India @ 75: 20 ಕೋಟಿ ಮನೆಗಳಲ್ಲಿ 1 ವಾರ ತ್ರಿವರ್ಣ ಧ್ವಜ ಹಾರಾಟ: ಬಿಜೆಪಿ ಬೃಹತ್‌ ಅಭಿಯಾನ

Published : Jul 03, 2022, 06:29 AM IST
India @ 75: 20 ಕೋಟಿ ಮನೆಗಳಲ್ಲಿ 1 ವಾರ ತ್ರಿವರ್ಣ ಧ್ವಜ ಹಾರಾಟ: ಬಿಜೆಪಿ ಬೃಹತ್‌ ಅಭಿಯಾನ

ಸಾರಾಂಶ

* ಸ್ವಾತಂತ್ರ್ಯದ 75ನೇ ವರ್ಷ ಹಿನ್ನೆಲೆ * 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ: ಬಿಜೆಪಿ ಬೃಹತ್‌ ಅಭಿಯಾನ * ‘ಹರ್‌ ಘರ್‌ ತಿರಂಗಾ’ ಆಂದೋಲನ ಘೋಷಣೆ * ಆ.15ರ ಸಂದರ್ಭ 1 ವಾರ ರಾಷ್ಟ್ರಧ್ವಜ ಹಾರಾಟ

ಹೈದರಾಬಾದ್‌(ಜು.03): ಹೆಚ್ಚೆಚ್ಚು ಜನರನ್ನು ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ‘ಹರ್‌ ಘರ್‌ ತಿರಂಗಾ’ ಎಂಬ ಯೋಜನೆಯೊಂದನ್ನು ಜಾರಿಗೊಳಿಸಲು ಬಿಜೆಪಿ ನಿರ್ಧರಿಸಿದೆ. ಆ.15ರ ಸಮಯದಲ್ಲಿ ಒಂದು ವಾರದ ಕಾಲ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಕರೆ ನೀಡುವ ಕಾರ್ಯಕ್ರಮ ಇದಾಗಿದೆ.

ಇದಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಣಿಗೊಳಿಸಲು ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಶನಿವಾರ ಹೈದರಾಬಾದಲ್ಲಿ ಆರಂಭವಾದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ನಿರ್ಣಯಗಳನ್ನು ಘೋಷಿಸಲಾಗಿದೆ.

ಮನೆ ಮನೆ ಮೇಲೆ ತ್ರಿವರ್ಣಧ್ವಜ:

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ‘ಹರ್‌ ಘರ್‌ ತಿರಂಗಾ’ ಕಾರ್ಯಕ್ರಮವನ್ನು ಪ್ರಕಟಿಸಿದರು. ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ದೇಶದಲ್ಲಿ ದೊಡ್ಡ ಆಂದೋಲನದಂತೆ ಆಚರಿಸಬೇಕು. ನಾವು 20 ಕೋಟಿ ಮನೆಗಳನ್ನು ತಲುಪಬೇಕು. ಹಿಂದೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ದೊಡ್ಡ ಯಶಸ್ಸು ಕಂಡಿದೆ. ಅದನ್ನು ಈಗ ಜನಸಾಮಾನ್ಯರಿಗೂ ತಲುಪಿಸಿ ರಾಷ್ಟ್ರೀಯತೆಯನ್ನು ಉದ್ದೀಪಿಸಬೇಕು ಎಂದು ನಡ್ಡಾ ಹೇಳಿದರು ಎಂದು ರಾಜಸ್ಥಾನ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೇ ತಿಳಿಸಿದರು.

ಪಕ್ಷ ಬಲವರ್ಧನೆಗೆ ಹಲವು ಕ್ರಮ:

ನಡ್ಡಾ ಅವರು ಪಕ್ಷ ಬಲವರ್ಧನೆಗೂ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಇದೇ ವೇಳೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಾಕೀತು ಮಾಡಿದರು.

‘ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದ 30 ಕೋಟಿ ಫಲಾನುಭವಿಗಳ ಜೊತೆ ಬಿಜೆಪಿ ನಾಯಕರು ಸಂವಾದ ನಡೆಸಬೇಕು. ದೇಶದ ಪ್ರತಿ ಬೂತ್‌ನಲ್ಲೂ 200 ಸಕ್ರಿಯ ಬಿಜೆಪಿ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಬೂತ್‌ ಮಟ್ಟದ ಪ್ರಮುಖರು ಕಾರ್ಯಕರ್ತರ ಜೊತೆ ಸಂವಾದ ನಡೆಸಿ, ಕಾರ್ಯಕರ್ತರು ಜನರ ಜೊತೆ ಸಂಪರ್ಕದಲ್ಲಿರುವಂತೆ ಮಾಡಬೇಕು. ಜನಸಾಮಾನ್ಯರ ಜೊತೆ ಸಂಪರ್ಕದಲ್ಲಿರಲು ಸ್ಥಳೀಯ ಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಬೇಕು’ ಎಂದು ಅವರು ತಾಕೀತು ಮಾಡಿದರು.

‘ಪ್ರತಿ ವಾರ ರಾಜ್ಯ ಬಿಜೆಪಿ ಅಧ್ಯಕ್ಷರು ಬೂತ್‌ ಮಟ್ಟದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಬೇಕು. ಬಿಜೆಪಿ ನಾಯಕರು ಹಳ್ಳಿಗಳಲ್ಲಿ ಒಂದು ರಾತ್ರಿ ಕಳೆಯುವ ‘ಪ್ರವಾಸ್‌’ ಯೋಜನೆಯ ಬಗ್ಗೆ ಗಮನ ಹರಿಸಬೇಕು’ ಎಂದ ನಡ್ಡಾ, ‘ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕಿ ಬಾತ್‌ ಭಾಷಣವನ್ನು ಇನ್ನಷ್ಟುಜನರಿಗೆ ತಲುಪಿಸಲು ಯತ್ನಿಸಬೇಕು’ ಎಂದೂ ನಿರ್ದೇಶಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