಿಯ 20 ಯೋಧರಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಪ್ರಕಟಿಸಲಾಗಿದೆ. ಈ ಪೈಕಿ 8 ಯೋಧರಿಗೆ ಶೌರ್ಯ ಪ್ರದರ್ಶಿಸಿದ್ದಕ್ಕೆ, ಅತ್ಯಂತ ನಿಖರವಾಗಿ ಯೋಜನೆ ರೂಪಿಸಿದ್ದಕ್ಕೆ ಮತ್ತು ತಾಯ್ನಾಡಿನ ನೆಲವನ್ನು ರಕ್ಷಿಸಿದ್ದಕ್ಕಾಗಿ ನೀಡಲಾಗಿದೆ. ಇನ್ನು 6 ಜನರಿಗೆ ಮೇ 18ರಂದು ಪೂರ್ವ ಲಡಾಖ್‌ನ ಫಿಂಗರ್‌ 4 ಪ್ರದೇಶದಲ್ಲಿ ಶೌರ್ಯ ಪ್ರದರ್ಶಿಸಿದ್ದಕ್ಕೆ ಮತ್ತು ಉಳಿದ 6 ಜನರಿಗೆ ಲಡಾಖ್‌ನ ಹಾಟ್‌ಸ್ಟ್ರಿಂಗ್‌ ಪ್ರದೇಶದಲ್ಲಿ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ನೀಡಲಾಗಿದೆ.

click me!