
ನವದೆಹಲಿ(ಮಾ.25): ಮತಾಂತರ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ರೈಲಿನಿಂದ ಕೆಳಗೆ ಇಳಿಸಿ ಪರಿಶೀಲನೆ ನಡೆಸಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸನ್ಯಾಸಿನಿಯರನ್ನು ಅವಮಾನಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿರುವ ಸಚಿವ ಶಾ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.
ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ
ಏನಾಯ್ತು?:
ಮಾ.19ರಂದು ಹರಿದ್ವಾರ- ಪುರಿ ಉತ್ಕಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ದೆಹಲಿಯಿಂದ ಒಡಿಶಾಕ್ಕೆ ಪ್ರಯಾಣಿಸುತ್ತಿದ್ದರು. ಅವರ ಜೊತೆ ಇನ್ನಿಬ್ಬರು ಮಹಿಳೆಯರೂ ಇದ್ದರು. ಅದೇ ರೈಲಿನಲ್ಲಿ ಕೆಲ ಎಬಿವಿಪಿ ಕಾರ್ಯಕರ್ತರೂ ಇದ್ದರು. ಪ್ರಯಾಣದ ವೇಳೆ ಕ್ರೈಸ್ತ ಸನ್ಯಾಸಿನಿಯರು ಇನ್ನಿಬ್ಬರು ಮಹಿಳೆಯರ ಜೊತೆ ಮಾನತಾಡುವುದನ್ನು ಕಂಡ ಎಬಿವಿಪಿ ಕಾರ್ಯಕರ್ತರು, ಇದು ಮತಾಂತರ ಪ್ರಕ್ರಿಯೆ ಇರಬಹುದು ಎಂದು ಅನುಮಾನಿಸಿ, ಝಾನ್ಸಿ ರೈಲ್ವೆ ನಿಲ್ದಾಣ ಬರುತ್ತಲೇ ಎಲ್ಲಾ ನಾಲ್ವರನ್ನೂ ರೈಲಿನಿಂದ ಇಳಿಸಿದ್ದಾರೆ.
ಜೊತೆಗೆ ಮತಾಂತರ ಆರೋಪ ಹೊರಿಸಿ ರೈಲ್ವೆ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದು, ಅವರು ರೈಲ್ವೆ ಪೊಲೀಸರ ಗಮನಕ್ಕೆ ವಿಷಯವನ್ನು ತಂದಿದ್ದಾರೆ. ರೈಲ್ವೆ ಪೊಲೀಸರು ನಾಲ್ವರೂ ಮಹಿಳೆಯರನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೊತೆಗಿದ್ದ ಇಬ್ಬರು ಮಹಿಳೆಯರು ಕೂಡಾ ಕ್ರೈಸ್ತರೇ. ಅವರು ಸನ್ಯಾಸಿನಿಯಾಗುವ ತರಬೇತಿ ಪಡೆಯುವ ಹಂತದಲ್ಲಿದ್ದರು ಎಂದು ಖಚಿತವಾದ ಬಳಿಕ ಎಲ್ಲಾ ನಾಲ್ವರನ್ನೂ ಬಿಟ್ಟು ಕಳುಹಿಸಿದ್ದರು. ರೈಲಿನಲ್ಲಿ ಎಬಿವಿಪಿ ಕಾರ್ಯಕರ್ತರು ಕ್ರೈಸ್ತ ಸನ್ಯಾಸಿನಿಯರನ್ನು ರೈಲಿನಿಂದ ಕೆಳಗೆ ಇಳಿಯುವಂತೆ ಸೂಚಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಕರಣಕ್ಕೆ ಮಧ್ಯಪ್ರವೇಶ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ
ಮತ್ತೊಂದೆಡೆ ಕೇರಳ ಕ್ಯಾಥೋಲಿಕ್ ಬಿಷಫ್ಸ್ ಮಂಡಳಿಯ ವಕ್ತಾರ ಫಾದರ್ ಜಾಕೋಬ್ ಪ್ರತಿಕ್ರಿಯಿಸಿ ‘ನಮ್ಮ ಸಂವಿಧಾನವು ನಮಗೆ ಎಲ್ಲಿಗೆ ಬೇಕಾದರೂ ಹೋಗಲು, ಏನು ಬೇಕಾದರೂ ಧರಿಸಲು ಪೂರ್ಣ ಸ್ವಾತಂತ್ರ್ಯ ನೀಡಿದೆ. ಝಾನ್ಸಿಯಲ್ಲಿ ನಡೆದ ಘಟನೆ ಕ್ರೈಸ್ತ ಸಮುದಾಯಕ್ಕೆ ನೋವುಂಟು ಮಾಡಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ. ಸನ್ಯಾಸಿನಿಯರಿಗೆ ಬಲವಂತವಾಗಿ ವಸ್ತ್ರವನ್ನು ಬದಲಾಯಿಸಲಾಗಿತ್ತು’ ಎಂದು ಹೇಳಿದ್ದಾರೆ
ಅದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ ‘ಇಂಥ ಘಟನೆಗಳು ದೇಶದ ಘನತೆಗೆ ಧಕ್ಕೆ ತರುತ್ತದೆ. ಧಾರ್ಮಿಕ ಸಹಿಷ್ಣುತೆ ನಮ್ಮ ಪ್ರಾಚೀನ ಪರಂಪರೆ. ಇಂಥ ಘಟನೆಯನ್ನು ಕೇಂದ್ರ ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