ಕರ್ನಾಟಕದವರೂ ಸೇರಿ 122 ಶಂಕಿತ ಸಿಮಿ ಸದಸ್ಯರು ಖುಲಾಸೆ!

By Suvarna NewsFirst Published Mar 7, 2021, 7:49 AM IST
Highlights

ಕರ್ನಾಟಕದವರೂ ಸೇರಿ 122 ಶಂಕಿತ ಸಿಮಿ ಸದಸ್ಯರು ಖುಲಾಸೆ| ಸೂರತ್‌ ಕೋರ್ಟ್‌ನಿಂದ ತೀರ್ಪು| 20 ವರ್ಷ ನಂತರ ಆರೋಪಮುಕ್ತಿ| ಸಭೆ ನಡೆಸಿದ ಆರೋಪದಲ್ಲಿ ಕೇಸ್‌ ದಾಖಲಾಗಿತ್ತು

ಸೂರತ್‌(ಮಾ.07): 2001ರ ಡಿಸೆಂಬರ್‌ನಲ್ಲಿ ಸಭೆ ಆಯೋಜಿಸಿದ್ದ ಪ್ರಕರಣ ಸಂಬಂಧ ಕಾನೂನು ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಂಧಿತರಾಗಿದ್ದ ನಿಷೇಧಿತ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯ ಶಂಕಿತ 122 ಸದಸ್ಯರನ್ನು ಗುಜರಾತ್‌ನ ಸೂರತ್‌ ಕೋರ್ಟ್‌ ಶನಿವಾರ ಖುಲಾಸೆಗೊಳಿಸಿದೆ. ಇವರಲ್ಲಿ ಕರ್ನಾಟಕದವರು ಕೂಡ ಇದ್ದಾರೆ.

ಆರೋಪಿಗಳು ನಿಷೇಧಿತ ಸಂಘಟನೆಯವರು ಹಾಗೂ ಅವರು ನಿಷೇಧಿತ ಸಂಘಟನೆ ಅಡಿಯಲ್ಲಿ ಚಟುವಟಿಕೆ ನಡೆಸಲು ಸಭೆ ಸೇರಿದ್ದರು ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಖುಲಾಸೆ ಮಾಡಿರುವುದಾಗಿ ಮುಖ್ಯ ಜುಡಿಷಿಯಲ್‌ ಕೋರ್ಟ್‌ ತಿಳಿಸಿದೆ. ತಾವು ಅಖಿಲ ಭಾರತ ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ ನಡೆಸಿದ ಸಭೆಗೆ ಬಂದಿದ್ದೆವು ಎಂದು ಆರೋಪಿಗಳು ಮಾಡಿದ ವಾದವನ್ನು ಕೋರ್ಟ್‌ ಮನ್ನಿಸಿದೆ.

ಪ್ರಕರಣ ಸಂಬಂಧ ಡಿ.28, 2001ರಂದು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದವರೂ ಸೇರಿದಂತೆ 127 ಮಂದಿಯನ್ನು ಬಂಧಿಸಲಾಗಿತ್ತು. 9 ತಿಂಗಳು ಜೈಲಿನಲ್ಲಿ ಇದ್ದ ಇವರು ನಂತರ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದರು. ಈ ಪೈಕಿ 5 ಮಂದಿ ವಿಚಾರಣೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ.

click me!