ತನ್ನ ಜೀವಿತದ 3.4 ಕೋಟಿ ರೂಪಾಯಿ ಉಳಿತಾಯದ ಹಣ ಏಮ್ಸ್‌ಗೆ ದಾನ ಮಾಡಿದ 100 ವರ್ಷದ ವೈದ್ಯೆ!

Published : Dec 02, 2025, 07:32 PM IST
Odisha Doctor Dr K Lakshmibai

ಸಾರಾಂಶ

100-Year-Old Doctor Donates ₹3.4 Crore Life Savings to AIIMS Bhubaneswarತಮ್ಮ 100ನೇ ಜನ್ಮದಿನದಂದು, ಒಡಿಶಾದ ಹಿರಿಯ ವೈದ್ಯೆ ಡಾ.ಕೆ.ಲಕ್ಷ್ಮೀಬಾಯಿ ಅವರು ತಮ್ಮ ಜೀವಮಾನದ ಉಳಿತಾಯವಾದ 3.4 ಕೋಟಿ ರೂಪಾಯಿಗಳನ್ನು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

ಭುವನೇಶ್ವರ್‌ (ಡಿ.7): ಅದು ಜೀವಮಾನ ಪೂರ್ತಿ ಕಷ್ಟಪಟ್ಟು ದುಡಿದ ಹಣ. ಆದರೆ, ಜೀವನದ ಕೊನೇ ಗಳಿಗೆಯಲ್ಲಿ ಆಕೆಗೆ ಉಳಿತಾಯ ಮಾಡಿದ ಹಣದ ಒಂದು ಪೈಸೆಯನ್ನೂ ಇಟ್ಟುಕೊಳ್ಳಲು ಮನಸ್ಸಾಗಲಿಲ್ಲ. ಡಿಸೆಂಬರ್‌ 5 ರಂದು ತಮ್ಮ 100ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿರುವ ವೈದ್ಯೆ ಡಾ.ಕೆ.ಲಕ್ಷ್ಮೀಬಾಯಿ ತಮ್ಮ ಜೀವಮಾನವಿಡಿ ಉಳಿಸಿದ್ದ ಉಳಿತಾಯದ ಹಣವಾದ 3.4 ಕೋಟಿ ರೂಪಾಯಿ ಮೊತ್ತವನ್ನು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ವೈದ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ, ಜವರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತೇನೆ ಎಂದು ಪ್ರಮಾಣ ಮಾಡಿದ್ದ ಆಕೆ, ಎಲ್ಲಿಯೂ ಕೂಡ ತಮ್ಮ ಜೀವಮಾನದ ಉಳಿತಾಯದ ಹಣವನ್ನು ಈ ರೀತಿಯಾಗಿ ದಾನ ಮಾಡುತ್ತೇನೆ ಎಂದು ಹೇಳಿಕೊಂಡಿರಲಿಲ್ಲ. ಆದರೆ, ಆಕೆಯ ಸ್ಫೂರ್ತಿದಾಯಕ ನಿರ್ಧಾರ ಅಜರಾಮರವಾಗಿ ಉಳಿಯಲಿದೆ.

100ನೇ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ರೆಸಾರ್ಟ್‌ನಲ್ಲಿ, ಐಷಾರಾಮಿ ಗಿಫ್ಟ್‌ಗಳನ್ನು ಪಡೆಯುವ ಮೂಲಕ ಆಕೆ ಆಚರಿಸಿಕೊಳ್ಳಬಹುದಿತ್ತು. ಆದರೆ, ಇದ್ಯಾವುದನ್ನೂ ಒಪ್ಪದ ಆಕೆ, ತನ್ನ ಮಾಜಿ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ದೇಶದ ಪ್ರಖ್ಯಾತ ಪ್ರಸೂತಿ ತಜ್ಞರಾಗಿರುವ ವೈದ್ಯರ ಸಹಾಯದಿಂದ ಉಳಿತಾಯದ ಹಣವನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಅವರದ್ದು ಇದರಲ್ಲಿ ಒಂದೇ ಒಂದು ಷರತ್ತು ಏನೆಂದರೆ, ಈ ಮೊತ್ತವನ್ನು ಮಹಿಳಾ ಕ್ಯಾನ್ಸರ್‌ ರೋಗಿಗಳ ಉತ್ತಮ ಚಿಕಿತ್ಸೆಗಾಗಿ ಬಳಸಿಕೊಳ್ಳಬೇಕು ಅನ್ನೋದು.

