One Rupee Doctor: ಒಂದು ರೂ.ಗೆ ಚಿಕಿತ್ಸೆ ಕೊಡುವುದಲ್ಲದೇ ಗ್ರಾಮದಲ್ಲಿ ಕ್ರಾಂತಿ ಮೂಡಿಸಿದ ವೈದ್ಯ ದಂಪತಿ ಸ್ಟೋರಿ ಇದು!

Published : Jun 07, 2025, 05:48 PM IST
Dr Ravindra and Smita Kolhes

ಸಾರಾಂಶ

ಒಮ್ಮೆ ಮಾತನಾಡಿಸಿದರೆ ಸಹಸ್ರಾರು ರೂಪಾಯಿ ಪಡೆಯುವ ವೈದ್ಯರ ನಡುವೆ ಗ್ರಾಮದಲ್ಲಿ ಒಂದು ರೂ.ಗೆ ಚಿಕಿತ್ಸೆ ನೀಡುವುದೂ ಅಲ್ಲದೇ ಇಡೀ ಗ್ರಾಮದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ವೈದ್ಯ ದಂಪತಿಯ ಸ್ಟೋರಿ ಕೇಳಿ...

ವೈದ್ಯರಾಗುವ ಕನಸು ಕಾಣುವ ಬಹುತೇಕ ಎಲ್ಲರೂ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿ ಕೋಟ್ಯಧೀಶ್ವರರಾಗುವ ಕನಸೇ ಕಾಣುತ್ತಿರುತ್ತಾರೆ. ಬಡವರ ಸೇವೆಯೇ ನಮ್ಮ ಗುರಿ ಎಂದು ಓದುವ ಸಮಯದಲ್ಲಿ ಶಪಥ ಮಾಡುವ ವಿದ್ಯಾರ್ಥಿಗಳೂ ಮುಂದೆ ಪದವಿ ಪಡೆಯುತ್ತಿದ್ದಂತೆಯೇ ದುಡ್ಡಿನ ಹಿಂದೆ ಬೆನ್ನತ್ತಿ ಹೋಗುವುದು ಹೊಸ ವಿಷಯವೇನಲ್ಲ. ವೈದ್ಯ ಪದವಿ ಪಡೆಯಲು ಕೋಟಿ ಕೋಟಿ ಖರ್ಚು ಮಾಡುವವರು, ನೂರಾರು ಕೋಟಿ ರೂಪಾಯಿ ಹಿಂದೆ ಬೀಳುವುದೂ ಅತಿಶಯೋಕ್ತಿಯ ವಿಷಯವೂ ಅಲ್ಲ. ಆದರೆ ಇವುಗಳ ನಡುವೆಯೇ, ಸಮಾಜದ ಸೇವೆಗೆ ಜೀವನವನ್ನು ಮುಡುಪಾಗಿಡುವ, ಬಡವರ ಮೇಲೆ ಕಾಳಜಿ ತೋರುತ್ತಾ ಅವರ ಆರೈಕೆ ಮಾಡುವ, ದುಡ್ಡಿನ ಹಿಂದೆ ಹೋಗದೇ ನಿಜವಾದ ಸೇವೆ ಸಲ್ಲಿಸುವವರೂ ಇಲ್ಲವೆಂದೇನಲ್ಲ. ಅಂಥ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ಈ ಒಂದು ರೂಪಾಯಿ ವೈದ್ಯ ಮಹಾರಾಷ್ಟ್ರದ ಡಾ. ರವೀಂದ್ರ ಕೊಲ್ಹೆ.

