ಸರ್ಕಾರಿ ಆಸ್ಪತ್ರೆಗೆ ಬೆಂಕಿ: 10 ನವಜಾತ ಶಿಶುಗಳ ದಾರುಣ ಸಾವು!

By Suvarna News  |  First Published Jan 10, 2021, 7:31 AM IST

ಮಹಾರಾಷ್ಟ ಸರ್ಕಾರಿ ಆಸ್ಪತ್ರೆಗೆ ಬೆಂಕಿ| 10 ನವಜಾತ ಶಿಶುಗಳ ದಾರುಣ ಸಾವು!| ಶಾರ್ಟ್‌ ಸರ್ಕಿಟ್‌ನಿಂದ ಅವಘಡ| ಮೃತ ಮಕ್ಕಳ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ| ಇದು ಹೃದಯ ಕಲಕುವ ಘಟನೆ: ಮೋದಿ ಸಂತಾಪ| ತನಿಖೆಗೆ ಉದ್ಧವ್‌ ಠಾಕ್ರೆ ಆದೇಶ


ಭಂಡಾರ (ಜ.10)): ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ನವಜಾತ ಶಿಶುಗಳ ಆರೈಕೆ ಕೇಂದ್ರದಲ್ಲಿ ಶನಿವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು ಸಾವನ್ನಪ್ಪಿವೆ.

ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಕೇಂದ್ರದಲ್ಲಿ ನಸುಕಿನ ಜಾವ 1.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟಕದಲ್ಲಿ ಇದ್ದ 17 ಶಿಶುಗಳ ಪೈಕಿ 3 ಶಿಶುಗಳು ಸುಟ್ಟಗಾಯಗಳಿಂದ ಹಾಗೂ 7 ಶಿಶು ಉಸಿರುಗಟ್ಟಿಸಾವನ್ನಪ್ಪಿದ್ದು, 7 ಶಿಶುಗಳನ್ನು ರಕ್ಷಿಸಲಾಗಿದೆ. ಮೃತ ಶಿಶುಗಳು ಒಂದರಿಂದ ಮೂರು ತಿಂಗಳ ಒಳಗಿನವುಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

Tap to resize

Latest Videos

ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆಸ್ಪತ್ರೆಯ ವಾರ್ಡ್‌ನಲ್ಲಿ ಉಂಟಾದ ಶಾರ್ಟ್‌ ಸಕ್ರ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಏರ್‌ ಕಂಡೀಷನರ್‌ನಲ್ಲಿ ಉಂಟಾದ ಬೆಂಕಿ ಸಂಪೂರ್ಣ ಕೊಠಡಿಗೆ ಆವರಿಸಿಕೊಂಡಿದ್ದರಿಂದ ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಆಸ್ಪತ್ರೆಯಲ್ಲಿನ ವಿದ್ಯುತ್‌ ವ್ಯವಸ್ಥೆ ಸರಿಯಿಲ್ಲವೆಂದು ಮೊದಲೇ ಸುಳಿವು ಇದ್ದರೂ ಅದರ ರಿಪೇರಿಗೆ ಮುಂದಾಗದಿರುವುದೂ ಘಟನೆಗೆ ಕಾರಣ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ದುಃಖ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ಮೃತ ಶಿಶುಗಳ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ ಭಂಡಾರ ಆಸ್ಪತ್ರೆಯಲ್ಲಿ 10 ನವಜಾತ ಶಿಶುಗಳ ಸಾವಿನ ಕುರಿತಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ 48 ಗಂಟೆಗಳ ಒಳಗಾಗಿ ವರದಿಯನ್ನು ನೀಡುವಂತೆ ಮಕ್ಕಳ ಹಕ್ಕುಗಳ ಅತ್ಯುನ್ನತ ಸಂಸ್ಥೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌) ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದೆ.

ಆಗಿದ್ದೇನು?:

ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ನಸುಕಿನ 1.30ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ನರ್ಸ್‌ವೊಬ್ಬರು ವೈದ್ಯರು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೇವಲ ಐದು ನಿಮಿಷದಲ್ಲಿ ಬೆಂಕಿ ಹಾಗೂ ದಟ್ಟಹೊಗೆ ಇಡೀ ಘಟಕವನ್ನು ಆವರಿಸಿಕೊಂಡಿದ್ದರಿಂದ 10 ನವಜಾತ ಶಿಶುಗಳು ಸಾವನ್ನಪ್ಪಿವೆ.

ಮೋದಿ ಆಘಾತ:

ಘಟನೆಯ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಭಂಡಾರದಲ್ಲಿ ನಡೆದ ಹೃದಯ ಕದಡುವ ಘಟನೆಯಲ್ಲಿ ಪುಟ್ಟಮಕ್ಕಳ ಪ್ರಾಣವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಮೋದಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆಯಿಂದ ಉಳಿಯಿತು 7 ಶಿಶುಗಳ ಪ್ರಾಣ

ಆಸ್ಪತ್ರೆಯ ನವಜಾತ ಶಿಶುಗಳ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರಿಂದ 7 ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ. ರಕ್ಷಣಾ ಸಿಬ್ಬಂದಿ ತಕ್ಷಣವೇ ಕಿಟಕಿ- ಬಾಗಿಲುಗಳನ್ನು ತೆರೆದು ಏಣಿಯ ಮೂಲಕ ಶಿಶುಗಳನ್ನು ಹೊರಗೆ ತಂದಿದ್ದಾರೆ.

click me!