ಏಮ್ಸ್‌ ಭುವನೇಶ್ವರಕ್ಕೆ ಆಕೆ ಬರೆದು ಸಹಿ ಹಾಕಿದ್ದ ಸರಳವಾದ ಪತ್ರಕ್ಕೆ, ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜು ಒಪ್ಪಿಗೆ ನೀಡಿ ಕೊಟ್ಟಿರುವ ಪತ್ರವೇ ಈಗ ಲಕ್ಷ್ಮೀಬಾಯಿ ಅವರ ಜನ್ಮದಿನಕ್ಕೆ ಉಡುಗೊರೆಯಾಗಿದೆ.

ತಾನು ಮಾಡಿದ್ದ ನಿರ್ಧಾರವನ್ನು ಅವರು ಗುಟ್ಟಾಗಿಯೇ ಇಡಲು ಬಯಸಿದ್ದರು. ಡಿಸೆಂಬರ್‌ 5 ರಂದು ಜನ್ಮದಿನದ ವೇಳೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೈನಾಕಾಲಜಿ ಹಾಗೂ ಓಂಕೋಲಜಿ ರೋಗಿಗಳಿಗೆ ಉಡುಗೊರೆ ನೀಡಲು ಬಯಸಿದ್ದರು. ಆದರೆ, ಅವರ ಒಳ್ಳೆಯ ಕೆಲಸ ವೈದ್ಯಕೀಯ ಸಿಬ್ಬಂದಿಗಳ ನಡುವೆ ಹಂತ ಹಂತವಾಗಿ ತಲುಪಿ, ಆಕೆ ಬರೆದಿದ್ದ ಪತ್ರ ವೈರಲ್‌ ಆಗಿದ್ದರಿಂದ ಅವರ ನಿಸ್ವಾರ್ಥ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಒಡಿಶಾ ರಾಜ್ಯದ ಆರಂಭಿಕ ಸ್ತ್ರೀರೋಗ ತಜ್ಞರಲ್ಲಿ ಪ್ರೊಫೆಸರ್‌ ಡಾ.ಕೆ.ಲಕ್ಷ್ಮೀಬಾಯಿ ಅವರು ಕೂಡ ಒಬ್ಬರು. 'ಈ ಹಣದಲ್ಲಿ ಮಹಿಳಾ ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸಾ ಕೇಂದ್ರವನ್ನು ನಿರ್ಮಾಣವಾಗಲಿದೆ. ನಾನು ಹೋದ ನಂತರವೂ, ನನ್ನ ಕೆಲಸವು ಇವರನ್ನು ಗುಣಮುಖವಾಗಿಸಬೇಕು' ಎಂದು ಅವರು ಹೇಳಿದ್ದಾರೆ.

1926 ಡಿಸೆಂಬರ್‌ 5 ರಂದು ಬೆರ್ಹಾಂಪುರದಲ್ಲಿ ಜನಿಸಿದ ಡಾ.ಲಕ್ಷ್ಮೀಬಾಯಿ, ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಈ ಕಾಲೇಜಿನ ಮೊಟ್ಟಮೊದಲ (1945-1950) ಎಂಬಿಬಿಎಸ್ ಬ್ಯಾಚ್‌ನ ವಿದ್ಯಾರ್ಥಿನಿಯಾಗಿದ್ದರು. ಅದಾದ ಬಳಿಕ 1958 ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿನಿಂದ ಡಿಜಿಒ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಡಿಪ್ಲೊಮಾ) ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿ ಪದವಿ ಪಡೆದರು.

ಅವರ ವೈದ್ಯಕೀಯ ವೃತ್ತಿಜೀವನವು 1950 ರಲ್ಲಿ ಒಡಿಶಾದ ಸುಂದರಗಢ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭವಾಯಿತು ಮತ್ತು ಅಂತಿಮವಾಗಿ ಅವರು 1986 ರಲ್ಲಿ ಇಲ್ಲಿನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ನಿವೃತ್ತರಾದರು.

