2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಗಳು ಭಾರತ ಮತ್ತು ಜಗತ್ತನ್ನೇ ನಲುಗಿಸಿದ ಒಂದು ಭಾರೀ ಭಯೋತ್ಪಾದಕ ದಾಳಿಯಾಗಿತ್ತು. ಈ ಭೀಕರ ದಾಳಿಯ ಪರಿಣಾಮವಾಗಿ, 175 ಜನರು ಪ್ರಾಣ ಕಳೆದುಕೊಂಡರೆ, 300ಕ್ಕೂ ಹೆಚ್ಚು ಜನರು ಗಾಯಾಳುಗಳಾದರು.
ಗಿರೀಶ್ ಲಿಂಗಣ್ಣ I ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
26/11 ದಾಳಿಗಳು ಎಂದೂ ಹೆಸರಾಗಿರುವ 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಗಳು ಭಾರತ ಮತ್ತು ಜಗತ್ತನ್ನೇ ನಲುಗಿಸಿದ ಒಂದು ಭಾರೀ ಭಯೋತ್ಪಾದಕ ದಾಳಿಯಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್ ಎ ತಯ್ಬಾ (ಎಲ್ಇಟಿ) ಎಂಬ ಭಯೋತ್ಪಾದಕ ಸಂಘಟನೆಯ ಹತ್ತು ಮಂದಿ ಬಂದೂಕು ಧಾರಿ ಉಗ್ರಗಾಮಿಗಳು ಮುಂಬೈನ ಹತ್ತು ಪ್ರಮುಖ ಸ್ಥಳಗಳ ಮೇಲೆ ಸಂಘಟಿತ ದಾಳಿ ನಡೆಸಿದರು. ಈ ಭೀಕರ ದಾಳಿಯ ಪರಿಣಾಮವಾಗಿ, 175 ಜನರು ಪ್ರಾಣ ಕಳೆದುಕೊಂಡರೆ, 300ಕ್ಕೂ ಹೆಚ್ಚು ಜನರು ಗಾಯಾಳುಗಳಾದರು. ಈ ದಾಳಿಯಲ್ಲಿ ಭಯೋತ್ಪಾದಕರು ಮುಂಬೈನ ಪ್ರಮುಖ ತಾಣಗಳಾದ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ಹಾಗೂ ನಾರಿಮನ್ ಪಾಯಿಂಟ್ ಸೇರಿದಂತೆ, ವಿವಿಧ ಜಾಗಗಳ ಮೇಲೆ ದಾಳಿ ನಡೆಸಿದರು.
ಭಾರತದ ಆರ್ಥಿಕತೆಯ ಮುಖ್ಯ ಕೇಂದ್ರವಾದ ಮುಂಬೈ ಮಹಾನಗರ ಹಿಂದಿನಿಂದಲೂ ಭಯೋತ್ಪಾದಕ ದಾಳಿಗಳಿಗೆ ಗುರಿಯಾಗುತ್ತಾ ಬಂದಿತ್ತು. 1993ರಲ್ಲಿ ಮುಂಬೈನಲ್ಲಿ ಒಂದು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ, ನಗರವನ್ನು ಅಸ್ತವ್ಯಸ್ತಗೊಳಿಸಿತ್ತು. ಅದರಲ್ಲಿ 257 ಜನರು ಸಾವಿಗೀಡಾಗಿ, ನೂರಾರು ಜನರು ಗಾಯಗೊಂಡರು. ಆ ಬಳಿಕವೂ ಮುಂಬೈನಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. 2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟದಲ್ಲಿ 209 ಜನರು ಬಲಿಯಾಗಿದ್ದರು. ಇವೆಲ್ಲ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನದ ಲಷ್ಕರ್ ಇ ತಯ್ಬಾ (ಎಲ್ಇಟಿ) ಹಾಗೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ದಂತಹ ಭಯೋತ್ಪಾದಕ ಸಂಘಟನೆಗಳು ಕಾರಣ ಎನ್ನಲಾಗಿತ್ತು. ಆದರೆ 26/11 ದಾಳಿಗಳು ಅತ್ಯಂತ ಹಿಂಸಾತ್ಮಕ ಸ್ವರೂಪದ ದಾಳಿಯಾಗಿದ್ದು, ಭಯೋತ್ಪಾದಕರು ಅತ್ಯಂತ ಆಧುನಿಕ ಆಯುಧಗಳನ್ನು ಬಳಸಿಕೊಂಡು, ಸಮಗ್ರವಾಗಿ ಯೋಜನೆ ರೂಪಿಸಿ ದಾಳಿ ನಡೆಸಿದ್ದರು.
