ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್

By Kannadaprabha News  |  First Published Apr 16, 2021, 7:00 AM IST

ಕೊರೋನಾ ಎರಡನೇ ಅಲೆ ಭಯಾನಕವಾಗಿದ್ದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.  ಇದೀಗ ಅಮೆರಿಕಾವನ್ನೂ ಮೀರಿಸಿ 2 ಲಕ್ಷ ಕೇಸ್‌ಗಳು ದಾಖಲಾಗಿವೆ. 


 ನವದೆಹಲಿ (ಏ.16):  ಕೊರೋನಾ ಎರಡನೇ ಅಲೆ ಭಯಾನಕವಾಗಿ ಬೀಸುತ್ತಿದ್ದು, ಭಾರತದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 2 ಲಕ್ಷ ಜನರಿಗೆ ಕೋವಿಡ್‌-19 ಸೋಂಕು ತಗುಲಿದೆ. ದೇಶದಲ್ಲಿ ಕೊರೋನಾ ಅಟ್ಟಹಾಸ ಆರಂಭಗೊಂಡ ನಂತರ ಮೊದಲ ಬಾರಿ ಸೋಂಕಿನ ಸಂಖ್ಯೆ ಒಂದೇ ದಿನದಲ್ಲಿ 2 ಲಕ್ಷದ ಗಡಿ ದಾಟಿದೆ. ಇನ್ನೊಂದೆಡೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಒಂದೇ ದಿನ 1,038 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದು 2020ರ ಅಕ್ಟೋಬರ್‌ 3ರ ನಂತರದ ಸಾವಿನ ಗರಿಷ್ಠ ಪ್ರಮಾಣ.

ಇನ್ನೊಂದು ಆತಂಕದ ವಿಷಯವೆಂದರೆ ನಿತ್ಯ ದಾಖಲಾಗುವ ಪ್ರಕರಣಗಳ ಸಂಖ್ಯೆ 1ರಿಂದ 2 ಲಕ್ಷ ತಲುಪಲು ಕೇವಲ 10 ದಿನ ತೆಗೆದುಕೊಂಡಿರುವುದು ಭಾರೀ ಆತಂಕ ಹುಟ್ಟುಹಾಕಿದೆ. ಹೀಗೇ ಮುಂದುವರೆದರೆ ಏ.25ರ ವೇಳೆಗೆ ನಿತ್ಯ ಸೋಂಕು 3 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ.

Tap to resize

Latest Videos

ಸರ್ವಪಕ್ಷ ಸಭೆ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್? ತಜ್ಞರ ಸಲಹೆ ತಂದಿಟ್ಟ ಆತಂಕ .

ದಾಖಲೆ ಕೇಸ್‌:  ಗುರುವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,00,739 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸತತ 9ನೇ ದಿನ ಲಕ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲಾದಂತಾಗಿದೆ. ಇನ್ನು ಒಟ್ಟಾರೆ ಸೋಂಕಿತರ ಸಂಖ್ಯೆ 1.40 ಕೋಟಿ ದಾಟಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಸಾರ್ವಕಾಲಿಕ ಗರಿಷ್ಠವಾದ 14 ಲಕ್ಷದ ಗಡಿ ದಾಟಿದೆ. ಅಲ್ಲದೆ ಗುಣಮುಖರ ಶೇಕಡಾ ಪ್ರಮಾಣ ಕೂಡ ಶೇ.88.31 ಇಳಿದಿದೆ. ಏಪ್ರಿಲ್‌ 14ರಂದು 13,84,549 ಜನರನ್ನು ಟೆಸ್ಟ್‌ ಮಾಡಲಾಗಿದ್ದು, ಇವರಲ್ಲಿ 2 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ 9 ದಿನದಲ್ಲಿ ಒಟ್ಟಾರೆ 13,88,515 ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ಸಾರಿ ಹೇಳುತ್ತದೆ.

ಅಮೆರಿಕವನ್ನೂ ಮೀರಿಸಿದ ಭಾರತ:  ಏ.4ರಂದು ಭಾರತದಲ್ಲಿ 1 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಇದಾದ ಕೇವಲ 10 ದಿನದಲ್ಲಿ 2 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಇದು ಕೋವಿಡ್‌ ಪ್ರಕರಣಗಳಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕವನ್ನೂ ಮೀರಿಸುವಂಥ ಏರುಗತಿಯಾಗಿದೆ. ಅಮೆರಿಕಕ್ಕಿಂತ 2-3 ಪಟ್ಟು ವೇಗದಲ್ಲಿ ದೈನಂದಿನ ಕೇಸುಗಳ ವೇಗ ಹೆಚ್ಚಿದೆ.

ಅಂದರೆ ಅಮೆರಿಕದಲ್ಲಿ ಕಳೆದ ವರ್ಷ ಅಕ್ಟೋಬರ್‌ 30ರಂದು 1 ಲಕ್ಷ ದೈನಂದಿನ ಕೇಸು ದಾಖಲಾಗಿದ್ದವು. ನಂತರ ಡಿ.2ರಂದು 2 ಲಕ್ಷ ಪ್ರಕರಣಗಳು ದೃಢಪಟ್ಟವು. ಅಂದರೆ 1 ಲಕ್ಷದಿಂದ 2 ಲಕ್ಷಕ್ಕೆ ಏರಲು 30 ದಿನ ಬೇಕಾಯಿತು. ಆದರೆ ಭಾರತದಲ್ಲಿ ಕೇವಲ 10 ದಿನದಲ್ಲಿ 1 ಲಕ್ಷದಿಂದ 2 ಲಕ್ಷ ದೈನಂದಿನ ಕೇಸು ವೃದ್ಧಿಸಿವೆ.

click me!