1980 ರ ದಶಕದಲ್ಲಿ, ಹೆಚ್ಚಿನ ಯುವ ವೈದ್ಯರು ದೊಡ್ಡ ಆಸ್ಪತ್ರೆ ಕೆಲಸಗಳನ್ನು ಬೆನ್ನಟ್ಟುತ್ತಿದ್ದಾಗ, ಡಾ. ರವೀಂದ್ರ ಕೊಲ್ಹೆ ಅಸಾಮಾನ್ಯ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರು ಮಹಾರಾಷ್ಟ್ರದ ದೂರದ ಬುಡಕಟ್ಟು ಅರಣ್ಯ ಪ್ರದೇಶವಾದ ಮೆಲ್ಘಾಟ್‌ಗೆ ಹೋದರು, ಅಲ್ಲಿ ರಸ್ತೆಗಳಿರಲಿಲ್ಲ, ವಿದ್ಯುತ್ ಕೂಡ ಇರಲಿಲ್ಲ ಇನ್ನು ವೈದ್ಯರ ಮಾತು ಬಲು ದೂರ. ಅಂಥ ಸಂದರ್ಭದಲ್ಲಿ ಕೇವಲ ಒಂದು ರೂಪಾಯಿ ಪಡೆದು ಜನರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಅವರಿಗೆ ಸಾಥ್​ ನೀಡಿದವರು ಡಾ. ಸ್ಮಿತಾ ಕೊಲ್ಹೆ. ಅವರು ತಮ್ಮ ನಗರ ಜೀವನವನ್ನು ತೊರೆದು ಅವರ ಪಕ್ಕದಲ್ಲಿ ಕೆಲಸ ಮಾಡಲು ಹೋದರು. ಬಡವರ ಸೇವೆಯಲ್ಲಿಯೇ ತೊಡಗಿದರು.

ಆದರೆ ಪುಕ್ಕಟೆ ಏನಾದರೂ ಕೆಲಸ ಮಾಡಿಕೊಡುತ್ತಾರೆ ಎಂದರೆ ಜನರು ನಂಬುವುದಾದರೂ ಹೇಗೆ? ಇವರಿಗು ಮೊದಲು ಅದೇ ರೀತಿ ಅನುಭವವಾಯಿತು. ಅದರಲ್ಲಿಯೇ ಓರ್ವ ಮಹಿಳೆ ವೈದ್ಯೆಯಾಗಲು ಸಾಧ್ಯವೇ ಎನ್ನುವುದು ಆ ಗ್ರಾಮಸ್ಥರಿಗೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಡಾ.ಸ್ಮಿತಾ ಅವರನ್ನು ಗ್ರಾಮಸ್ಥರು ನಂಬಲೇ ಇಲ್ಲ. ಮಹಿಳೆ ಡಾಕ್ಟರ್​ ಆಗುವುದು ಅಸಾಧ್ಯ ಎನ್ನುವುದು ಅವರ ವಾದವಾಗಿತ್ತು. ಇದೇ ಕಾರಣಕ್ಕೆ ಉಚಿವಾಗಿ ಸೇವೆ ಕೊಡುತ್ತೇವೆ ಎಂದರೂ ಗ್ರಾಮಸ್ಥರು 40 ಕಿ.ಮೀ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದರು. ಗರ್ಭಿಣಿಯರಂತೂ ಇವರ ಬಳಿ ಬರಲು ಹೆದರುತ್ತಿದ್ದರು. ಆದರೆ ಇದರ ಬಗ್ಗೆ ಚೆನ್ನಾಗಿ ಅರಿತಿದ್ದ ದಂಪತಿ ನಿಧಾನವಾಗಿ ಗ್ರಾಮಸ್ಥರ ಮನಸ್ಸನ್ನು ಒಲಿಸಿಕೊಂಡರು. ಅವರ ವಿಶ್ವಾಸ ಗಳಿಸಿದರು. ಒಟ್ಟಾಗಿ, ಅವರು ರೋಗಿಗಳಿಗೆ ಚಿಕಿತ್ಸೆ ನೀಡಿದರು, ಸರಿಯಾದ ಸೌಲಭ್ಯಗಳಿಲ್ಲದಿದ್ದರೂ ಇದ್ದ ಸೌಲಭ್ಯಗಳಲ್ಲಿಯೇ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದರು ಮತ್ತು ಆರೋಗ್ಯದ ಬಗ್ಗೆ ಹಾನಿಕಾರಕ ಮೂಢನಂಬಿಕೆಗಳ ವಿರುದ್ಧ ಕೂಡ ಅವರು ಹೋರಾಡಬೇಕಾಗಿ ಬಂತು. ಅದರಲ್ಲಿಯೂ ಕ್ರಮೇಣ ಯಶಸ್ವಿಯಾದರು.

ಈ ದಂಪತಿಯ ಸೇವೆ ಕೇವಲ ಆರೋಗ್ಯ ರಕ್ಷಣೆಗೆ ಸೀಮಿತವಾಗಲಿಲ್ಲ. ಅವರು ರಸ್ತೆಗಳನ್ನು ನಿರ್ಮಿಸಲು ಸಹಾಯ ಮಾಡಿದರು, ವಿದ್ಯುತ್ ತಂದರು ಮತ್ತು ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಿದರು. ಆಹಾರ ಮತ್ತು ಶುದ್ಧ ನೀರು ಪ್ರತಿ ಮನೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅವರು ಕೆಲಸ ಮಾಡಿದರು. ಗ್ರಾಮಸ್ಥರು ಕೃಷಿಯಲ್ಲಿ ಸಹಾಯ ಕೇಳಿದಾಗ, ಅವರು ಕೃಷಿಯನ್ನು ಕಲಿತರು, ಶಿಲೀಂಧ್ರ-ನಿರೋಧಕ ಬೀಜವನ್ನು ಅಭಿವೃದ್ಧಿಪಡಿಸಿದರು ಮತ್ತು ಮಾದರಿಯಾಗಿ ತಮ್ಮನ್ನು ತಾವು ಕೃಷಿ ಮಾಡಲು ಪ್ರಾರಂಭಿಸಿದರು. ಅವರ ಹಿರಿಯ ಮಗ ರೋಹಿತ್ ಒಬ್ಬ ರೈತನಾಗಲು ಆಯ್ಕೆ ಮಾಡಿಕೊಂಡರು. ಇದೀಗ ಅವರು ಓರ್ವ ಎಂಜಿನಿಯರ್​ಗಿಂತಲೂ ಕೃಷಿಯಲ್ಲಿಯೇ ಹೆಚ್ಚು ಗಳಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರ ಕಿರಿಯ ಮಗ ರಾಮ್ ಅಕೋಲಾದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ ಮತ್ತು ಶಸ್ತ್ರಚಿಕಿತ್ಸಕನಾಗುವ ಕನಸು ಕಾಣುತ್ತಿದ್ದಾನೆ.

34 ವರ್ಷಗಳಲ್ಲಿ, ಕೊಲ್ಹೆಸ್ ಜನರು ಆಸ್ಪತ್ರೆಗಿಂತ ಹೆಚ್ಚಿನದನ್ನು ನಿರ್ಮಿಸಿದ್ದಾರೆ. ಅವರು ಇಡೀ ಪ್ರದೇಶಕ್ಕೆ ಉತ್ತಮ ಜೀವನವನ್ನು ನಿರ್ಮಿಸಿದ್ದಾರೆ. ಇವರ 34 ವರ್ಷಗಳ ಈ ಸೇವೆ 2019ರಲ್ಲಿ ಕೇಂದ್ರದ ಗಮನ ಸೆಳೆಯಿತು. ಅಲ್ಲಿಯವರೆಗೆ ಹೆಚ್ಚಾಗಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಸೀಮಿತವಾಗಿದ್ದ ಪದ್ಮ ಪ್ರಶಸ್ತಿಗಳು ಇಂಥ ನಿಸ್ವಾರ್ಥ ಸೇವಕರಿಗೆ ಸಿಗಲು ಆರಂಭವಾಗಿದ್ದರಿಂದ ಡಾ.ಕೊಲ್ಹೆ ಅವರಿಗೂ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತು. ಯಾವುದೇ ಪ್ರಶಸ್ತಿ, ಹಾರ ತುರಾಯಿ, ಸನ್ಮಾನಗಳಿಗೆ ಮೊರೆ ಹೋಗದೇ ಜೀವನವನ್ನು ಸವೆಸುತ್ತಿರುವ ಇಂಥ ವ್ಯಕ್ತಿಗಳು ಇಂದಿಗೂ ಇದ್ದಾರೆ ಎನ್ನುವುದೇ ಭಾಗ್ಯ ಎನ್ನುವಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!