ಸನ್ಮಾನಿಸಿದ್ದ ಅಂದಿನ ಪ್ರಧಾನಿ ನೆಹರು

ಯುನೈಟೆಡ್ ಕಿಂಗ್‌ಡಮ್‌ನಿಂದ ಕುಟುಂಬ ಯೋಜನೆಗಾಗಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ ಪಡೆದ ಮೊದಲ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಕ್ಕಾಗಿ ಆಗಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಕೂಡ ಇವರಿಗೆ ಸನ್ಮಾನ ಮಾಡಿದ್ದರು. ನಂತರ ಡಾ. ಲಕ್ಷ್ಮಿ ಬಾಯಿ ಭಾರತದಲ್ಲಿ ಈ ಪ್ರಕ್ರಿಯೆಯ ಮೂಲಕ ನೂರಾರು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದರು.

ದಶಕಗಳಲ್ಲಿ, ಅವರು ಸಾವಿರಾರು ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದು, ಲೆಕ್ಕವಿಲ್ಲದಷ್ಟು ತಾಯಂದಿರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಲು ಸಹಾಯ ಮಾಡಿದರು ಮತ್ತು ಬಡವರು ಮತ್ತು ಅಸಹಾಯಕರಿಗೆ ಉಚಿತ ಆರೈಕೆಯನ್ನು ಮಾಡಿದ್ದಾರೆ. ತಮ್ಮ 100ನೇ ಜನ್ಮದಿನದ ಅಂಚಿನಲ್ಲಿರುವ ಆಕೆ, ಬೆರ್ಹಾಂಪುರದ ಬಾಬಾನಗರದ ಸಾಧಾರಣ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇದು ದೇಣಿಗೆಯಲ್ಲ ಎಂದಿರುವ ಡಾ.ಲಕ್ಷ್ಮೀಬಾಯಿ

ಆಸ್ಪತ್ರೆಗೆ ದೇಣಿಗೆಯ ಎಲ್ಲಾ ಔಪಚಾರಿಕ ದಾಖಲೆಗಳು ಈಗಾಗಲೇ ಪೂರ್ಣಗೊಂಡಿವೆ. "ಈ ನಿಧಿಯನ್ನು ಮಹಿಳೆಯರ ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆಗಾಗಿ ಮಾತ್ರ ಬಳಸಬೇಕು. ಇದು ದೇಣಿಗೆಯಲ್ಲ, ಆದರೆ ನಾನು ಬದುಕುವುದನ್ನು ನಿಲ್ಲಿಸಿದ ನಂತರವೂ ನನ್ನ ಜೀವನದ ಧ್ಯೇಯದ ಮುಂದುವರಿಕೆಯಾಗಿದೆ" ಎಂದು ಅವರು ಹೇಳಿದರು.

ಈ ಪ್ರಕ್ರಿಯೆಲ್ಲಿ ಅವರಿಗೆ ಅವರ ಮಾಜಿ ವಿದ್ಯಾರ್ಥಿಗಳಾದ ಹಿರಿಯ ಪ್ರಸೂತಿ ತಜ್ಞರಾದ ಡಾ. ಪಿ ಭಾರತಿ ಹಾಗೂ ಡಾ. ಭಾರತಿ ಮಿಶ್ರಾ ಸಹಾಯ ಮಾಡಿದ್ದಾರೆ. ಆಕೆ ತಮ್ಮ ಜೀವಿತದ ಎಲ್ಲಾ ಹಣವನ್ನು ದಾನ ಮಾಡಲು ನಿರ್ಧಾರ ಮಾಡಿದ್ದೇಕೆ ಎಂದು ಇವರನ್ನು ಪ್ರಶ್ನಿಸಿದಾಗ, 'ಈ ಎಲ್ಲಾ ಹಣವನ್ನು ನಾನು ಜನರಿಂದ ಗಳಿಸಿದ್ದು, ಈ ಹಣ ಈಗ ಅವರಿಗೆ ಹೋಗಬೇಕು. ಅದು ಕೂಡ ಮೌನವಾಗಿ ಎಲ್ಲವನ್ನೂ ತಾಳಿಕೊಂಡಿರುವ ಮಹಿಳೆಯರಿಗೆ ಸಲ್ಲಬೇಕು ಎಂದು ಹೇಳಿದ್ದರು' ಎಂದಿದ್ದಾರೆ.ಡಿಸೆಂಬರ್‌ 5 ರಂದು ಅವರ ತಮ್ಮ ದೇಣಿಯನ್ನು ಔಪಚಾರಿಕವಾಗಿ ಏಮ್ಸ್‌ಗೆ ಹಸ್ತಾಂತರ ಮಾಡಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