ಲಾಕ್‌ಡೌನ್‌ ವೇಳೆ 1 ಕೋಟಿ ಕಾರ್ಮಿಕರು ತವರಿಗೆ!

By Suvarna NewsFirst Published Sep 16, 2020, 8:58 AM IST
Highlights

 ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಅದರ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿ ಮಾಡಿದ್ದ ಲಾಕ್‌ಡೌನ್‌| ಲಾಕ್‌ಡೌನ್‌ ವೇಳೆ 1 ಕೋಟಿ ಕಾರ್ಮಿಕರು ತವರಿಗೆ: ಕೇಂದ್ರ| ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ(ಸೆ.16): ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಅದರ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು, ಕಂಗೆಟ್ಟು ದೇಶಾದ್ಯಂತ ಸುಮಾರು 1.05 ಕೋಟಿ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ಮರಳಿದ್ದಾರೆ ಎಂದು ಸ್ವತಃ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವ ಸಂತೋಷ ಕುಮಾರ್‌, ದೇಶಾದ್ಯಂತ ಒಟ್ಟು 4 ಕೋಟಿ ವಲಸೆ ಕಾರ್ಮಿಕರಿದ್ದು ಕೊರೋನಾ ಲಾಕ್‌ಡೌನ್‌ನಿಂದಾಗಿ ಅವರಲ್ಲಿ ಶೇ.25ರಷ್ಟುಅಥವಾ 1.05 ಕೋಟಿ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ಮರಳಿದ್ದಾರೆ.

ಅದರಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ವಲಸೆ ಕಾರ್ಮಿಕರು ಅಂದರೆ 32.50 ಲಕ್ಷ ಕಾರ್ಮಿಕರು ಮರಳಿದ್ದರೆ, ಬಿಹಾರಕ್ಕೆ 15 ಲಕ್ಷ ಕಾರ್ಮಿಕರು, ಪಶ್ಚಿಮ ಬಂಗಾಳ, ರಾಜಸ್ಥಾನಕ್ಕೆ ತಲಾ 13.08 ಲಕ್ಷ ವಲಸೆ ಕಾರ್ಮಿಕರು ಮರಳಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಮಧ್ಯಪ್ರದೇಶಕ್ಕೆ 7.54 ಲಕ್ಷ ಕಾರ್ಮಿಕರು, ಜಾರ್ಖಂಡ್‌ಗೆ 5.30 ಲಕ್ಷ, ಪಂಜಾಬ್‌ಗೆ 5.16 ಲಕ್ಷ, ಅಸ್ಸಾಂ ರಾಜ್ಯಕ್ಕೆ 4.26 ಲಕ್ಷ, ಕೇರಳಕ್ಕೆ 3.11 ಲಕ್ಷ ವಲಸೆ ಕಾರ್ಮಿಕರು ಮರಳಿದ್ದಾರೆ. ಆದರೆ ಸರ್ಕಾರ ನೀಡಿರುವ ಈ ಮಾಹಿತಿಯಲ್ಲಿ ಒಡಿಶಾ, ಛತ್ತೀಸ್‌ಗಢ, ಉತ್ತರಾಖಂಡ, ಕರ್ನಾಟಕ, ಹಿಮಾಚಲ ಪ್ರದೇಶ, ದೆಹಲಿ, ಗೋವಾ ಮತ್ತಿತರ ರಾಜ್ಯಗಳ ವಲಸೆ ಕಾರ್ಮಿಕರ ವಿವರ ಇಲ್ಲ.

click me!