
ಟೊರೊಂಟೊ(ಜು.25): ಕೊರೋನಾ ಸೋಂಕಿನ ಮಧ್ಯೆ ಟೊರೊಂಟೊದಲ್ಲಿ 12 ವರ್ಷದ ಮಗು ಗಂಭೀರ ಮತ್ತು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಹುಡುಗನ ನಾಲಿಗೆ ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿದೆ. ಈ ರೋಗ ಅವನ ರೋಗನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಅವನ ಕೆಂಪು ರಕ್ತ ಕಣಗಳು ನಾಶವಾಗಿವೆ.
ಗಂಟಲು ನೋವು, ಮೂತ್ರದ ಬಣ್ಣವೂ ಬದಲು
ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಅನ್ವಯ, ಬಾಲಕನಿಗೆ ಗಂಟಲು ನೋವು ಕಾಣಿಸಿಕೊಂಡಿದ್ದು, ಮೂತ್ರದ ಬಣ್ಣವೂ ಬದಲಾಗಿದೆ. ಚರ್ಮವೂ ಮಸುಕಾಗಲಾರಂಭಿಸಿದೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು
ಆರಂಭದಲ್ಲಿ, ಇದು ಕಾಮಾಲೆ ರೋಗವೆಂದು ವೈದ್ಯರು ಭಾವಿಸಿದ್ದರು, ಕಾಮಾಲೆಯಲ್ಲೂ ಚರ್ಮದ ಬಣ್ಣ ಹಳದಿಯಾಗುತ್ತದೆ. ಕಣ್ಣುಗಳ ಬಿಳಿ ಭಾಗವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ನಾಲಿಗೆಯ ಹಳದಿ ಬಣ್ಣದಿಂದಾಗಿ ವೈದ್ಯರು ಕೂಡ ಆಶ್ಚರ್ಯಚಕಿತರಾದರು.
ಕೋಲ್ಡ್ ಅಗ್ಲುಟಿನಿನ್ ರೋಗ ಪತ್ತೆ
ಕೆಲವು ಪರೀಕ್ಷೆಗಳ ಬಳಿಕ ಬಾಲಕನಿಗೆ ರಕ್ತಹೀನತೆ ಇದೆ ಮತ್ತು ಎಪ್ಸ್ಟೀನ್ ಬಾರ್ ವೈರಸ್ ಇದೆ ಎಂದು ವೈದ್ಯರಿಗೆ ತಿಳಿದು ಬಂದಿದೆ. ಇದು ಸಾಮಾನ್ಯ ವೈರಸ್ ಆಗಿದ್ದು, ಸಾಮಾನ್ಯವಾಗಿ ಬಾಲ್ಯದಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಹುಡುಗನಿಗೆ ಕೋಲ್ಡ್ ಅಗ್ಲುಟಿನಿನ್ ಕಾಯಿಲೆ ಇರುವುದು ಪತ್ತೆಯಾಗಿದೆ. ಇದು ಅಪರೂಪದ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.
ಈ ರೋಗದಲ್ಲಿ ಕೆಂಪು ರಕ್ತ ಕಣಗಳು ನಾಶವಾಗಲು ಪ್ರಾರಂಭವಾಗುತ್ತದೆ. ಶೀತದಿಂದಾಗಿ ಈ ಸ್ಥಿತಿ ಉದ್ಭವಿಸುತ್ತದೆ. ಎಪ್ಸ್ಟೀನ್ ಬಾರ್ ವೈರಸ್ ಸೋಂಕಿನಿಂದ ಹುಡುಗನಿಗೆ ಈ ಕಾಯಿಲೆ ಬಂದಿದೆ ಎಂದು ವೈದ್ಯರು ಶಂಕಿಸಿದ್ದಾರೆ.
ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಕೋಲ್ಡ್ ಅಗ್ಲುಟಿನಿನ್ ಕಾಯಿಲೆಯು ರಕ್ತಹೀನತೆ ಮತ್ತು ಕೆಂಪು ರಕ್ತ ಕಣಗಳು ಕುಗ್ಗಲು ಕಾರಣವಾಗುತ್ತದೆ. ಆಸ್ಪತ್ರೆಯಲ್ಲಿ ರೋಗಿಗೆ ಏಳು ವಾರಗಳ ಕಾಲ ಔಷಧಿ ಕೊಟ್ಟು ಬಳಿಕ ಹುಡುಗನನ್ನು ಡಿಸ್ಚಾರ್ಜ್ ಮಾಡಲಾಯಿತು. ಅವನು ಈಗ ಚೆನ್ನಾಗಿದ್ದಾನೆ. ನಾಲಿಗೆಯ ಬಣ್ಣವೂ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