ದಾಳಿಯ ಯೋಜನೆ ಮತ್ತು ಜಾರಿ: ಸಮುದ್ರ ಯುದ್ಧ ಮತ್ತು ನಗರ ಪ್ರದೇಶದ ಯುದ್ಧದಲ್ಲಿ ಸಮಗ್ರ ತರಬೇತಿ ಪಡೆದ ಭಯೋತ್ಪಾದಕರು ಒಂದು ಭಾರತೀಯ ಮೀನುಗಾರಿಕಾ ಬೋಟನ್ನು ಹೈಜಾಕ್ ಮಾಡಿದರು. ಬಳಿಕ ಅದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಮುಂಬೈಗೆ ಬಂದರು. ಆ ಬೋಟಿನ ಸಿಬ್ಬಂದಿಗಳನ್ನು ಹತ್ಯೆಗೈದ ಬಳಿಕ ಭಯೋತ್ಪಾದಕರು ಗಾಳಿ ತುಂಬಿಸಿ ಉಬ್ಬಿಸುವ ಬೋಟುಗಳ ಮೂಲಕ ಮುಂಬೈ ನಗರ ಪ್ರವೇಶಿಸಿದರು. ಬಳಿಕ ಅವರು ವಿವಿಧ ತಂಡಗಳಾಗಿ ವಿಭಜಿಸಿಕೊಂಡು, ಮುಂಬೈ ನಗರದಾದ್ಯಂತ ದಾಳಿ ನಡೆಸಿದರು. ಅವರು ತಮ್ಮೊಡನೆ ಎಕೆ-47 ಅಸಾಲ್ಟ್ ರೈಫಲ್‌ಗಳು, ಗ್ರೆನೇಡ್‌ಗಳು, ಆಧುನಿಕ, ಶಕ್ತಿಶಾಲಿ ಉಪಕರಣಗಳನ್ನು ಹೊಂದಿದ್ದರು.
ಈ ಭಯೋತ್ಪಾದಕರು ಪಾಕಿಸ್ತಾನದಲ್ಲೇ ತರಬೇತಿ ಪಡೆದಿದ್ದರು. ಪಾಕಿಸ್ತಾನಿ ಸೇನೆ ಮತ್ತು ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐಎಸ್ಐ) ಅಧಿಕಾರಿಗಳು ಅವರ ತರಬೇತಿಗೆ ನೆರವು ನೀಡಿದ್ದರು. ಅವರ ದಾಳಿಗೆ ಪೂರ್ವಭಾವಿಯಾಗಿ, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ನಾರಿಮನ್ ಪಾಯಿಂಟ್ ಸೇರಿದಂತೆ ವಿವಿಧ ಗುರಿಗಳ ಮೇಲೆ ಸಮಗ್ರ ವಿಚಕ್ಷಣೆ ನಡೆಸಿ, ಭಯೋತ್ಪಾದಕರಿಗೆ ಮಾಹಿತಿ ಒದಗಿಸಲಾಗಿತ್ತು.
