ಮತ್ತೆ ಎರಡು ರೈತ ಸಂಘಟನೆಗಳು ರೈತ ಹೋರಾಟದ ಭಾಗವಾಗಿರುವ ಪ್ರತಿಭಟನೆಯಿಂದ ಹಿಂದೆ ಸರಿದಿವೆ. ಹಿಂಸಾಚಾರದಿಂದ ಬೇಸತ್ತು ದೂರ ಸರಿದಿವೆ.
ನವದೆಹಲಿ/ನೋಯ್ಡಾ (ಜ.29) : ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಇನ್ನೂ 2 ರೈತ ಸಂಘಟನೆಗಳು ಹಿಂದಕ್ಕೆ ಸರಿದಿವೆ. ಇದರೊಂದಿಗೆ ರೈತ ಹೋರಾಟಕ್ಕೆ ಮತ್ತಷ್ಟುಹಿನ್ನಡೆಯಾಗಿದೆ.
ಬುಧವಾರವಷ್ಟೇ ಎರಡು ಸಂಘಟನೆಗಳು, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದವು. ಗುರುವಾರ ಭಾರತೀಯ ಕಿಸಾನ್ ಯೂನಿಯನ್ (ಲೋಕ ಶಕ್ತಿ) ಹಾಗೂ ಕಿಸಾನ್ ಮಹಾಪಂಚಾಯತ್ ಹಿಂದೆ ಸರಿಯುವ ಘೋಷಣೆ ಮಾಡಿದವು. ಇದರೊಂದಿಗೆ 41 ಸಂಘಟನೆಗಳ ಸಂಯುಕ್ತ ಕಿಸಾನ್ ಒಕ್ಕೂಟದಿಂದ 4 ಸಂಘಟನೆಗಳು ಹೊರಬಿದ್ದಂತಾಗಿದೆ.
undefined
ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್‌ದೀಪ್, ತರೂರ್‌ಗೆ FIR ಸಂಕಷ್ಟ ...
ಗುರುವಾರ ಈ ಕುರಿತು ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (ಲೋಕ ಶಕ್ತಿ) ಮುಖ್ಯಸ್ಥ ಶಿವರಾಜ್‌ಸಿಂಗ್, ‘ನಾವು ಡಿ.2ರಿಂದ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಗಣರಾಜ್ಯ ದಿನದ ಹಿಂಸೆ ಖಂಡಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ’ ಎಂದರು.
ಇದೇ ವೇಳೆ ಕಿಸಾನ್ ಮಹಾಪಂಚಾಯತ್ ಎಂಬ ರೈತ ಸಂಘಟನೆ ಕೂಡಾ ರಾಜಸ್ಥಾನ- ಹರ್ಯಾಣ ಗಡಿಯ ಶಹಜಹಾನ್‌ಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದೆ. ‘ನಾವು ಜ.21ರಂದೇ ಸಂಯುಕ್ತ ಕಿಸಾನ್ ಮೋರ್ಚಾದಿಂದ ಹೊರಬಿದ್ದಿದ್ದೆವು. ಆದರೂ ನಾವು ಪ್ರತಿಭಟನೆ ಬೆಂಬಲಿಸಿಕೊಂಡು ಬಂದಿದ್ದೆವು. ಆದರೆ ಮಂಗಳವಾರ ಘಟನೆ ಹಿನ್ನೆಲೆಯಲ್ಲಿ ತಕ್ಷಣದಿಂದ ಪ್ರತಿಭಟನೆ ಕೈಬಿಡಲು ನಿರ್ಧರಿಸಿದ್ದೇವೆ. ಹೋರಾಟದ ಪ್ರತಿ ಹಂತಗಳನ್ನು ವಿಶ್ಲೇಷಿಸಿ, ಮುಂದಿನ ಬೆಂಬಲದ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಸಂಘಟನೆಯ ಮುಖ್ಯಸ್ಥ ರಾಮ್‌ಪಾಲ್ ಜಾಟ್ ಹೇಳಿದರು.
ಹೊರಬಿದ್ದ 4 ಸಂಘಟನೆಗಳು: ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ, ಭಾರತೀಯ ಕಿಸಾನ್ ಯೂನಿಯನ್ (ಭಾನು), ಭಾರತೀಯ ಕಿಸಾನ್ ಯೂನಿಯನ್ (ಲೋಕಶಕ್ತಿ), ಕಿಸಾನ್ ಮಹಾಪಂಚಾಯತ್.