ದಾಳಿಗೊಳಗಾದ ತಾಣಗಳು:
ತಾಜ್ ಮಹಲ್ ಪ್ಯಾಲೇಸ್ ಹೋಟೆಲ್: ನವೆಂಬರ್ 26, 2008ರ ರಾತ್ರಿ 9:30ರ ಸುಮಾರಿಗೆ ದಾಳಿಗಳು ಅರಂಭವಾದವು. ಮುಂಬೈನ ಐತಿಹಾಸಿಕ ಹೆಗ್ಗುರುತಾದ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ದಾಳಿಯ ಮುಖ್ಯ ಗುರಿಯಾಗಿತ್ತು. ಬಂದೂಕುಧಾರಿ ಉಗ್ರರು ಹೊಟೆಲ್ ಒಳಗೆ ನುಗ್ಗಿ, ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡು, ಭದ್ರತಾ ಪಡೆಗಳೊಡನೆ ತೀವ್ರ ಗುಂಡಿನ ಚಕಮಕಿ ನಡೆಸಿದರು. ತಾಜ್ ಹೋಟೆಲ್ ಲಾಬಿ, ಲಿಫ್ಟ್ ಮತ್ತು ರೆಸ್ಟೋರೆಂಟ್ ಸೇರಿದಂತೆ, ಕಟ್ಟಡದೊಳಗೆ ಒಟ್ಟು ಆರು ಸ್ಫೋಟಗಳು ಸಂಭವಿಸಿದ್ದವು. ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಒತ್ತೆಯಾಳುಗಳನ್ನು ರಕ್ಷಿಸಲು ಅವಿಶ್ರಾಂತವಾಗಿ ಪ್ರಯತ್ನ ನಡೆಸುತ್ತಿದ್ದರು. ಆದರೆ, ನಿರಂತರ ಮೂರು ದಿನಗಳ ಮುತ್ತಿಗೆ ಮತ್ತು ದಾಳಿಯ ಬಳಿಕವಷ್ಟೇ ಕೊನೆಯ ದಾಳಿಕೋರರನ್ನು ಹತ್ಯೆಗೈದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ದಾಳಿಯಲ್ಲಿ ವಿದೇಶಿಗರೂ ಸೇರಿದಂತೆ, 32 ಒತ್ತೆಯಾಳುಗಳು ಸಾವನ್ನಪ್ಪಿದರು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್: ಇಸ್ಮಾಯಿಲ್ ಖಾನ್ ಮತ್ತು ಅಜ್ಮಲ್ ಕಸಬ್ ಎಂಬ ಇಬ್ಬರು ಭಯೋತ್ಪಾದಕರು ಜನನಿಬಿಡ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ಪ್ರವೇಶಿಸಿದರು. ನಿಲ್ದಾಣದ ಒಳಗೆ ಪ್ರವೇಶಿಸಿದ ತಕ್ಷಣವೇ ಅವರಿಬ್ಬರೂ ತಮ್ಮ ಎಕೆ-47 ರೈಫಲ್‌ಗಳನ್ನು ಹಿಡಿದು, ಅತ್ಯಂತ ಜನಭರಿತವಾದ ರೈಲು ನಿಲ್ದಾಣದಲ್ಲಿ ಮನಬಂದಂತೆ ಪ್ರಯಾಣಿಕರತ್ತ ಗುಂಡು ಹಾರಿಸತೊಡಗಿದರು. ಅಂತಿಮವಾಗಿ ನಿಲ್ದಾಣದಿಂದ ಹೊರ ಹೋಗುವ ಮುನ್ನ ಅವರು 58 ಜನರನ್ನು ಕೊಂದು, 104 ಜನರನ್ನು ಗಾಯಗೊಳಿಸಿದ್ದರು. ನಿಲ್ದಾಣದಿಂದ ಹೊರಬಂದ ಬಳಿಕ, ರಸ್ತೆಗಳಲ್ಲಿ ಅವರು ತಮ್ಮ ಹತ್ಯಾಕಾಂಡವನ್ನು ಮುಂದುವರಿಸಿದ್ದರು. ಪೊಲೀಸರೊಡನೆ ಗುಂಡಿನ ಚಕಮಕಿಯ ಬಳಿಕ, ಅಂತಿಮವಾಗಿ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು.
ಲಿಯೋಪೋಲ್ಡ್ ಕೆಫೆ: ಕೊಲಾಬಾ ಕಾಸ್‌ವೇನಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ಲಿಯೋಪೋಲ್ಡ್ ಕೆಫೆಯೂ ಸಹ ಆರಂಭಿಕ ದಾಳಿಗೊಳಗಾಗಿತ್ತು. ಶೋಯೆಬ್ ಮತ್ತು ನಜೀರ್ ಎಂಬ ಇಬ್ಬರು ಬಂದೂಕುಧಾರಿ ಉಗ್ರರು ಕೆಫೆಯೊಳಗೆ ಗುಂಡಿನ ದಾಳಿ ನಡೆಸಿ, ಹತ್ತು ಜನರ ಪ್ರಾಣ ಕಳೆದಿದ್ದರು. ದಾಳಿಯಲ್ಲಿ ಹಲವಾರು ಗ್ರಾಹಕರು ಗಾಯಗೊಂಡರು.
ಒಬೆರಾಯ್ ಟ್ರೈಡೆಂಟ್ ಹೋಟೆಲ್: ಈ ಸಂಘಟಿತ ದಾಳಿಯಲ್ಲಿ ಒಬೆರಾಯ್ ಟ್ರೈಡೆಂಟ್ ಹೋಟೆಲ್ ಸಹ ಗುರಿಯಾಗಿತ್ತು. ತಾಜ್ ದಾಳಿಯ ರೀತಿಯಲ್ಲೇ, ಭಯೋತ್ಪಾದಕರು ಒತ್ತೆಯಾಳುಗಳನ್ನು ಇಟ್ಟುಕೊಂಡು, ಭದ್ರತಾ ಪಡೆಗಳ ಜೊತೆ ಕಾದಾಟ ನಡೆಸಿದ್ದರು. ಒತ್ತೆಯಾಳುಗಳನ್ನು ರಕ್ಷಿಸಲು ಸಾಧ್ಯವಾದರೂ, ದಾಳಿಯಲ್ಲಿ ಹೋಟೆಲ್ ಸಾಕಷ್ಟು ಹಾನಿಗೊಳಗಾಯಿತು. ಹೋಟೆಲ್ ಸಿಬ್ಬಂದಿ, ಅತಿಥಿಗಳು ಸೇರಿದಂತೆ 32 ಜನರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ನಾರಿಮನ್ ಹೌಸ್: ನಾರಿಮನ್ ಹೌಸ್ ಎನ್ನುವುದು ಯಹೂದಿ ಸಮುದಾಯ ಕೇಂದ್ರವಾಗಿದ್ದು, ಇದನ್ನೂ ಭಯೋತ್ಪಾದಕರು ವಶಪಡಿಸಿಕೊಂಡಿದ್ದರು. ಒಳಗೆ ನುಗ್ಗಿದ ಇಬ್ಬರು ಉಗ್ರರು ರಬ್ಬಿ ಗವೇರಿಯಲ್ ಹಾಲ್ಟ್ಜ್‌ಬರ್ಗ್, ಅವರ ಗರ್ಭಿಣಿ ಪತ್ನಿ ರಿವಿಕಾ, ಮತ್ತು ಇತರರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದರು. ಸುದೀರ್ಘ ಚಕಮಕಿಯ ಬಳಿಕ, ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್‌ಜಿ) ಕಮಾಂಡೋಗಳು ಕಟ್ಟಡದ ಒಳಗೆ ನುಗ್ಗಿ, ಒಂಬತ್ತು ಒತ್ತೆಯಾಳುಗಳನ್ನು ರಕ್ಷಿಸಿದರು. ದುರದೃಷ್ಟವಶಾತ್, ರಬ್ಬಿ ಮತ್ತು ಅವರ ಪತ್ನಿ ಸಾವಿಗೀಡಾದವರಲ್ಲಿ ಸೇರಿದ್ದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್‌ಜಿ) ಪಾತ್ರ
ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್‌ಜಿ) ಎನ್ನುವುದು ಭಾರತದ ಉನ್ನತ ಭಯೋತ್ಪಾದಕ ನಿಗ್ರಹ ಪಡೆಯಾಗಿದ್ದು, ಮುಂಬೈ ದಾಳಿಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿತ್ತು. ಈ ಕಮಾಂಡೋಗಳನ್ನು ತಾಜ್ ಮಹಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಿಗೆ ನಿಯೋಜಿಸಲಾಗಿತ್ತು. ಆರಂಭದಲ್ಲಿ ಕಮಾಂಡೋಗಳಿಗೆ ಶಸ್ತ್ರ ಸಜ್ಜಿತ ಭಯೋತ್ಪಾದಕರಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು. ಆದರೆ ಸೂಕ್ತವಾದ ಕಾರ್ಯಾಚರಣಾ ವಿಧಾನಗಳನ್ನು ಬಳಸಿ, ಕಮಾಂಡೋಗಳು ಭಯೋತ್ಪಾದಕರನ್ನು ಹೊಡೆದುರುಳಿಸಿ, ಹೋಟೆಲ್‌ಗಳಲ್ಲಿದ್ದ ನೂರಾರು ಒತ್ತೆಯಾಳುಗಳನ್ನು ರಕ್ಷಿಸಿದರು. ತಾಜ್ ಮಹಲ್ ಹೋಟೆಲ್‌ನಲ್ಲಿ ಅಂತಿಮ ಕಾರ್ಯಾಚರಣೆ ನವೆಂಬರ್ 29, 2008ರಂದು ಪೂರ್ಣಗೊಂಡಿತು. ಅಂದು ಉಳಿದ ಭಯೋತ್ಪಾದಕರು ಸತ್ತು, ಹೋಟೆಲ್ ಮರುವಶವಾಯಿತು. ಎನ್ಎಸ್‌ಜಿ ಕಮಾಂಡೋಗಳು ಈ ಕಾರ್ಯಾಚರಣೆಯಲ್ಲಿ ಅಸಾಧಾರಣ ಶೌರ್ಯ, ಸಾಹಸ ಪ್ರದರ್ಶಿಸಿದ್ದರು. ದಾಳಿಯ ಸಂದರ್ಭದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಹಲವು ಎನ್ಎಸ್‌ಜಿ ಅಧಿಕಾರಿಗಳು ತಮ್ಮ ಪ್ರಾಣ ಕಳೆದುಕೊಂಡರು.
ತ್ಯಾಗ ಮತ್ತು ಪರಾಕ್ರಮಗಳ ಕಥನ
ಮುಂಬೈ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕರು ಸೇರಿದಂತೆ, ಒಟ್ಟು 175 ಜನರು ಪ್ರಾಣ ಕಳೆದುಕೊಂಡರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವರು ಗಂಭೀರ ಗಾಯಗಳಿಗೆ ತುತ್ತಾಗಿದ್ದರು. ಈ ದಾಳಿ ಪ್ರಮುಖ ನಗರಗಳು ಭಯೋತ್ಪಾದಕ ದಾಳಿಗೆ ಹೇಗೆ ಸುಲಭವಾಗಿ ಗುರಿಯಾಗುವ ಅಪಾಯಗಳಿವೆ ಎಂಬುದನ್ನು ಜಾಹೀರು ಮಾಡಿದವು. ಅದರೊಡನೆ, ದಾಳಿಯ ಬಳಿಕ ದಾಳಿಗೊಳಗಾದವರು ಮತ್ತು ಭದ್ರತಾ ಪಡೆಗಳ ಬೆಂಬಲಕ್ಕೆ ಧಾವಿಸಿದ ಮುಂಬೈ ಮಹಾನಗರದ ಜನತೆಯ ಮನೋಸ್ಥೈರ್ಯಕ್ಕೂ ಜಗತ್ತು ಸಾಕ್ಷಿಯಾಯಿತು.
ಮುಂಬೈ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಸಾಮಾನ್ಯ ನಾಗರಿಕರು ಸೇರಿದಂತೆ, ಸಾಕಷ್ಟು ಜನರು ಈ ದಾಳಿಯ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದರು. ರೈಲ್ವೇ ಉದ್ಘೋಷಕರಾದ ವಿಷ್ಣು ಝೆಂಡೆ ಎಂಬವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಸಾರ್ವಜನಿಕರನ್ನು ಸುರಕ್ಷತೆಯೆಡೆಗೆ ಸಾಗುವಂತೆ ಮುನ್ನೆಚ್ಚರಿಕೆ ನೀಡಿ, ಸಂಭಾವ್ಯ ಅಪಾಯವನ್ನು ಸಾಕಷ್ಟು ಕಡಿಮೆಗೊಳಿಸಿದ್ದರು.
ಮಹಾರಾಷ್ಟ್ರ ಆ್ಯಂಟಿ ಟೆರರಿಸಂ ಸ್ಕ್ವಾಡ್ (ಎಟಿಎಸ್) ಮುಖ್ಯಸ್ಥರಾದ ಹೇಮಂತ್ ಕರ್ಕರೆ ಅವರು ಸಿಎಸ್‌ಟಿ ನಿಲ್ದಾಣದಲ್ಲಿ ಭಯೋತ್ಪಾದಕರೊಡನೆ ನಡೆದ ಚಕಮಕಿಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ್ದರು. ಪೊಲೀಸ್ ಪೇದೆ ತುಕಾರಾಂ ಓಂಬಳೆ ಅವರು ಕಾರ್ಯಾಚರಣೆಯ ಇನ್ನೋರ್ವ ಹೀರೋ ಆಗಿದ್ದರು. ಅವರು ಓರ್ವ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲು ತಮ್ಮ ಪ್ರಾಣವನ್ನೇ ಬಲಿ ನೀಡಿದ್ದರು. ಅವರ ಶೌರ್ಯದ ಕಾರಣದಿಂದಾಗಿ, ಭಾರತಕ್ಕೆ ಅತ್ಯಂತ ಅಮೂಲ್ಯ ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ಸಾಧ್ಯವಾಗಿ, ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ನೆರವಾಯಿತು.
ಕಸಬ್‌ನ ಗಲ್ಲಿಗೇರಿಸಿದ ವಕೀಲ, ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಮ್-ಕಾಂಗ್ರೆಸ್ ನಡುವೆ 17 ಲಕ್ಷ ರೂಪಾಯಿಗೆ ಫೈಟ್!
ದಾಳಿ ನಡೆದ ಕೆಲ ಸಮಯದಲ್ಲೇ ಭಾರತೀಯ ಅಧಿಕಾರಿಗಳು ದಾಳಿಕೋರರು ಪಾಕಿಸ್ತಾನಿ ಮೂಲದ ಲಷ್ಕರ್ ಇ ತಯ್ಬಾ ಉಗ್ರ ಸಂಘಟನೆಯ ಸದಸ್ಯರು ಎಂದು ಪತ್ತೆಹಚ್ಚಿದರು. ಜೀವಂತವಾಗಿ ಉಳಿದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು. ಆತನಿಂದ ವಿಚಾರಣೆಯ ಸಂದರ್ಭದಲ್ಲಿ ದಾಳಿಯ ಯೋಜನೆ ಮತ್ತು ಕಾರ್ಯರೂಪಕ್ಕೆ ತರುವ ಕುರಿತು ಮಾಹಿತಿಗಳನ್ನು ಪಡೆಯಲಾಯಿತು. ಪಾಕಿಸ್ತಾನವೂ ಅಜ್ಮಲ್ ಕಸಬ್ ತನ್ನ ನಾಗರಿಕ ಎಂದು ಒಪ್ಪಿಕೊಂಡಿತು.
ಮುಂಬೈ ದಾಳಿಯಲ್ಲಿ ಅಧಿಕಾರಿ ಕರ್ಕರೆ ಕೊಂದಿದ್ದು ಉಗ್ರನಲ್ಲ ಆರ್‌ಎಸ್‌ಎಸ್ ಪೊಲೀಸ್, ವಿವಾದವೆಬ್ಬಿಸಿದ ಕಾಂಗ್ರೆಸಿಗ
2008ರ ಮುಂಬೈ ದಾಳಿ ಜಗತ್ತಿಗೆ ಭಯೋತ್ಪಾದನೆಯ ಅಪಾಯದ ಕುರಿತ ಇನ್ನೊಂದು ಎಚ್ಚರಿಕೆಯಾಗಿದ್ದು, ಸಮಗ್ರ ಜಗತ್ತು ಭಯೋತ್ಪಾದನೆಯನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆ ಮತ್ತು ಸಹಕಾರ ಹೊಂದಬೇಕು ಎಂಬ ಸಂದೇಶ ನೀಡಿತ್ತು. ಈ ದಾಳಿಗಳು ಭಾರತಕ್ಕೆ ಅಪಾರ ನೋವು ನೀಡಿದ್ದರೂ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಇತರರನ್ನು ಉಳಿಸಲು ಹೋರಾಡಿದ ಭದ್ರತಾ ಪಡೆಗಳು, ಪೊಲೀಸರು, ಸಾಮಾನ್ಯ ನಾಗರಿಕರ ಶೌರ್ಯವನ್ನೂ ಜಗತ್ತಿಗೆ ಸಾರಿದವು.